ಮಂಗಳೂರು: ಆನ್‌ಲೈನ್ ಮೂಲಕ 55 ಸಾವಿರ ರೂ. ಮೌಲ್ಯದ ಮೊಬೈಲ್ ಖರೀದಿಸಿ ಮೋಸ ಹೋಗಿದ್ದ ಗ್ರಾಹಕರೊಬ್ಬರಿಗೆ, ದ.ಕ. ಗ್ರಾಹಕ ವ್ಯಾಜ್ಯ ಪರಿಹಾರಗಳ ಆಯೋಗವು ನೀಡಿದ ಆದೇಶದಂತೆ ಅಸಲಿ ಮೊತ್ತದೊಂದಿಗೆ ಖರ್ಚುವೆಚ್ಚ ಸೇರಿ ಪರಿಹಾರ ಪಾವತಿಯಾಗಿದೆ. ಗ್ರಾಹಕರಿಗೆ ಅಳತೆ, ತೂಕ ಅಥವಾ ಸೇವೆಯಲ್ಲಿನ ವ್ಯತ್ಯಾಸದ ಕುರಿತಂತೆ ನ್ಯಾಯ ಒದಗಿಸುವ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ಇದೀಗ ಆನ್‌ಲೈನ್ ವಂಚನೆ ಪ್ರಕರಣಗಳನ್ನೂ ಕೈಗೆತ್ತಿಕೊಳ್ಳುತ್ತಿದೆ.
ಸುರತ್ಕಲ್ ಬಾಳದ ಎಂಆರ್‌ಪಿಎಲ್ ಸಮೀಪದ ನಿವಾಸಿ ಸಾಫ್ಟ್ವೇರ್ ಎಂಜಿನಿಯರ್ ಹರ್ಷ ಮೆಂಟೆ ಅವರು 2020ರ ಜೂನ್‌ನಲ್ಲಿ ಆನ್‌ಲೈನ್ ಸಂಸ್ಥೆ ಮೂಲಕ ಮೊಬೈಲ್ ಆರ್ಡರ್ ಮಾಡಿ ಹಣ ಪಾವತಿಸಿದ್ದರು. ಆದರೆ ಪಾರ್ಸೆಲ್‌ನಲ್ಲಿ ಕೇವಲ ಇಯರ್‌ಫೋನ್ ಮಾತ್ರ ಇದ್ದು, ಈ ಬಗ್ಗೆ ಸಂಸ್ಥೆಯ ಗಮನಕ್ಕೆ ತಂದಿದ್ದರು. 5 ದಿನಗಳಲ್ಲಿ ತನಿಖೆ ಮಾಡಿ ಮಾಹಿತಿ ನೀಡುವುದಾಗಿ ಹೇಳಿದ್ದರೂ ನಿರಂತರ ಸಂರ್ಪಕದ ಹೊರತಾಗಿಯೂ 6 ತಿಂಗಳವರೆಗೆ ಯಾವುದೇ ಸ್ಪಂದನೆ ಸಂಸ್ಥೆಯಿಂದ ದೊರಕಿರಲಿಲ್ಲ. ಇದಾಗಿ ಒಂದೂವರೆ ವರ್ಷದ ಅನಂತರ ಅಂದರೆ 2022ರ ಅಕ್ಟೋಬರ್‌ನಲ್ಲಿ ಗ್ರಾಹಕರು ಆಯೋಗಕ್ಕೆ ದೂರು ನೀಡಿದ್ದರು. ಆಯೋಗದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ 2023ರ ಜ. 11ರಂದು ಆದೇಶ ಹೊರಡಿಸಿ, ದೂರುದಾರ ಗ್ರಾಹಕರಿಗೆ, 55 ಸಾವಿರ ರೂ. ಹಾಗೂ ಅಕ್ಟೋಬರ್ 2022ರ 12ರಿಂದ ಅನ್ವಯವಾಗುವಂತೆ ಪಾವತಿಯ ದಿನಾಂಕದ ವರೆಗೆ ವಾರ್ಷಿಕ ಶೇ. 8ರ ಬಡ್ಡಿ ಹಾಗೂ ಖರ್ಚು ವೆಚ್ಚ ಸೇರಿ ಹೆಚ್ಚುವರಿ 15,000 ರೂ. ನೀಡುವಂತೆ ತಿಳಿಸಿತ್ತು. ಅದರಂತೆ ಇದೀಗ ಹರ್ಷ ಅವರಿಗೆ ಹಣ ಪಾವತಿಯಾಗಿದೆ.
ಉದಯವಾಣಿಯ ಜನವರಿ 27ರ ಸಂಚಿಕೆಯಲ್ಲಿ ಈ ಬಗ್ಗೆ ವಿಶೇಷ ವರದಿ ಪ್ರಕಟವಾಗಿತ್ತು.
ಆಯೋಗದ ಆದೇಶವಾಗಿ 1 ತಿಂಗಳು ಯಾವುದೇ ಪ್ರತಿಕ್ರಿಯೆ ಆನ್‌ಲೈನ್ ಸಂಸ್ಥೆಯಿಂದ ಇರಲಿಲ್ಲ. ಒಂದೂವರೆ ತಿಂಗಳ ಅನಂತರ ಆನ್‌ಲೈನ್ ಸಂಸ್ಥೆಯು ಪರವಾಗಿ ಥರ್ಡ್ ಪಾರ್ಟಿಯೊಂದು ಮೇಲ್ ಕಳುಹಿಸಿತ್ತು. ನಿಮಗೆ 72 ಸಾವಿರ ರೂ.ಗಳನ್ನು ಪಾವತಿಸುವಂತೆ ನಮಗೆ ಆದೇಶವಾಗಿದೆ. ನಿಮ್ಮ ಬ್ಯಾಂಕ್ ವಿವರ ಕಳುಹಿಸಿದರೆ ಸಂಪೂರ್ಣ ಮೊತ್ತ ಕಳುಹಿಸುವುದಾಗಿ ತಿಳಿಸಿದಂತೆ ಇದೀಗ ಹಣ ಖಾತೆಗೆ ಜಮಾ ಆಗಿದೆ. ಹಣ ಮರುಪಾವತಿಗಾಗಿ ಸಂಸ್ಥೆಗೆ ಸುಮಾರು ಒಂದು ವರ್ಷ ಗೋಗರೆದು ಕೊನೆಗೂ ನ್ಯಾಯ ದೊರಕಿಸಿದ್ದು ಆಯೋಗ. ಇಲ್ಲವಾದಲ್ಲಿ ಅಷ್ಟುದೊಡ್ಡ ಕಂಪೆನಿಯ ಜತೆ ಹೋರಾಟ ಮಾಡಿ ಕಳೆದುಕೊಂಡಿದ್ದ ಹಣವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.
– ಹರ್ಷ, ನೊಂದ ಗ್ರಾಹಕ