Advertisement

ಈರುಳ್ಳಿಯ ಬಿಸಿಬಿಸಿ ರಾಜಕೀಯ

02:19 PM May 14, 2018 | Harsha Rao |

 ಸಾರ್ವಜನಿಕರು ದಿನವೂ ತಪ್ಪದೆ ಬಳಸುವ ತರಕಾರಿಗಳಲ್ಲಿ ಈರುಳ್ಳಿ, ಟೊಮೆಟೊ, ಆಲೂಗೆಡ್ಡೆಗೆ ಪ್ರಮುಖ ಸ್ಥಾನ. ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಈ ತರಕಾರಿಗಳು ಬೆಲೆ ರಾಕೆಟ್‌ ವೇಗದಲ್ಲಿ ಹೆಚ್ಚುತ್ತದೆ. ಬೆಲೆ ಏರಿಕೆಯ ಬಿಸಿ ಸಾರ್ವಜನಿಕರನ್ನು, ನಷ್ಟದ ಬಾಬ್ತು ರೈತರನ್ನು ತಟ್ಟದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾದದ್ದು ಸರ್ಕಾರಗಳ ಅತಿಮುಖ್ಯ ಜವಾಬ್ದಾರಿ. 
        
ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಯಲ್ಲಿ ಏರಿಳಿತ ತಡೆಯಲು ಟಾಪ್‌ ಬೆಲೆ ರಕ್ಷಣಾ ನಿಧಿ ಸ್ಥಾಪಿಸುವುದಾಗಿ ರಾಜಕೀಯ ಪಕ್ಷವೊಂದು ಕರ್ನಾಟಕದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಚುನಾವಣೆ ಕಾಲದಲ್ಲಿ ಇವುಗಳ ಬೆಲೆಗಳ ಏರಿಕೆ ನಮ್ಮೆಲ್ಲರ ಗಮನಕ್ಕೆ ಬಂದೇ ಬರುತ್ತದೆ. ಆದರೆ, ಈ ಏರಿಳಿತ ಏಕಾಯಿತು ಎಂಬುದು ನಮ್ಮ ಗಮನಕ್ಕೆ ಬರುವುದು ಅಪರೂಪ.

Advertisement

ಆಹಾರವಸ್ತುಗಳ, ಅದರಲ್ಲೂ ಮುಖ್ಯವಾಗಿ ದಿನ ಬಳಕೆಯಲ್ಲಿ ಅಗತ್ಯವಾಗಿರುವ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ  ಈ ಮೂರು ತರಕಾರಿಗಳ ಬೆಲೆಯ ಏರಿಳಿತವನ್ನು ಚುನಾವಣೆ ಕಾಲದಲ್ಲಿ ವಿಪರೀತ. ಇವುಗಳ ಬೆಲೆಗಳ ಬಿರುಸಿನ ಏರಿಳಿತ ಶುರುವಾದದ್ದು 2009-10ರಲ್ಲಿ ಎನ್ನಬಹುದು. ಅನಂತರ, ಪ್ರತಿಯೊಂದು ಚುನಾವಣೆಗೂ ಮುಂಚೆ, ಈರುಳ್ಳಿಯ ಬೆಲೆ ಏರಿಕೆ ಆಗುತ್ತಲೇ ಇದೆ.

ಅದಕ್ಕಾಗಿಯೇ, 2014ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರ ಅಧಿಕಾರ ವಹಿಸಿಕೊಂಡಾಗ, ಮಾಡಿದ ಮೊದಲ ಕೆಲಸಗಳÇÉೊಂದು: ರೂ.500 ಕೋಟಿಗಳ ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸಿದ್ದು. ಇದರ ಉದ್ದೇಶ ಕೃಷಿ ಉತ್ಪನ್ನಗಳ ಬೆಲೆ ಏರಿಳಿತ ಕಡಿಮೆ ಮಾಡುವುದು. ಆದರೆ, 2015ರ ಜೂನ್‌ವರೆಗೂ, ಈ ನಿಧಿಯನ್ನು ಬಳಸುವ ವ್ಯವಸ್ಥೆ ರೂಪಿಸಲಿಲ್ಲ. ಅದಾಗಿ, ಒಂದು ವರ್ಷದ ತನಕ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪಡಿತರ ಮಂತ್ರಾಲಯ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಗ ಪುನಃ ಬೆಲೆ ಏರಿಳಿತ ದೊಡ್ಡ ಸುದ್ದಿಯಾಗುತ್ತಿದ್ದಂತೆ, ಈ ನಿಧಿಯ ಬಳಕೆಯ ಜವಾಬ್ದಾರಿಯನ್ನು ರಾಜ್ಯ ಸರಕಾರಗಳಿಗೆ ವಹಿಸಲಾಯಿತು. 

