Advertisement

ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದೆ ಈರುಳ್ಳಿ ಬೆಲೆ

10:08 AM Nov 07, 2019 | Lakshmi GovindaRaju |

ಬೆಂಗಳೂರು: ಈರುಳ್ಳಿ ಹೆಚ್ಚಿದರಷ್ಟೇ ಅಲ್ಲ, ಅದರ ಬೆಲೆ ಕೇಳಿದರೂ ಈಗ ಕಣ್ಣೀರು ಬರಲಿದೆ. ಅಷ್ಟರ ಮಟ್ಟಿಗೆ ಈರುಳ್ಳಿ ಬೆಲೆ ಗಗನಕ್ಕೇರಿದೆ. ಕಳೆದ ಕೆಲ ದಿನಗಳಿಂದ ಈರುಳ್ಳಿ ಬೆಲೆ ಏರುತ್ತಿದ್ದು, ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದೆ. ವಾರದ ಹಿಂದಷ್ಟೇ ಕೆ.ಜಿ. 40-45 ರೂ.ಅಸು ಪಾಸಿನಲ್ಲಿದ್ದ ಈರುಳ್ಳಿ ಬೆಲೆ ಮಂಗಳವಾರ ನಗರದ ಹಾಪ್‌ ಕಾಮ್ಸ್‌ಗಳಲ್ಲಿ 71 ರೂ.ಗಳಿಗೆ ಮಾರಾಟವಾಯಿತು. ಅಲ್ಲದೆ 55 ರಿಂದ 60 ರೂ.ಗಳಲ್ಲಿ ಚಿಲ್ಲರೆ ಮಾರಾಟವಾಗುತ್ತಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.

Advertisement

ಇತ್ತೀಚೆಗೆ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದ ವ್ಯಾಪ್ತಿಯಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಈರುಳ್ಳಿ ಆವಕ ಕಡಿಮೆಯಾಗಿದೆ. ಜತೆಗೆ ಕೇಂದ್ರ ಸರ್ಕಾರ ಈ ಹಿಂದೆ ಭಾರತದಿಂದ ವಿದೇಶಗಳಿಗೆ ರಫ್ತಾಗುತ್ತಿದ್ದ ಈರುಳ್ಳಿ ಮೇಲೆ ನಿರ್ಬಂಧ ಹೇರಿತ್ತು. ಆದರೆ ಅದನ್ನು ತೆಗೆದು ಹಾಕಿದ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಮತ್ತೆ ಗಗನ ಮುಖೀಯಾಗಲು ಕಾರಣ ಎಂಬ ಮಾತು ಕೇಳಿ ಬಂದಿದೆ.

ಮಾರುಕಟ್ಟೆಯಲ್ಲಿ ಏರಿಳಿತ: ಬೆಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಿನನಿತ್ಯ ಈರುಳ್ಳಿ ದರ ಏರಿಳಿತವಾಗುತ್ತಿದೆ. 500 ರಿಂದ 600 ಲಾರಿಗಳಲ್ಲಿ ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ ಸೇರಿ ಇನ್ನಿತರ ಕಡೆಗಳಿಂದ ಪ್ರತಿ ನಿತ್ಯ ಸುಮಾರು 1.3 ಲಕ್ಷ ಚೀಲ ಈರುಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸೇರುತ್ತದೆ. ಕಳೆದೆರಡು ದಿನಗಳ ಹಿಂದಷ್ಟೇ 50 ಕೆ.ಜಿ ಈರುಳ್ಳಿ ಮೂಟೆಗೆ ಸುಮಾರು 3 ಸಾವಿರ ರೂ.ಇತ್ತು. ಆದರೆ ಸೋಮವಾರ ಕೊಂಚ ಇಳಿಕೆಯಾಗಿ 1500 ರೂ.ನಿಂದ 2500 ರೂ.ವರೆಗೆ ಮಾರಾಟವಾಗಿದೆ ಎಂದು ಬೆಂಗಳೂರು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಶಂಕರಪ್ಪ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಮಳೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಈರುಳ್ಳಿ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಮಂಗಳ ವಾರ ದಪ್ಪ ಈರುಳ್ಳಿ 2500 ರೂ.ನಿಂದ 3000 ರೂ.ವರೆಗೆ, ಸಾಧಾರಣ ಈರುಳ್ಳಿ 1700 ರೂ.ನಿಂದ 1800 ರೂ. ವರೆಗೆ ಖರೀದಿಯಾಯಿತು ಎಂದು ಹೇಳಿದ್ದಾರೆ. ಪ್ರತಿನಿತ್ಯ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು ಇಷ್ಟೇ ಬೆಲೆ ಇರುತ್ತದೆ ಎಂದು ಹೇಳಲಾಗದು ಎಂದಿದ್ದಾರೆ.

