Advertisement

ಸೇವೆಗಳು ಆನ್‌ಲೈನ್‌: ಎಆರ್‌ಟಿಒ ದೇವಿಕಾ

01:50 PM Apr 02, 2022 | Team Udayavani |

ಮಧುಗಿರಿ: ಸಾರಿಗೆ ಇಲಾಖೆಯಲ್ಲಿ ಜನಪರವಾದ ಯೋಜನೆಗಳು ಆರಂಭವಾಗಿದ್ದು, ಸಾರ್ವಜನಿಕರ 30 ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡಲು ಇಲಾಖೆ ಮುಂದಾಗಿದೆ ಎಂದು ಎಆರ್‌ಟಿಒ ದೇವಿಕಾ ತಿಳಿಸಿದ್ದಾರೆ.

Advertisement

ಪಟ್ಟಣದ ತಮ್ಮ ಕಚೇರಿಯಲ್ಲಿ ಬಸ್‌, ಕ್ಯಾಬ್‌ ಹಾಗೂ ಆಟೋ ಚಾಲಕರು, ಮಾಲೀಕರ ಸಭೆ ಕರೆದು ಮಾತನಾಡಿದ ಅವರು, ಕಳೆದ ತಿಂಗಳು 4 ಸೇವೆಗಳನ್ನು ಆನ್‌ಲೈನ್‌ ಮಾಡಿದ್ದು, ಹಳೆಯ ಯೋಜನೆಯಲ್ಲಿ 30 ಸೇವೆಗಳನ್ನು ಇಲಾಖೆ ಜನಪರವಾಗಿಸಿದೆ ಎಂದರು.

ಬಸ್‌ ಮೇಲೆ ಪ್ರಯಾಣಿಕರ ಸಾಗಾಟ ಮಾಡುವುದು ನಡೆದಿದ್ದು, ಚಾವಣಿ ತೆರವುಗೊಳಿಸಬೇಕೆಂದು ಮಾಲೀಕರಿಗೆ ಸೂಚಿಸಿದರು. ಆಟೋಗಳಲ್ಲಿಯೂ ಕೂಡ ಹೆಚ್ಚಿನ ಜನರನ್ನು ಸಾಗಣೆ ಮಾಡುವುದು ನಿಲ್ಲಿಸಬೇಕು ಎಂದರು.

ಇಲಾಖೆಯಿಂದ ಅನ್ಯಾಯ: ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ್‌ ಮಾತನಾಡಿ, ಸರ್ಕಾರದ ನಿಯಮ ಪಾಲಿಸಿ ಟ್ಯಾಕ್ಸ್‌ ಕಟ್ಟೋರು ನಾವು. ನಮಗೆ ಸಾರಿಗೆ ಇಲಾಖೆಯಿಂದ ಅನ್ಯಾಯವಾಗುತ್ತಿದೆ. ಸಮಯದ ಪರ್ಮಿಟ್‌ ಇಲ್ಲದಿದ್ದರೂ ಖಾಸಗಿ ವಾಹನದ ಜೊತೆ ಪೈಪೋಟಿಗೆ ಇಳಿಯುತ್ತಾರೆ. ಸಮಯದ ಹೊಂದಾಣಿಕೆಯ ಬಗ್ಗೆ ಅರಿವಿಲ್ಲದೆ ಸಾರಿಗೆ ಡಿಪೋ ಅಧಿಕಾರಿಗಳ ಎಡವಟ್ಟಿ ನಿಂದ 2 ಬಸ್‌ಗಳು ಇಲ್ಲದ ಕಾರಣ ಒಂದೇ ಬಸ್‌ ಬಂದಾಗ ಪಾವಗಡದ ಘಟನೆ ನಡೆದಿದೆ ಎಂದರು.

