Advertisement

Onion Price Hike; ಕೈಕೊಟ್ಟ ಫ‌ಸಲು: ಈರುಳ್ಳಿ ದುಬಾರಿ ಸಾಧ್ಯತೆ

11:21 PM Aug 14, 2023 | Team Udayavani |

ಬೆಂಗಳೂರು: ಟೊಮೇಟೊ ಬಳಿಕ ಈಗ ಈರುಳ್ಳಿ ದರ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಹಾಕಲು ಹೊರಟಿದೆ. ರಾಜ್ಯದ ಕೆಲವು ಪ್ರದೇಶಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಫ‌ಸಲು ಕೈಕೊಟ್ಟಿರುವುದು, ಕೆಲವು ಕಡೆಗಳಲ್ಲಿ ಮಳೆಯಿಲ್ಲದೆ ಸರಿಯಾಗಿ ಬಿತ್ತನೆ ಆಗದಿರುವುದು ಇದಕ್ಕೆ ಕಾರಣ. ಎಪಿಎಂಸಿಯಲ್ಲಿ ಇದುವರೆಗೆ ಪ್ರತಿ ಕೆ.ಜಿ. ಈರುಳ್ಳಿ ಸರಾಸರಿ 25 ರೂ.ಗಳಿಗೆ ಮಾರಾಟವಾಗುತ್ತಿದ್ದದ್ದು ಮಂಗಳವಾರ ಕೆ.ಜಿ.ಗೆ 30ರಿಂದ 35 ರೂ.ಗಳಿಗೇರಿದೆ. ಉಳಿದ ಸಾಮಾನ್ಯ ಮಾರುಕಟ್ಟೆಗಳಲ್ಲಿ, ಅಂಗಡಿಗಳಲ್ಲಿ ಪ್ರತೀ ಕೆ.ಜಿ. ದಪ್ಪ ಈರುಳ್ಳಿಗೆ 30 ರೂ. ಇದ್ದದ್ದು 40ರಿಂದ 45 ರೂ.ಗಳಿಗೇರಿದೆ.

Advertisement

ಮಂಗಳವಾರ ಮಹಾರಾಷ್ಟ್ರದ ಅಹ್ಮದ್‌ ನಗರ ಜಿಲ್ಲೆಯಿಂದ ಬೆಂಗಳೂರಿಗೆ ಪೂರೈಕೆ ಆದ ದೊಡ್ಡ ಗಾತ್ರದ ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಾಲ್‌ಗೆ 2,800ರಿಂದ 3 ಸಾ. ರೂ. ವರೆಗೆ ಬಿಕರಿಯಾ ಯಿತು. ಹೀಗಾಗಿ ಹಳೆ ಈರುಳ್ಳಿಗೆ ಬೇಡಿಕೆ ಹೆಚ್ಚಿದೆ.

ಚಿತ್ರದುರ್ಗ, ಚಳ್ಳಕೆರೆ, ಅಜ್ಜಂಪುರ, ಹೂವಿನ ಹಡಗಲಿ ಮತ್ತಿತರ ಕಡೆಗಳಿಂದ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಆಗದ ಕಾರಣ ನಾಸಿಕ್‌ ಮತ್ತು ಅಹ್ಮದ್‌ ನಗರ್‌ ಜಿಲ್ಲೆಯಿಂದ ಉತ್ತಮ ಗುಣಮಟ್ಟದ ಹಳೆ ಈರುಳ್ಳಿ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ.

ಹೊಸ ಬೆಳೆ ಬಂದಿಲ್ಲ
ಯಶವಂತಪುರ ಎಪಿಎಂಸಿಗೆ ಚಿತ್ರದುರ್ಗ, ಚಳ್ಳಕೆರೆ ಭಾಗದಿಂದ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಆಗುತ್ತಿತ್ತು. ಆದರೆ ಕೆಲವು ಪ್ರದೇಶಗಳಲ್ಲಿ ಸಕಾಲಕ್ಕೆ ಸರಿಯಾಗಿ ಬಿತ್ತನೆ ನಡೆದಿಲ್ಲ. ಹೊಸ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಆ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಯಶವಂತಪುರದ ಹೋಲ್‌ ಸೇಲ್‌ ಈರುಳ್ಳಿ ವ್ಯಾಪಾರಿ ರವಿಶಂಕರ್‌ ಹೇಳಿದ್ದಾರೆ. ಕರ್ನೂಲು ಭಾಗದಿಂದ ಸಣ್ಣ ಗಾತ್ರದ ಈರುಳ್ಳಿ ಪೂರೈಕೆ ಆಗುತ್ತಿದೆ. ಕ್ವಿಂಟಾಲ್‌ಗೆ 2 ಸಾವಿರ ರೂ.ಗಳಿಂದ 2,400 ರೂ.ವರೆಗೆ ಖರೀದಿಯಾಗುತ್ತಿದೆ. ಆದರೆ ಮಹಾರಾಷ್ಟ್ರದಿಂದ ಪೂರೈಕೆ ಆಗುವ ದಪ್ಪ ಈರುಳ್ಳಿಗೆ ಬೇಡಿಕೆಯಿದೆ ಎನ್ನುತ್ತಾರೆ.