ಉತ್ತಮ ಈರುಳ್ಳಿ ಸಿಗ್ತಿಲ್ಲ!: ಈ ಹಿಂದೆ ಹಾಪ್‌ ಕಾಮ್ಸ್‌ ನಲ್ಲಿ ಕೆ.ಜಿ.ಗೆ 40 ರೂ. ಆಸುಪಾಸಿನಲ್ಲಿ ಈರುಳ್ಳಿ ಮಾರಾಟ ವಾಗುತ್ತಿತ್ತು. ಆದರೆ ಈಗ 71 ರೂ.ಗೆ ಮಾರಾಟವಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿ ಮಾಡ ಲಾಗುತ್ತದೆ. ಆದರೆ ಅಲ್ಲಿಯೇ ಉತ್ತಮ ಗುಣಮಟ್ಟದ ಈರುಳ್ಳಿ ಸಿಗುತ್ತಿಲ್ಲ ಎಂದು ಹಾಪ್‌ ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಎನ್‌. ಪ್ರಸಾದ್‌ ಹೇಳಿದ್ದಾರೆ.

Advertisement

ಯಾವ ದೇಶಗಳಿಗೆ ಈರುಳ್ಳಿ ರಫ್ತು?: ಕರ್ನಾಟಕ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಬೆಳೆಯುವ ಈರುಳ್ಳಿ ಬಾಂಗ್ಲಾದೇಶ, ದುಬೈ, ಮಲೇಷ್ಯಾ, ಸಿಲೋನ್‌, ಮಧ್ಯಪ್ರಾಚ್ಯ ದೇಶಗಳಿಗೆ ರಫ್ತಾಗುತ್ತ ದೆ. ಹಾಗೆಯೇ ಚಳ್ಳಕೆರೆಯಲ್ಲಿ ಬೆಳೆಯುವ ಈರುಳ್ಳಿ ಬಾಂಗ್ಲಾ, ಶ್ರೀಲಂಕಾ ಮತ್ತು ಮಲೇಷ್ಯಾಗಳಿಗೆ ರಫ್ತಾಗುತ್ತದೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ?: ಚಿತ್ರದುರ್ಗ, ಚಳ್ಕೆರೆ, ಸಂಡೂರು, ಬಳ್ಳಾರಿ, ಹೊಸಪೇಟೆ, ಚಿಕ್ಕಬಳ್ಳಾಪುರ, ಹುಬ್ಬಳಿ, ಧಾರವಾಡ, ರಾಯಚೂರು, ಬೆಳಗಾವಿ, ಗದಗ್‌ನಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಇವೆಲ್ಲವೂ ಗಾತ್ರದಲ್ಲಿ ಸಾಮಾನ್ಯವಾಗಿರುತ್ತವೆ. ಅಲ್ಲದೆ ಸಾಂಬಾರು ಈರುಳ್ಳಿಯನ್ನು ಮೈಸೂರು, ಚಾಮರಾಜನಗರದಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ.

ಯಾವ ಈರುಳ್ಳಿಗೆ ಬೇಡಿಕೆ?: ಮಹಾರಾಷ್ಟ್ರದ ದಪ್ಪ ಈರುಳ್ಳಿಯೇ ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳದ್ದಾಗಿದೆ. ಮಾರ್ಚ್‌ನಿಂದ ಅಕ್ಟೋಬರ್‌ವರೆಗೆ ಮಹಾರಾಷ್ಟ್ರದ ಈರುಳ್ಳಿಯನ್ನೇ ಬಳಸಲಾಗುತ್ತದೆ. ಉಳಿದಂತೆ ಕರ್ನಾಟಕ, ಗುಜರಾತ್‌, ಆಂಧ್ರಪ್ರದೇಶ, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬೆಳೆಯುವ ಈರುಳ್ಳಿಯನ್ನು ಆಯಾ ಭಾಗಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸಲಾಗುತ್ತದೆ.

ವಿವಿಧ ಕೃಷಿ ಮಾರುಕಟ್ಟೆಗಳಲ್ಲಿ ಈರುಳ್ಳಿ ಮಾರಾಟ ದರ ಪ್ರತಿ ಕ್ವಿಂಟಲ್‌ಗೆ
ಸ್ಥಳ ದರ
ಬೆಂಗಳೂರು 4500 ರೂ.
ದಾವಣಗೆರೆ 2500 ರೂ.
ಮೈಸೂರು 3000 ರೂ.
ಹುಬ್ಬಳ್ಳಿ 1750 ರೂ.
ರಾಣೆಬೆನ್ನೂರು 2100 ರೂ.
ರಾಯಚೂರು 2695 ರೂ.
ಚಿಕ್ಕಮಗಳೂರು 4951 ರೂ.
ಅರಸಿಕೆರೆ 1500 ರೂ.
ಕಡೂರು 2500 ರೂ.

Advertisement

Udayavani is now on Telegram. Click here to join our channel and stay updated with the latest news.

Next