ಜುಲೈ 2015ರಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿತು; ಬಿಹಾರ ಸಹಿತ ಕೆಲವು ರಾಜ್ಯಗಳಲ್ಲಿ ಚುನಾವಣೆಗೆ ಕೆಲವೇ ತಿಂಗಳ ಅಂತರವಿತ್ತು. ಆಗ ಕೇಂದ್ರ ಸರಕಾರ ಚುರುಕಾಯಿತು. ನಾಫೆಡ್‌ (ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಫೆಡರೇಷನ್‌)ಗೆ ತೀರಾ ತಡವಾಗಿ ಈರುಳ್ಳಿ ಆಮದು ಮಾಡಲು ನಿರ್ದೇಶನ ನೀಡಲಾಯಿತು. ಜೊತೆಗೆ, ಈರುಳ್ಳಿ ಬೆಲೆಯೇರಿಕೆ ತಡೆಯಲು ಬೆಲೆ ಸ್ಥಿರೀಕರಣ ನಿಧಿ ವಿನಿಯೋಗಿಸಬೇಕೆಂದು ರಾಜ್ಯ ಸರಕಾರಗಳಿಗೆ ಆದೇಶಿಸಲಾಯಿತು. ಇವೆಲ್ಲ ಕೊನೆಗಳಿಗೆಯ ಕಸರತ್ತು ಮಾಡಿದರೂ, ಚುನಾವಣೆ ಹತ್ತಿರವಾಗುವ ತನಕ ಈರುಳ್ಳಿಯ ಬೆಲೆ ಇಳಿಯಲಿಲ್ಲ. ಚಪಾತಿಯ ಜೊತೆ ಈರುಳ್ಳಿ ತಿನ್ನುವ ಉತ್ತರಭಾರತದ ಬಡಕುಟುಂಬಗಳು ಈರುಳ್ಳಿ ಖರೀದಿಸದಂತಾಯಿತು.

ಈರುಳ್ಳಿ ಆಮದಿಗೆ ನಾಫೆಡ್‌ ಕ್ರಮ ಕೈಗೊಂಡಾಗಲೇ ವಿಳಂಬವಾಗಿತ್ತು. ಆಮದಾದ ಈರುಳ್ಳಿ ಭಾರತದ ಬಂದರುಗಳಿಗೆ ಬಂದದ್ದು ಸೆಪ್ಟೆಂಬರ್‌ 2015ರ ಕೊನೆಯಲ್ಲಿ. ಅದಾಗಿ ಒಂದು ತಿಂಗಳಿನಲ್ಲಿ, ಅಂದರೆ ನವಂಬರ್‌ 2015ರಲ್ಲಿ, ನಮ್ಮ ರೈತರು ಬೆಳೆಸಿದ ಈರುಳ್ಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಪರಿಣಾಮ ಅಗತ್ಯಕ್ಕೂ ಎರಡು ಪಟ್ಟು ಈರುಳ್ಳಿ ಮಾರುಕಟ್ಟೆಗೆ ಬಂದು, ಅದರ ಬೆಲೆ ದಿಢೀರನೆ ಕುಸಿಯಿತು. ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಕಿ.ಲೋಕ್ಕೆ 60ರೂ. ದರದಲ್ಲಿ ಮಾರಾಟವಾಗುತ್ತಿದ್ದ ಈರುಳ್ಳಿಯ ಬೆಲೆ ಏಕಾಏಕಿ 10ರೂ.ಗೆ ಇಳಿಯಿತು. ಹಾಗಾಗಿ, ಈರುಳ್ಳಿ ಬೆಳೆಗಾರರಿಗೆ ಭಾರೀ ನಷ್ಟವಾಯಿತು.

