Advertisement

ಆನ್‌ಲೈನ್‌ ಶಿಕ್ಷಣ ನಿಷೇಧ ; 10ನೇ ತರಗತಿಯವರೆಗೂ ವಿಸ್ತರಿಸಿ

07:15 AM Jun 12, 2020 | mahesh |

1ರಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಡೆಸುವಂತಿಲ್ಲ ಎಂದು ಸರಕಾರ ತೀರ್ಮಾನ ತೆಗೆದುಕೊಂಡಿದೆ. ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢ
ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು “1ರಿಂದ 5ರವರೆಗೆ ಆನ್‌ಲೈನ್‌ ಶಿಕ್ಷಣ ಇಲ್ಲ’ ಎಂದು ಹೇಳಿದ್ದರ ಬೆನ್ನಲ್ಲೇ ಈಗ ಈ ನಿಯಮವನ್ನು ಏಳನೆಯ ತರಗತಿಯವರೆಗೆ ವಿಸ್ತರಿಸುವ ಬಗ್ಗೆ ಗೊಂದಲ ಏರ್ಪಟ್ಟಿದೆ. ಸಚಿವ ಸಂಪುಟ ಸಭೆಯಲ್ಲಿ ಏಳನೆಯ ತರಗತಿಯವರೆಗೆ ಆನ್‌ಲೈನ್‌ ಪಾಠ ನಿಷೇಧವನ್ನು ವಿಸ್ತರಿಸಬೇಕೆಂಬ ಚರ್ಚೆ ನಡೆದಿದ್ದಾಗಿ ವರದಿಯಾಗಿದೆ. ವಿದ್ಯಾರ್ಥಿಗಳಿಗೆ ಮಾರಕವಾಗಬಲ್ಲ ಆನ್‌ಲೈನ್‌ ಪಾಠವನ್ನು 10ನೇ ತರಗತಿ ಯವರೆಗೂ ವಿಸ್ತರಿಸಲಿ ಎನ್ನುವ ಸಲಹೆಯೂ ಕೇಳಿಬರುತ್ತಿದೆ.

Advertisement

ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಶಾಲೆ-ಕಾಲೇಜುಗಳು ಮುಚ್ಚಿವೆ. ಸದ್ಯಕ್ಕಂತೂ ಕೊರೊನಾಕ್ಕೆ ಲಸಿಕೆ ಹೊರಬರುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ. ಹೀಗಾಗಿ, ರೋಗ ದೂರವಾಗುವವರೆಗೂ ಶಾಲೆ-ಕಾಲೇಜುಗಳು ತೆರೆಯುವ ಸಮಯ ಸನ್ನಿಹಿತವಾಗುವುದಿಲ್ಲ. ಈ ಕಾರಣಕ್ಕಾಗಿಯೇ, ಶಿಕ್ಷಣ ಸಂಸ್ಥೆಗಳು ಮಕ್ಕ ಳನ್ನು ತಲುಪಲು ಆನ್‌ಲೈನ್‌ ಶಿಕ್ಷಣ ವೆಂಬ ಮಾರ್ಗವನ್ನು ಹುಡುಕಿ ಕೊಂಡಿವೆ. ಆದರೆ, ಕೆಲ ಹಣದಾಹಿ ಶಾಲೆಗಳು ಹೇಗೆ ಎಲ್‌ಕೆಜಿ-ಯುಕೆಜಿಯ ಮಕ್ಕಳಿಗೂ ಆನ್‌ಲೈನ್‌ ಶಿಕ್ಷಣ ಕೊಡುವ ನೆಪದಲ್ಲಿ ಗಂಟೆಗಟ್ಟಲೇ ಅನಗತ್ಯ ಪಾಠ ಮಾಡುವ, ಒತ್ತಡ ಹೇರುವ, ಪೋಷಕರಿಂದ ಹಣ ಕಬಳಿಸುವ ಮಾರ್ಗಕ್ಕೆ ಜೋತು ಬೀಳಲಾರಂಭಿಸಿದ್ದವು ಎನ್ನುವುದನ್ನು ನೋಡಿದ್ದೇವೆ. ಈ ಕಾರಣಕ್ಕಾಗಿಯೇ, ರಾಜ್ಯ ಸರಕಾರದ ಈ ನಿರ್ಣಯವು ಸ್ವಾಗತಾರ್ಹ. ಆದರೆ 8-10ನೇ ತರಗತಿಯ ವಿದ್ಯಾರ್ಥಿಗಳೂ ಅವರ ಕುಟುಂಬಗಳೂ ಇಂಥದ್ದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರಲ್ಲವೇ?

