Advertisement

Onion price: ದೀಪಾವಳಿ ಹಬ್ಬಕ್ಕೂ ತಗ್ಗದ ಈರುಳ್ಳಿ ದರ

11:08 AM Nov 11, 2023 | Team Udayavani |

ಬೆಂಗಳೂರು: ದೀಪಾವಳಿ ಹಬ್ಬದಲ್ಲೂ ಈರುಳ್ಳಿ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಕಳೆದ ಹಲವು ದಿನಗಳಿಂದ ಈರುಳ್ಳಿ ಬೆಲೆ ಕೆಳಗಿಳಿಯದೇ ತಟಸ್ಥವಾಗಿದೆ.

Advertisement

ಹೀಗಾಗಿ, ಹಾಪ್‌ಕಾಮ್ಸ್‌ನಲ್ಲಿ ಪ್ರತಿ ಕೆ.ಜಿ. ಈರುಳ್ಳಿ 69 ರೂ. ಆಗಿದೆ. ಜತೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ 70 ರಿಂದ 80 ರೂ.ವರೆಗೂ ಮಾರಾಟವಾಗುತ್ತಿದೆ.

ಸಗಟು ಮಾರುಕಟ್ಟೆಗೆ ಹೆಸರಾಗಿರುವ ಯಶವಂತಪುರದ ಎಪಿಎಂಸಿಯಲ್ಲಿ ಮಹಾರಾಷ್ಟ್ರದ ನಾಗಪುರ ಭಾಗದ ಹಳೆ ದಾಸ್ತಾನು ಈರುಳ್ಳಿ ಶನಿವಾರ ಪ್ರತಿ ಕ್ವಿಂಟಲ್‌ಗೆ 4,700 ರೂ.ನಿಂದ 5 ಸಾವಿರ ರೂ. ವರೆಗೂ ಖರೀದಿಯಾಯಿತು. ಜತೆಗೆ ಮಧ್ಯಮ ಗಾತ್ರದ ಈರುಳ್ಳಿ ಪ್ರತಿ ಕೆ.ಜಿಗೆ 4,400 ರಿಂದ 4,600 ರೂ.ವರೆಗೂ ಮಾರಾಟವಾಯಿತು. ಸಾಧಾರಣ ಗಾತ್ರದ ಈರುಳ್ಳಿ 3,800 ರಿಂದ 4 ಸಾವಿರ ರೂ. ವರೆಗೂ ಖರೀದಿಯಾಯಿತು.

ಈ ಹಿಂದೆ ಚಿತ್ರದುರ್ಗ, ವಿಜಯಪುರ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಯಶವಂತಪುರ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಆಗುತ್ತಿತ್ತು. ಆದರೆ, ರಾಜ್ಯದಲ್ಲಿ ಕಂಡು ಬಂದಿರುವ ಬರಗಾಲದಿಂದಾಗಿ ಈರುಳ್ಳಿ ಬೆಳೆ ರೈತರ ಕೈಸೇರಿಲ್ಲ. ಬೇಡಿಕೆಗಿಂತ ಪೂರೈಕೆ ಕಡಿಮೆಯಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಭಾಗದ ಈರುಳ್ಳಿಗೆ ಅವಲಂಬಿಸ  ಬೇಕಾಗಿದೆ ಎಂದು ಹೋಲ್‌ಸೇಲ್‌ ಈರುಳ್ಳಿ ವ್ಯಾಪಾರಿಗಳು ಹೇಳುತ್ತಾರೆ. ಹಬ್ಬದಲ್ಲಿ ಕೂಡ ಈರುಳ್ಳಿ ಬೆಲೆ ಇಳಿಯುವ ನಿರೀಕ್ಷೆಯಿಲ್ಲ ಎನ್ನುತ್ತಾರೆ.

ಹೊಸ ಈರುಳ್ಳಿ ಕ್ವಿಂಟಲ್‌ಗೆ 5 ಸಾವಿರ ರೂ: ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಹೊಸ ಈರುಳ್ಳಿಗೂ ಬೇಡಿಕೆ ಕಂಡು ಬಂದಿದೆ. 130ಕ್ಕೂ ಅಧಿಕ ಟ್ರಕ್‌ಗಳಲ್ಲಿ ಹೊಸ ಈರುಳ್ಳಿ ಬೆಳೆ ಮಾರು ಕಟ್ಟೆಗೆ ಪೂರೈಕೆ ಆಗಿದೆ. ಶ್ರೇಷ್ಠ ಗುಣಮಟ್ಟದ ಹೊಸ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 4,700 ರೂ.ನಿಂದ5 ಸಾವಿರ ರೂ. ವರೆಗೆ ಖರೀದಿಯಾಯಿತು ಎಂದು ಯಶವಂತಪುರ ಎಪಿಎಂಸಿಯ ಹೋಲ್‌ಸೇಲ್‌ ಈರುಳ್ಳಿ ವ್ಯಾಪಾರಿ ರವಿಶಂಕರ್‌ ಮಾಹಿತಿ ನೀಡುತ್ತಾರೆ.

