Advertisement

“ಬ್ಯಾಂಕ್‌ ಖಾತೆ ಬ್ಲಾಕ್‌’ಸಂದೇಶ: ಲಿಂಕ್‌ ಕಳುಹಿಸಿ ಒಟಿಪಿ ಪಡೆದು ಹಣ ದೋಚುವ ವಂಚಕರು!

07:25 AM Jun 16, 2021 | Team Udayavani |

ಮಂಗಳೂರು: “ನಿಮ್ಮ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದೆ. ಕೂಡಲೇ ಅಗತ್ಯ ದಾಖಲೆಗಳನ್ನು (ಕೆವೈಸಿ) ಅಪ್‌ಡೇಟ್‌ ಮಾಡಿ. ಅದಕ್ಕಾಗಿ ಈ ಲಿಂಕ್‌ ಒತ್ತಿ’ ಎಂಬ ಸಂದೇಶದೊಂದಿಗೆ ವೆಬ್‌ಸೈಟ್‌ ಲಿಂಕ್‌ ಕಳುಹಿಸಿ ಗ್ರಾಹಕರ ಖಾತೆಯಿಂದ ಹಣ ದೋಚಿದ ಘಟನೆಗಳು ನಗರದ ಹಲವೆಡೆ ನಡೆದಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಿನಲ್ಲಿ ಸಂದೇಶಗಳು ಬಂದಿದ್ದು ನಂಬಿದ ಗ್ರಾಹಕರು ಒಟಿಪಿ ನೀಡಿದ್ದಾರೆ. ನಗರದ ಬ್ಯಾಂಕೊಂದರ ಗ್ರಾಹಕರು 63,000 ರೂ.ಕಳೆದು ಕೊಂಡಿದ್ದಾರೆ. ಇನ್ನೂ ಕೆಲವರು ಇದೇರೀತಿ ಮೋಸ ಹೋಗಿದ್ದಾರೆ.

Advertisement

ವಂಚನೆ ಹೇಗೆ?

ಲಿಂಕ್‌ ಒತ್ತಿದ ಕೂಡಲೇ ಬ್ಯಾಂಕ್‌ನ ಅಧಿಕೃತ ಸೈಟ್‌ನಂಥದ್ದೇ ಒಂದು ಸೈಟ್‌ತೆರೆದು ಕೊಳ್ಳುತ್ತದೆ. ಅಲ್ಲಿ ನಿಮ್ಮ ಖಾತೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ನಮೂದಿಸುವಂತೆ ಸೂಚಿಸಲಾಗುತ್ತದೆ. ಅದು ತತ್‌ಕ್ಷಣ ವಂಚಕರ ಕೈಸೇರುತ್ತದೆ.ಅವರು ಬ್ಯಾಂಕ್‌ನ ಅಧಿಕೃತ ಸೈಟ್‌ನಲ್ಲಿ ನಿಮ್ಮ ಖಾತೆಯನ್ನು ತೆರೆಯುತ್ತಾರೆ. ಕೂಡಲೇ ಖಾತೆಗೆ ಲಿಂಕ್‌ ಮಾಡಿರುವ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ವಂಚಕರು ಅದನ್ನು ಪಡೆದು ಹಣ ಲಪಟಾಯಿಸುತ್ತಾರೆ ಎಂದು ಸೈಬರ್‌ ಪರಿಣತರು ತಿಳಿಸಿದ್ದಾರೆ.

ತಿಳಿದಿರಲಿ… ಬ್ಯಾಂಕ್‌ನವರು ಎಂದೂ ಒಟಿಪಿ ಕೇಳುವುದಿಲ್ಲ

ನಮ್ಮ ಬ್ಯಾಂಕ್‌ನ ಕೆಲವು ಗ್ರಾಹಕರಿಗೂ ಇಂತಹ ಸಂದೇಶ, ಲಿಂಕ್‌ ಬಂದಿದೆ. ಈಗಾಗಲೇ ಜಾಗೃತಿ ಮೂಡಿಸಿರುವ ಪರಿಣಾಮವಾಗಿ ಹಲವು ಗ್ರಾಹಕರು ಕರೆ ಮಾಡಿ ವಿಚಾರಿಸಿದ್ದಾರೆ. ಒಂದಿಬ್ಬರು ಹಣ ಕಳೆದುಕೊಂಡಿರುವ ಮಾಹಿತಿ ಇದೆ. ಇಂತಹ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ನಮ್ಮ ಐಟಿ ಮತ್ತು ಡಿಜಿಟಲ್‌ ವಿಭಾಗವನ್ನು ಸನ್ನದ್ಧವಾಗಿರಿಸಿದ್ದೇವೆ. ಯಾವುದೇ ಬ್ಯಾಂಕ್‌ಗಳು ಕೆವೈಸಿಗಾಗಿ (ದಾಖಲೆಗಳ ದೃಢೀಕರಣ) ಮೊಬೈಲ್‌ ಲಿಂಕ್‌ ಕಳುಹಿಸುವುದಿಲ್ಲ, ಒಟಿಪಿ ಕೇಳುವುದಿಲ್ಲ. ಆದ್ದರಿಂದ ಯಾವುದೇ  ಬ್ಯಾಂಕ್‌ಗಳ ಖಾತೆದಾರರು ಯಾರಿಗೂ ಒಟಿಪಿ ನೀಡುವ ಅಗತ್ಯವೇ ಇರುವುದಿಲ್ಲ ಎಂದು ಎಸ್‌ಬಿಐ ಮಂಗಳೂರಿನಪ್ರಾದೇಶಿಕ ಪ್ರಬಂಧಕ ಹರಿಶಂಕರ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

Advertisement

ಖಾತೆ ಬ್ಲಾಕ್‌ ಮಾಡಿಸಿದರು

ಕೆಲವು ಗ್ರಾಹಕರು ಲಿಂಕ್‌ ತೆರೆದಾಗ ಸಂಶಯಗೊಂಡು ಕೂಡಲೇ ಬ್ಯಾಂಕ್‌ಗೆ ಕರೆ ಮಾಡಿದ್ದರಿಂದ ವಂಚನೆಯ ವಿಚಾರ ಗೊತ್ತಾಯಿತು. ಲಿಂಕ್‌ ತೆರೆದ ಕಾರಣ ಅಪಾಯ ಬೇಡ ಎಂದು ಕೂಡಲೇ ನೆಟ್‌ ಬ್ಯಾಂಕಿಂಗ್‌ ಪಾಸ್‌ವರ್ಡ್‌ ಬದಲಾಯಿಸುವಂತೆ ಬ್ಯಾಂಕ್‌ನವರು ಸೂಚಿಸಿದ್ದಾರೆ. “ತತ್‌ಕ್ಷಣಕ್ಕೆ ಖಾತೆಯನ್ನು ಬ್ಲಾಕ್‌ ಮಾಡುವುದಾಗಿಯೂ ಮುಂದೆ ಖುದ್ದಾಗಿ ಬ್ಯಾಂಕ್‌ಗೆ ಆಗಮಿಸಿ ಬ್ಲಾಕ್‌ ತೆರವು ಮಾಡಿಸಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next