Advertisement

ಇವೆಲ್ಲದರ ಒಟ್ಟು ಪರಿಣಾಮವು ರೈತರು ಮತ್ತು ಗ್ರಾಹಕರು ಮೇಲೆ ಮಾತ್ರವಲ್ಲ, ಆಡಳಿತ ಪಕ್ಷವೂ ಸಂಕಟಕ್ಕೆ ಸಿಲುಕುವಂತೆ ಮಾಡಿತು.  ಬಿಹಾರ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷ$ಸೋಲು ಅನುಭವಿಸಿತು. ಗಮನಿಸಿ, ಈರುಳ್ಳಿ ವ್ಯಾಪಾರಿಗಳೆಲ್ಲರೂ ಕಾಂಗ್ರೆಸ್‌ ಅಥವಾ ಬಿಜೆಪಿ ಪಕ್ಷದ ಬೆಂಬಲಿಗರಲ್ಲ. 2013ರ ಕೊನೆಯಲ್ಲಿ, ಈರುಳ್ಳಿ ಬೆಲೆ ಕಿಲೋಗೆ 60ರೂ. ದಾಟಿದಾಗ, ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿತ್ತು; ಈ ಬೆಲೆ ಜಿಗಿತದಿಂದ 2014ರ ಲೋಕಸಭಾ ಚುನಾವಣೆಯಲ್ಲಿ ಲಾಭವಾದದ್ದು ಬಿಜೆಪಿಗೆ. ಅದೇ 2015 ಮತ್ತು 2017ರ ಚಳಿಗಾಲದಲ್ಲಿ ಈರುಳ್ಳಿ ಬೆಲೆ ಕಿಲೋಕ್ಕೆ ರೂ.60ರಿಂದ 70ಕ್ಕೆ ಏರಿದ್ದರಿಂದಾಗಿ, ಆಗಿನ ವಿಧಾನಸಭಾ ಚುನಾವಣೆಗಳಲ್ಲಿ ಸಹಾಯವಾದದ್ದು ಕಾಂಗ್ರೆಸ್‌ ಪಕ್ಷಕ್ಕೆ.