ಕಳೆದ 2-3ವರ್ಷಗಳಿಂದ ರಾಜ್ಯದಲ್ಲಿ ಈರುಳ್ಳಿ ಬೆಳೆ ಕುಂಠಿತವಾಗಿದೆ. ಚಿತ್ರದುರ್ಗ, ಚಳ್ಳಕೆರೆ ಸಹಿತ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಮಳೆಯಿಲ್ಲದೆ ಬರಗಾಲ ಆವರಿಸಿರುವುದು ಮತ್ತಿತರರ ಕಾರಣಗಳಿಂದಾಗಿ ಈ ಬಾರಿ ಶೇ. 45ರಿಂದ 40ರಷ್ಟು ಮಾತ್ರ ಈರುಳ್ಳಿ ಬೆಳೆಯಲಾಗಿದೆ. ಜತೆಗೆ ಈಗ ಕೊಳೆರೋಗವೂ ಬಾಧಿಸಿದೆ ಎಂದು ಚಿತ್ರದುರ್ಗದ ಈರುಳ್ಳಿ ಬೀಜೋತ್ಪಾದಕ ಲೋಕೇಶ್‌ ಹೇಳುತ್ತಾರೆ.

Advertisement

46,637 ಚೀಲ ಪೂರೈಕೆ
ಯಶವಂತಪುರ ಮತ್ತು ದಾಸನಪುರ ಮಾರುಕಟ್ಟೆಗೆ ಮಂಗಳವಾರ 230 ಲಾರಿ ಈರುಳ್ಳಿ ಪೂರೈಕೆ ಆಗಿದೆ. ಅದರಲ್ಲಿ ಯಶವಂತಪುರ ಎಪಿಎಂಸಿಗೆ 4,324 ಮತ್ತು ದಾಸನಪುರ ಮಾರುಕಟ್ಟೆ 5,349 ಚೀಲ ಸಹಿತ ಒಟ್ಟು 46,673 ಚೀಲ ಈರುಳ್ಳಿ ಆವಕವಾಗಿದೆ. ನಾಸಿಕ್‌ ಜಿಲ್ಲೆಯಿಂದ ಪೂರೈಕೆ ಆಗುತ್ತಿರುವ ಈರುಳ್ಳಿ ಕ್ವಿಂಟಾಲ್‌ಗೆ 2 ಸಾವಿರ ರೂ.ಗಳಿಂದ 2,400 ರೂ.ವರೆಗೆ ಮತ್ತು ಸಾಧಾರಣ ಗುಣಮಟ್ಟದ್ದು ಕ್ವಿಂಟಾಲ್‌ಗೆ 1,800 ರೂ.ಗಳಿಂದ 2,300 ರೂ.ಗಳಿಗೆ ಮಾರಾಟವಾಯಿತು. ವಿಜಯಪುರದಿಂದ ಪೂರೈಕೆ ಆಗುತ್ತಿರುವ ಹಳೆ ಈರುಳ್ಳಿ ಕ್ವಿಂಟಾಲ್‌ಗೆ 2,200 ರೂ.ಗಳಿಂದ 2,400 ರೂ.ಗಳಿಗೆ ಮತ್ತು ಸಾಧಾರಣ ಗುಣಮಟ್ಟದ್ದು 1,800 ರೂ.ಗಳಿಂದ 2 ಸಾ.ರೂ.ಗಳಿಗೆ ಮಾರಾಟವಾಗುತ್ತಿದೆ.

ರಾಜ್ಯದ ಕೆಲವು ಈರುಳ್ಳಿ ಬಿತ್ತನೆ ಸರಿಯಾಗಿ ಆಗದಿರುವುದು, ಹೊಸ ಬೆಳೆ ಮಾರುಕಟ್ಟೆಗೆ ಬಾರದೆ ಇರುವುದು ಮತ್ತಿತರ ಕಾರಣಗಳಿಂದಾಗಿ ಬೆಲೆ ಏರಿಕೆಯಾಗಿದೆ. ಹೊಸ ಬೆಳೆ ಮಾರುಕಟ್ಟೆಗೆ ಬರುವ ವರೆಗೂ ಬೆಲೆ ಮತ್ತಷ್ಟು ಏರುವ ಸಾಧ್ಯತೆ ಇದೆ.
– ಉಮೇಶ್‌ ಎಸ್‌. ಮಿರ್ಜಿ, ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next