ಗ್ರಾಮೀಣಕ್ಕೆ ಸಂಚಾರ ಇಲ್ಲ: ಗ್ರಾಮಾಂತರ ಸಾರಿಗೆ ಎಂಬ ಹೆಸರಿದ್ದರೂ ಯಾರೂ ಗ್ರಾಮೀಣ ಭಾಗದಲ್ಲಿ ಬಸ್‌ ಓಡಿಸಲ್ಲ. ಉಪವಿಭಾಗದ ಶೇ.80 ಹಳ್ಳಿಗಳಿಗೆ ಈಗಲೂ ಸಾರಿಗೆ ಬಸ್‌ ಸಂಚಾರವಿಲ್ಲ. ಯಾವುದೇ ಅಪಘಾತವಾದರೂ ಖಾಸಗಿ ಬಸ್‌ಗಳ ಮೇಲೆ ಬರೆ ಎಳೆಯುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಸಂಸ್ಥೆ ಪಾಸ್‌ ಕೊಟ್ಟು ಬಸ್‌ ಬಿಡುತ್ತಿಲ್ಲ. ಬಂದರೆ ಖಾಸಗಿ ಬಸ್‌ ಸಮಯಕ್ಕೆ ಬರುತ್ತಾರೆ. ಆಗ ಎಲ್ಲರಿಗೂ ನಷ್ಟವಾಗಲಿದ್ದು, ಈ ಬಗ್ಗೆಯೂ ಡಿಪೋ ಅಧಿಕಾರಿಗಳಿಗೆ ತಿಳಿ ಹೇಳಬೇಕು ಎಂದರು.

Advertisement

 30 ಸೇವೆಗಳು ಆನ್‌ಲೈನ್‌: ಸಾರಥಿ ಸೇವೆಯಲ್ಲಿ ಎಲ್‌ಎಲ್‌ಆರ್‌ ಅಸಲಿ ಮತ್ತು ನಕಲು ಪತ್ರ, ಹೆಸರು ಮತ್ತು ವಿಳಾಸ ಬದಲಾವಣೆ, ಕಂಡಕ್ಟರ್‌ ಪರವಾನಿಗಿ, ಹೆಸರು, ವಿಳಾಸ ಬದಲಾವಣೆ ಮತ್ತು ನಕಲು ಪತ್ರ, ಅಂತಾರಾಷ್ಟ್ರೀಯ ಕಲಿಕಾ ಪತ್ರ.

ವಾಹನ್‌ ಸೇವೆಯಲ್ಲಿ: ಹೊಸ ವಾಹನ ನೋಂದಣಿ, ಮಾಲೀಕತ್ವ, ವಿಳಾಸ ವರ್ಗಾವಣೆ, ನಕಲು ಪತ್ರ, ಕಂತಿನ ಕರಾರು, ಮುಂದುವರಿಕೆ, ತಾತ್ಕಾಲಿಕ ನೋಂದಣಿ, ಎನ್‌ಒಸಿ, ಸಿಸಿ ಹಾಗೂ ಬಿ ವರದಿ, ಕ್ಯಾಬ್‌, ಆಟೋ, ಸರಕು ಸಾಗಣೆ ವಾಹನ ಪರ್ಮಿಟ್‌, ಎಲ್ಲ ತರದ ನವೀಕರಣ, ನಕಲಿ ಪರ್ಮಿಟ್‌, ಪರ್ಮಿಟ್‌ ರದ್ಧತಿ ಸೇರಿದಂತೆ ಒಟ್ಟು 30 ಸೇವೆಗಳನ್ನು ಆನ್‌ಲೈನಲ್ಲಿ ಕುಳಿತು ಪಡೆಯಬಹುದು.

ಈ ಸಂದರ್ಭದಲ್ಲಿ ಖಾಸಗಿ ಬಸ್‌ ಮಾಲೀಕರಾದ ಮಂಜುನಾಥ್‌, ಚೌಡಪ್ಪ, ಮಂಜಣ್ಣ, ಪ್ರಸನ್ನಪ್ಪ, ಸಲೀಂ ಹಾಗೂ ಆಟೋ, ಕ್ಯಾಬ್‌ ಮಾಲೀಕರು, ಚಾಲಕರು ಎಆರ್‌ಟಿಒ ಕಚೇರಿ ವ್ಯವಸ್ಥಾಪಕ ಜಯಣ್ಣ, ರಾಜಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next