ಏಪ್ರಿಲ…-ಜೂನ್‌2017ರ ಅವಧಿಯಲ್ಲಿ ಏನಾಯಿತೆಂದು ಪರಿಶೀಲಿಸೋಣ. ರೂ.1,098 ಕೋಟಿ ಬೆಲೆಯ 9,45,262 ಟನ್‌ ಈರುಳ್ಳಿಯನ್ನು ನಮ್ಮ ದೇಶ ರಫ್ತು ಮಾಡಿತು. ಇದು ಒಂದು ವರ್ಷದ ಮುಂಚೆ (ಅದೇ ಅವಧಿಯಲ್ಲಿ) ರಫ್ತು ಮಾಡಿದ್ದ 5,87,476 ಟನ್‌ ಈರುಳ್ಳಿಗಿಂತ ಶೇ. 60ರಷ್ಟು ಜಾಸ್ತಿ. ಅದಾಗಿ ಎರಡೇ ತಿಂಗಳಲ್ಲಿ, ಸೆಪ್ಟೆಂಬರ್‌ 2017ರ ಮೊದಲ ವಾರದಲ್ಲಿ ಈರುಳ್ಳಿಯ ತೀವ್ರ ಕೊರತೆಯಿಂದಾಗಿ ಪುನಃ ಬೆಲೆಯಲ್ಲಿ ಏರುಪೇರು ಉಂಟಾಯಿತು. 
ಈ ಬೆಲೆ ಏರಿಕೆ ತಡೆಯಲಿಕ್ಕಾಗಿ, ಆದಾಯ ತೆರಿಗೆ ಇಲಾಖೆಯ 150 ಅಧಿಕಾರಿಗಳು ಮಹಾರಾಷ್ಟ್ರದ ನಾಸಿಕದ ಲಸಲ್ಗಾವೊನ್‌ ಮಂಡಿಯ (ಅದು ಏಷ್ಯಾದ ಅತಿ ದೊಡ್ಡ ಈರುಳ್ಳಿ ಮಂಡಿ) ಏಳು ಮುಖ್ಯ ಈರುಳ್ಳಿ ವ್ಯಾಪಾರಿಗಳ ಮೇಲೆ ದಾಳಿ ಮಾಡಿದರು. ಈ ಏಳು ವ್ಯಾಪಾರಿಗಳು, ಆ ಮಂಡಿಯಲ್ಲಿ ವಹಿವಾಟು ಆಗುವ ಒಟ್ಟು ಈರುಳ್ಳಿಯ ಶೇ.30 ಮಾತ್ರ ನಿಯಂತ್ರಿಸುತ್ತಾರೆ. ಈ ಐಟಿ ದಾಳಿಯ ನಂತರ ಈರುಳ್ಳಿಯ ಬೆಲೆ ಶೇ.30ರಷ್ಟು ಇಳಿಯಿತು. ಆದಾಯ ತೆರಿಗೆ ಇಲಾಖೆ ಈ ದಾಳಿಯ ಬಗ್ಗೆ ನೀಡಿದ ಹೇಳಿಕೆ ಹೀಗಿದೆ: ಈ ವ್ಯಾಪಾರಿಗಳು ಆಮದು ಮತ್ತು ರಫ್ತಿನಲ್ಲಿ ಕಾನೂನು ಬಾಹಿರವಾಗಿ ಹಣದ ವ್ಯವಹಾರ ಮತ್ತು ದುಬೈ ಮೂಲಕ ಹವಾಲಾ ವ್ಯವಹಾರ ಮಾಡುತ್ತಿದ್ದರು. ಆನಂತರ ಏನಾಯ್ತು ಗೊತ್ತೆ?  ಕೆಲವೇ ಗಂಟೆಗಳಲ್ಲಿ ನಾಸಿಕ್‌ ಜಿÇÉೆಯ ಮಂಡಿ ವ್ಯಾಪಾರಿಗಳೆಲ್ಲ ಈ ಏಳು ವ್ಯಾಪಾರಿಗಳನ್ನು ಬೆಂಬಲಿಸಿ ಮುಷ್ಕರ ನಡೆಸಿದರು.

ಐಟಿ ದಾಳಿಯ ನಂತರ, ನಾಸಿಕ್‌ ಜಿÇÉೆಯ ಮಂಡಿಗಳಿಗೆ ಈರುಳ್ಳಿ ಬರುವುದು ಕಡಿಮೆಯಾಯಿತು; ಎಸ್‌ಎಂಎಸ್‌ ಮಂಡಿ ಚುರುಕಾಯಿತು. ಇದು, ದೂರದೂರದ ಮಾರುಕಟ್ಟೆಗಳಿಗೆ ಈರುಳ್ಳಿ ಒಯ್ಯಬೇಕೆಂದು ರೈತರಿಗೆ ಸೂಚಿಸಿತು. ಎಸ್‌ಎಂಎಸ್‌ ಮಂಡಿಗಳು ಹೊಸ ಬೆಳವಣಿಗೆಯೇನಲ್ಲ. 2010ರಲ್ಲಿ ಸ್ಮಾರ್ಟ್‌ ಫೋನುಗಳು ಬಳಕೆಗೆ ಬಂದಾಗಿನಿಂದ ಎಸ್‌ಎಂಎಸ್‌ ಮಂಡಿಗಳ ಜಾಲ ಬೆಳೆದಿದೆ. ಇದರ ಮೂಲಕ ಹಾಗೂ ವಾಟ್ಸಪ್‌ ತಂಡಗಳ ಮೂಲಕ, ಯಾವಾಗ ಮತ್ತು ಎಲ್ಲಿಗೆ ಕೃಷಿ ಉತ್ಪನ್ನ ತರಬೇಕೆಂಬ ರೈತರಿಗೆ ಮಾಹಿತಿಯೂ ಲಭ್ಯ.