Advertisement

ಮಹಾರಾಷ್ಟ್ರದ ನಾಗಪುರದಿಂದ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ. ಬೆಳೆ ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಹೊಸಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಹಲವು ದಿನಇದೇ ಪರಿಸ್ಥಿತಿ ಇರುವ ಸಾಧ್ಯತೆ ಯಿದೆ. ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ ಹೇಳಿ ಕೊಳ್ಳುವಷ್ಟು ಈರುಳ್ಳಿ ಪೂರೈಕೆ ಆಗುತ್ತಿಲ್ಲ ಎಂದು ಹೇಳುತ್ತಾರೆ.

ಮಹಾರಾಷ್ಟ್ರದಿಂದ 310 ಟ್ರಕ್‌ ಈರುಳ್ಳಿ ಪೂರೈಕೆ:  ರಾಜಧಾನಿ ಬೆಂಗಳೂರಿಗೆ 310 ಟ್ರಕ್‌ ಈರುಳ್ಳಿ ಶನಿವಾರ ಪೂರೈಕೆ ಆಗಿದೆ. ಮಹಾರಾಷ್ಟ್ರ ಮತ್ತು ನಾಗ್ಪುರ ಭಾಗದಿಂದ 130ಕ್ಕೂ ಹೆಚ್ಚು ಟ್ರಕ್‌ಗಳಿಂದ ಪೂರೈಕೆ ಆಗಿದೆ. ಹಾಗೆಯೇ ದಾಸನಪುರ ಮಾರುಕಟ್ಟೆಗೂ 100 ಅಧಿಕ ಟ್ರಕ್‌ಗಳಲ್ಲಿ ಈರುಳ್ಳಿ ರಫ್ತಾಗಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ 50 ರೂ. ಹೋಲ್‌ಸೇಲ್‌ ದರದಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಕೆ.ಆರ್‌.ಪುರಂ, ಬನಶಂಕರಿ ಸೇರಿ ಸಿಲಿಕಾನ್‌ ಸಿಟಿಯ ಹಲವು ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಒಂದೊಂದು ರೀತಿಯ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಮಧ್ಯಮ ಗಾತ್ರದ ಈರುಳ್ಳಿ 70 ರೂ. ಜತೆಗೆ ಹಲವು ದಿನಗಳವರೆಗೆ ಬಾಳಿಕೆ ಬರುವಂತಹ ಉತ್ತಮ ಗುಣಮಟ್ಟದ ಈರುಳ್ಳಿ 80-90 ರೂ.ವರೆಗೂ ಮಾರಾಟ ಮಾಡಲಾಗುತ್ತಿದೆ ಎಂದು ಮಾಗಡಿ ರಸ್ತೆಯ ತಳ್ಳುಬಂಡಿ ವ್ಯಾಪಾರಿ ಸ್ವಾಮಿ ಹೇಳುತ್ತಾರೆ.

ಬರ ಸೇರಿ ಮತ್ತಿತರ ಕಾರಣಗಳಿಂದ ಈಗ ಬೇಡಿಕೆಯಿದ್ದಷ್ಟು ಈರುಳ್ಳಿ ಪೂರೈಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯಶವಂತಪುರ ಎಪಿಎಂಸಿ ಸೇರಿ ಹಲವು ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಿದೆ. ಹಾಪ್‌ಕಾಮ್ಸ್‌ನಲ್ಲೂ ಪ್ರತಿ ಕೆ.ಜಿ. ಈರುಳ್ಳಿ 69 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹೆಚ್ಚು ದಿನ ಬಾಳಿಕೆ ಬರುವಂತಹ ಈರುಳ್ಳಿಯನ್ನು ಖರೀದಿಸಲಾಗುತ್ತಿದೆ. ಉಮೇಶ್‌ ಮಿರ್ಜಿ, ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ.

ದೇವೇಶ ಸೂರಗುಪ್ಪ

 

Advertisement

Udayavani is now on Telegram. Click here to join our channel and stay updated with the latest news.

Next