ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್
ಮಂಗಳೂರು: ಇನ್‌ಸ್ಟಾಗ್ರಾಂ ಖಾತೆಯ ಮೂಲಕ 90 ಸಾವಿರ ರೂ. ವಂಚನೆ ಮಾಡಿರುವ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಎ. 11ರಂದು ರಾತ್ರಿ ಇನ್‌ಸ್ಟಾ ಗ್ರಾಂ ಖಾತೆಯನ್ನು ನೋಡುತ್ತಿರುವ ಸಮಯ ಅವರ ಗೆಳೆಯನ ಖಾತೆಯಿಂದ “ರಿಸಿವ್ಡ್ ರುಪೀಸ್ 4,16,000 ಇನ್ ಯುವರ್ ಇನ್‌ಸ್ಟಾಗ್ರಾಂ ವಾಲೆಟ್’ ಎಂಬ ಪೋಸ್ಟ್ ಬಂದಿದೆ. ತತ್‌ಕ್ಷಣ ಅವರಿಗೆ “ಲಿಝಿ ಹೋಪರ್’ ಎನ್ನುವ ಖಾತೆಯಿಂದ ಸಂದೇಶಗಳು ಬರಲು ಆರಂಭಿಸಿದ್ದು, ಅದು ಗೆಳೆಯನ ಇನ್‌ಸ್ಟಾಗ್ರಾಂ ಖಾತೆ ಎಂದು ನಂಬಿ ಎ. 12ರಂದು 40,000 ರೂ. ಮತ್ತು 13ರಂದು ಕ್ಯಾಶ್ ವಿಡ್ರಾವಲ್ ಪಿನ್ ಫೀ ಎಂದು 50 ಸಾವಿರ ರೂ.ಯನ್ನು ವರ್ಗಾಯಿಸಿದ್ದಾರೆ. ಬಳಿಕ ಅದೇ ದಿನ ಇನ್ನೂ 70,000 ರೂ. ಹಣವನ್ನು ವರ್ಗಾಯಿಸಲು ತಿಳಿಸಿದ್ದು, ಈ ಬಗ್ಗೆ ಗೆಳೆಯನಿಗೆ ಕರೆ ಮಾಡಿದಾಗ ಆತ “ತನ್ನ ಖಾತೆಯು ಸುಮಾರು 6 ತಿಂಗಳಿನಿಂದ ಹ್ಯಾಕ್ ಆಗಿರುವುದಾಗಿ’ ತಿಳಿಸಿದ್ದಾನೆ.
ಯಾರೋ ಅಪರಿಚಿತರು ಪಿರ್ಯಾದಿದಾರರ ಗೆಳೆಯನ ಇನ್‌ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿ ಅದರಲ್ಲಿ ಬಿಟ್‌ಕಾಯಿನ್ ಜಾಹೀರಾತು ಕಳುಹಿಸಿ 90 ಸಾವಿರ ರೂ. ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ. ವಂಚಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬ್ಯಾಂಕ್‌ನವರೆಂದು ಕರೆ
ಮಂಗಳೂರು: ಬ್ಯಾಂಕ್‌ನವರೆಂದು ಕರೆ ಮಾಡಿ ಎನಿ ಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿಸಿ ವಂಚಿಸಿರುವ ಘಟನೆ ನಡೆದಿದೆ.
ದೂರುದಾರ ವ್ಯಕ್ತಿ ಕ್ರೆಡಿಟ್ ಕಾರ್ಡ್ ಹೊಂದಿದ್ದು ಜ. 31ರಂದು ಅವರು ಕ್ರೆಡಿಟ್ ಕಾರ್ಡ್‌ನ ಸ್ಟೇಟ್‌ಮೆಂಟ್ ಮಾಹಿತಿ ಪಡೆಯುವ ಉದ್ದೇಶದಿಂದ ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿದರು. ಆಗ ಅವರಿಗೆ 18601207777 ಮೊಬೈಲ್ ನಂಬರ್ ಸಿಕ್ಕಿತ್ತು. ಅವರು ಅದಕ್ಕೆ ಕರೆ ಮಾಡಿ ವಿಚಾರಿಸಿದ್ದರು. ಅನಂತರ ಅವರಿಗೆ ಅಪರಿಚಿತನೋರ್ವ 8910911818 ಸಂಖ್ಯೆಯಿಂದ ಕರೆ ಮಾಡಿ ತಾನು ಐಸಿಐಸಿಐ ಬ್ಯಾಂಕ್‌ನಿಂದ ಕರೆ ಮಾಡಿರುವುದಾಗಿ ತಿಳಿಸಿ ಕ್ರೆಡಿಟ್ ಕಾರ್ಡ್‌ನ ಮಾಹಿತಿ ಪಡೆಯಲು ಮೊಬೈಲ್‌ನಲ್ಲಿ Any Dessk ಅಟಟ ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದ. ಅದನ್ನು ನಂಬಿದ ದೂರುದಾರರು ಡೌನ್‌ಲೋಡ್ ಮಾಡಿದರು. ಆ ಕೂಡಲೇ ಅವರ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಬಂದರು ಶಾಖೆಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 83,999 ರೂ. ಹಣ ವರ್ಗಾವಣೆಗೊಂಡಿದೆ. ಈ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.