ಸ್ಥಳೀಯ ಸಗಟು ವ್ಯಾಪಾರಿಗಳು ಮತ್ತು ಫ್ಯೂಚರ್‌ ಮಾರ್ಕೆಟಿನ ಹೂಡಿಕೆದಾರರು  ಇವರೆಲ್ಲರೂ ದೊಡ್ಡ ರೈತರು ಮತ್ತು ದೊಡ್ಡ ವ್ಯಾಪಾರಿಗಳ ಪಟ್ಟಭದ್ರ ಗುಂಪುಗಳ ಸಂಪರ್ಕದಲ್ಲಿ ಇರುವುದು ಎಸ್‌ಎಂಎಸ್‌ ಮಂಡಿಗಳ ಮೂಲಕ. ಐಟಿ ದಾಳಿಯ ನಂತರ ಒಂದು ವಾರ ಈರುಳ್ಳಿ ವ್ಯವಹಾರ ತಣ್ಣಗಾಗಿತ್ತು. ಅನಂತರ, ಈರುಳ್ಳಿ ಬೆಲೆ ಏರುತ್ತ ಏರುತ್ತ ಕಿಲೋಕ್ಕೆ ರೂ.70 ತಲಪಿತು! ಕೆಲವೇ ದಿನಗಳಲ್ಲಿ ಟೊಮೆಟೊ ಬೆಲೆಯೂ ಹೆಚ್ಚಳವಾಗಿ ಕಿಲೋಕ್ಕೆ ರೂ.70 ಆಗೇ ಬಿಟ್ಟಿತು. ಎರಡೂ ಅತ್ಯಗತ್ಯ ತರಕಾರಿಗಳ ಬೆಲೆ ರಾಕೆಟ್‌ ವೇಗದಲ್ಲಿ ಏರುತ್ತಿದ್ದರೂ, ಅದನ್ನು ತಡೆಯಲು ಸಾಧ್ಯವಾಗದೆ ಸರಕಾರ ಅಸಹಾಯಕವಾಗಿ ಕೂತಿರಬೇಕಾಯಿತು.

ಕೇಂದ್ರ ಸರಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪಡಿತರ ಸಚಿವ ರಾಮ ವಿಲಾಸ್‌ ಪಾಸ್ವಾನ್‌ ಈ ಸಂದರ್ಭದಲ್ಲಿ ಪತ್ರಿಕೆಗಳಿಗೆ ನೀಡಿದ ಹೇಳಿಕೆ ಹೀಗಿದೆ: ಈರುಳ್ಳಿ ಬೆಲೆ ನಿಯಂತ್ರಿಸುವುದು ಸರಕಾರದ ಕೈಯಲ್ಲಿಲ್ಲ. ಆದರೆ, ಆ ಮಂತ್ರಾಲಯ ಕೈಚೆಲ್ಲಿ ಕೂತರೆ ರೈತರಿಗೂ ಗ್ರಾಹಕರಿಗೂ ಸಂಕಟ ಗ್ಯಾರಂಟಿ. ಇಂತಹ ಹೇಳಿಕೆ ನೀಡಿ, ಜವಾಬ್ದಾರಿಯಿಂದ ನುಣುಚಿಕೊಂಡರೆ, ಜನಸಾಮಾನ್ಯರು ಪಾಠ ಕಲಿಸುತ್ತಾರೆಂದು ಚುನಾವಣೆಗಳು ಮತ್ತೆಮತ್ತೆ ತೋರಿಸಿ ಕೊಟ್ಟಿವೆ. ಆದ್ದರಿಂದ, ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜಕೀಯ ಪಕ್ಷ$, ರೈತರಿಗೆ ನಷ್ಟವಾಗದಿರಲು ಮತ್ತು ಆಹಾರವಸ್ತುಗಳ ಬೆಲೆಯೇರಿಕೆ ಕನಿಷ್ಠವಾಗಿರಲು ಬೇಕಾದ ಕ್ರಮಗಳನ್ನು ಸಕಾಲದಲ್ಲಿ ಕೈಗೊಂಡು ಜವಾಬ್ದಾರಿಯಿಂದ ವರ್ತಿಸಬೇಕಾದದ್ದು ಅತ್ಯಗತ್ಯ ಅಲ್ಲವೇ? 

– ಅಡ್ಕೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next