Advertisement
ಬುಧವಾರ ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯ ಹಂಚಿಕೊಳ್ಳುವ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಣ ಮಂತ್ರಿಗೆ ಮಧು ಬಂಗಾರಪ್ಪಗೆ ಕನ್ನಡ ಬರಲ್ಲ ಎಂದು ಮಾತನಾಡಿದ್ದಾನೆ. ಇದನ್ನು ಕೇಳಿಸಿಕೊಂಡ ಸಚಿವ ಮಧು ಬಂಗಾರಪ್ಪ ಮೊದಲಿಗೆ ಏಯ್ ಯಾರೋ ಅವನೋ, ಏನೀಗ ಉರ್ದುವಿನಲ್ಲಿ ಮಾತಾಡ್ತಾ ಇದ್ದೀನಿ, ಟಿವಿಯವರು ಅದನ್ನೇ ಹಾಕೊಂಡು ಹೊಡಿತಾರೆ ಎಂದು ವಿಷಯವನ್ನು ತಮಾಷೆಯಾಗಿ ತೆಗೆದುಕೊಂಡು ಆ ಬಳಿಕ ಗರಂ ಆದ ಪ್ರಸಂಗವೂ ನಡೆಯಿತು.
ಯಾರು ಅದು ಕನ್ನಡ ಬರಲ್ಲ ಅಂತ ಹೇಳಿದ್ದು, ರೆಕಾರ್ಡ್ ಮಾಡಿ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಿ, ನಾಚಿಕೆ ಆಗಬೇಕು ಅವನಿಗೆ ಎಂದು ಯಾರು ಟೀಚರ್, ಬಿಇಒ ಯಾರು ಇದ್ದರೋ ಇದನ್ನು ಗಂಭೀರವಾಗಿ ಪರಿಗಣಿಸಿ ನೀವು ಅವನ ವಿರುದ್ಧ ಕ್ರಮ ಕೈಗೊಳ್ಳಿ, ಹಾಗೆ ಯಾರು ಹೇಳಿದ್ದು ಮಾಹಿತಿ ತೆಗೆದುಕೊಳ್ಳಿ. ಆತನನ್ನು ಸುಮ್ಮನೆ ಬಿಡಬೇಡಿ, ಏನು ಅಂತಾ ವಿಚಾರಿಸಿ ಕೇಳಿ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್‌ಗೆ ಸಚಿವ ಮಧು ಬಂಗಾರಪ್ಪ ಸೂಚನೆ ನೀಡಿದ್ದಾರೆ.
Related Articles
ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿ ಮೇಲೆ ಶಿಸ್ತು ಕ್ರಮ ಸೂಚಿಸಿರುವುದನ್ನು ಖಂಡಿಸಿ ವಿಪಕ್ಷ ಬಿಜೆಪಿಯು ʼಎಕ್ಸ್ʼ ನಲ್ಲಿ ವಿಡಿಯೋ ಪೋಸ್ಟ್ ಮಾಡಿ “ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ” ಇದು ಅಕ್ಷರಶಃ ನಮ್ಮ ಅವಿದ್ಯಾವಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಅನ್ವಯಿಸುತ್ತದೆ!!.
Advertisement
ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಮಧು ಬಂಗಾರಪ್ಪ ಅವರೆ ಹಿಂದೊಮ್ಮೆ ಹೇಳಿದ್ದರು, ಅದನ್ನೇ ವಿದ್ಯಾರ್ಥಿಯೊಬ್ಬ ನೆನಪಿಸಿದ ತಕ್ಷಣ, ಆ ವಿದ್ಯಾರ್ಥಿ ಸೇರಿದಂತೆ ಅಲ್ಲಿನ ಶಿಕ್ಷಕರು ಹಾಗೂ ಬಿಇಒ ಮೇಲೆ ಕ್ರಮ ಕೈಗೊಳ್ಳಿ ಎಂದು ಆದೇಶಿಸಿರುವುದು ನಿಜಕ್ಕೂ ಸ್ಟುಪಿಡ್!! ಕಾಂಗ್ರೆಸ್ಸಿಗರ ಈ ರೀತಿಯ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಪ್ರತಿಕ್ರಿಯಿಸಿ “ಕನ್ನಡವೇ ಬಾರದ ವ್ಯಕ್ತಿ ಶಿಕ್ಷಣ ಸಚಿವರಾಗಲೂ ಯೋಗ್ಯರೇ.? ಅವಿದ್ಯಾವಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕನ್ನಡ ಬರುವುದಿಲ್ಲ ಎನ್ನುವುದು ರಾಜ್ಯದ ಜನತೆಗೆ ತಿಳಿದಿರುವ ವಿಷಯ. ಈ ವಿಷಯವನ್ನು ಮತ್ತೊಮ್ಮೆ ಜನತೆಗೆ ತಿಳಿಸಿದ ಪುಟ್ಟ ಬಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ ಅವಿದ್ಯಾವಂತ ಶಿಕ್ಷಣ ಸಚಿವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.