ವಿಧಾನ ಪರಿಷತ್ತು: ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಕಣ್ಣಿನ ಮೇಲೆ ಪರಿಣಾಮ ಬೀರುತ್ತಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಜತೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ ಪೋಷಕರಿಂದ ದೂರು ಬರುತ್ತಿವೆ. ಅದು ಖಾಸಗಿ ಶಾಲೆಗಳು ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಆನ್‌ಲೈನ್ ಶಿಕ್ಷಣ ಆರಂಭಿಸಿವೆ. ಆನ್‌ಲೈನ್ ಶಿಕ್ಷಣ ನಿಯಮ ಬಾಹಿರವಾಗಿ ನಡೆಯುತ್ತಿರುವ ಬಗ್ಗೆ ದೂರು ಹಾಕಿದರೆ, ಖಾಸಗಿ ಶಾಲೆಗಳು ಹೈಕೋರ್ಟ್‌ಗೆ ಹೋಗಿ ಮಧ್ಯಂತರ ತಡೆ ತರುತ್ತಾರೆ. ಹೀಗಾಗಿ ಇದಕ್ಕೊಂದು ಪರಿಹಾರ ಕೊಂಡುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುತ್ತದೆ ಎಂದರು.
ಕೋವಿಡ್ ನಿಂದ ಮಕ್ಕಳ ಕಲಿಕೆಗಾಗಿ ತಜ್ಞರ ಸಮಿತಿ ರಚಿಸಿದ್ದೆವು. ಆನ್‌ಲೈನ್ ಶಿಕ್ಷಣಕ್ಕೆ ಕಡಿವಾಣಕ್ಕೆ ಬೇಕಾದ ಕ್ರಮ ತೆಗೆದುಕೊಂಡಿದ್ದವು, ಆದರೆ, ಹೈಕೋರ್ಟ್ ಆನ್‌ಲೈನ್ ಶಿಕ್ಷಣ ಮಕ್ಕಳ ಹಕ್ಕು ಎಂದು ಹೇಳಿದ್ದರಿಂದ ಸರ್ಕಾರ ಆನ್‌ಲೈನ್ ಶಿಕ್ಷಣಕ್ಕೆ ಸಮಯ ನಿಗದಿ ಮಾಡಿದೆ. ಆದರೂ ಕೆಲವರು ಇದನ್ನು ಮೀರಿ ಆನ್‌ಲೈನ್ ಶಿಕ್ಷಣ ನೀಡುತ್ತಿವೆ. ಇದರಿಂದ ಮಕ್ಕಳ ಕಣ್ಣಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ :ಸೆಕ್ಯೂರಿಟಿ ಗಾರ್ಡ್ ಟು ಸಾಫ್ಟ್ ವೇರ್ ಎಂಜನೀಯರ್: ಇದು ಅರ್ಧಕ್ಕೆ ಶಾಲೆ ಬಿಟ್ಟವನ ಕಥೆ
ಯು.ಬಿ. ವೆಂಕಟೇಶ್ ಮಾತನಾಡಿ, ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಕಣ್ಣಿನ ಮೇಲೆ ಪರಿಣಾಮ ಬೀರಿದೆ. ಕಣ್ಣು ಮಿಟುಕಿಸಲೂ ಆಗದಂತಹ ಸ್ಥಿತಿ ಇದೆ. ಹಲವಾರು ಮಂದಿ ಪೋಷಕರು ತಮ್ಮ ಮಕ್ಕಳ ಕಣ್ಣಿನ ಬಗ್ಗೆ ಪರೀಕ್ಷೆ ಮಾಡಿಸುತ್ತಿದ್ದಾರೆ. ಆನ್‌ಲೈನ್ ಶಿಕ್ಷಣದ ವ್ಯವಸ್ಥೆಯಲ್ಲಿ ಮಕ್ಕಳ ಕಣ್ಣಿನ ಬಗ್ಗೆಯೂ ಸರ್ಕಾರ ಗಮನ ನೀಡಲಿ. ತಾಲೂಕು ಮಟ್ಟದಲ್ಲಿ ಕಣ್ಣಿನ ಪರೀಕ್ಷೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿ ಎಂದು ಆಗ್ರಹಿಸಿದರು.