ನಮ್ಮಲ್ಲಿ ಎಲ್ಲರ ಮನೆಯಲ್ಲೂ ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌, ಅಂತರ್ಜಾಲ ಸಂಪರ್ಕ ಇರುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವವರಲ್ಲೂ ಅನೇಕರು ಆರ್ಥಿಕವಾಗಿ ದುರ್ಬಲವಾಗಿಯೇ ಇರುತ್ತಾರೆ. ಒಂದು ಮನೆಯಲ್ಲಿ ಇಬ್ಬರು ಮೂವರು ಮಕ್ಕಳಿದ್ದರೆ, ಅವರಿಗೆಲ್ಲ 4ಜಿ ಸಂಪರ್ಕವಿರುವ ಮೊಬೈಲ್‌ಗಳನ್ನು ತೆಗೆದುಕೊಡಲು ಸಾಧ್ಯವೇ? ಇತ್ತೀಚೆಗೆ ಕೇರಳದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಫೋನ್‌-ಟಿವಿ ಇಲ್ಲದೇ ಆನ್‌ಲೈನ್‌ ತರಗತಿಗಳನ್ನು ತಪ್ಪಿಸಿಕೊಂಡದ್ದಕ್ಕಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿತ್ತು. ಇಂಥದ್ದೇ ಘಟನೆ, ಪಂಜಾಬ್‌ನಲ್ಲೂ ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಇಂಥದ್ದೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಅನೇಕ ಕುಟುಂಬಗಳು ನಮ್ಮಲ್ಲಿಯೇ ಇವೆ. ಹಾಗೆಂದು, ಈ ವಿಷಯವನ್ನು ಋಣಾತ್ಮಕವಾಗಿ ಯೋಚಿಸಬಾರದು ಎನ್ನುವುದೇನೋ ಸರಿ ಆದರೆ ಯೋಚನೆ ತರ್ಕಬದ್ಧವಾಗಿ ಇರಬೇಕಲ್ಲವೇ?

ಆನ್‌ಲೈನ್‌ ತರಗತಿಗಳಿಂದ ಪ್ರಯೋಜನವಿಲ್ಲ ಎಂದು ಅರ್ಥವಲ್ಲ. ಆದರೆ, ಸದ್ಯದ ಜನರ ಪರಿಸ್ಥಿತಿಯನ್ನೂ, ವಿದ್ಯಾರ್ಥಿಗಳ ಪ್ರಸಕ್ತ ಮಾನಸಿಕ ಸ್ಥಿತಿಯನ್ನೂ ಪರಿಗಣಿಸಬೇಕಾದ ಅಗತ್ಯವಿದೆಯಲ್ಲವೇ? ಈ ಕಾರಣಕ್ಕಾಗಿಯೇ, ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಬೀಳದಂತೆ ನೋಡಿಕೊಳ್ಳಬೇಕು. ಆನ್‌ಲೈನ್‌ ತರಗತಿಯನ್ನು ನಡೆಸುವಂತಿಲ್ಲ ಎನ್ನುವ ನಿರ್ಣಯವು 10ನೇ ತರಗತಿಯವರೆಗೂ
ವಿಸ್ತರಣೆಯಾಗುವುದು ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next