Advertisement

ಕಣ್ಣೀರು ಬರಿಸುತ್ತಿದೆ ಈರುಳ್ಳಿ: ದಿನದಿಂದ ದಿನಕ್ಕೆ 10 ರೂ. ಏರಿಕೆ!

09:51 PM Oct 20, 2020 | mahesh |

ಮಹಾನಗರ: ಈರುಳ್ಳಿ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ನವರಾತ್ರಿ ಹಬ್ಬ ಆಚರಣೆಯ ಸಂಭ್ರಮದಲ್ಲಿರುವ ಜನತೆಯ ಕಣ್ಣಲ್ಲಿ ನೀರು ಬರಿಸುತ್ತಿದೆ.

Advertisement

ಇತ್ತೀಚೆಗೆ ಈರುಳ್ಳಿ ಧಾರಣೆ ಪ್ರತಿ ದಿನ 10 ರೂ. ನಂತೆ ಏರುತ್ತಾ ಹೋಗುತ್ತಿದೆ. ಮಂಗಳವಾರ ಮಂಗಳೂರಿನ ಮಾರುಕಟ್ಟೆಯಲ್ಲಿ ಈರುಳ್ಳಿಯ ರಖಂ ಬೆಲೆ ಕೆ.ಜಿ.ಗೆ 81 ರೂ. ಹಾಗೂ ರಿಟೇಲ್‌ ಬೆಲೆ 90 ರೂ. ಇತ್ತು. ಸೋಮವಾರ ರಿಟೇಲ್‌ ಬೆಲೆ 80 ರೂ. ಹಾಗೂ ರವಿವಾರ 70 ರೂ. ಇತ್ತು. ಕಳೆದ 2 ದಿನಗಳಲ್ಲಿ 20 ರೂ. ಹೆಚ್ಚಳವಾಗಿದೆ.

ಮಂಗಳೂರಿನ ಮಾರುಕಟ್ಟೆಗೆ ಈರುಳ್ಳಿ ದೂರದ ಮಹಾರಾಷ್ಟ್ರದ ಪೂನಾ, ನಾಸಿಕ್‌, ಕೊಲ್ಹಾಪುರ, ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ ಭಾಗದಿಂದ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮತ್ತು ನೆರೆಯಿಂದ ಈರುಳ್ಳಿ ಕೃಷಿ ಹಾನಿ ಆಗಿದ್ದು, ಹಾಗಾಗಿ ಈಗ ಹೊಸ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಬೆಲೆ ಏರಿಕೆ ಆಗಿರುವುದರಿಂದ ಜನರು ಕೂಡ ಈರುಳ್ಳಿಯನ್ನು ಬೇಕಾಬಿಟ್ಟಿ ಖರೀದಿ ಮಾಡುವುದನ್ನು ನಿಲ್ಲಿಸಿದ್ದು, ಎಷ್ಟು ಬೇಕೋ ಅಷ್ಟು ಪ್ರಮಾಣದ ಈರುಳ್ಳಿಯನ್ನು ಮಾತ್ರ ಖರೀದಿಸುತ್ತಿದ್ದಾರೆ.

ಇಳಿಕೆ ಯಾವಾಗ?
ಪ್ರಸ್ತುತ ಕೊಯ್ಲಿಗೆ ಬಂದ ಈರುಳ್ಳಿ ಬೆಳೆ ಮಳೆಯಿಂದಾಗಿ ಹಾನಿಯಾಗಿದ್ದು, ಇನ್ನು ಮುಂದಿನ ಫಸಲಿನ ಈರುಳ್ಳಿ ಮಾರುಕಟ್ಟೆಗೆ ಬರುವಾಗ ಡಿಸೆಂಬರ್‌ ತಿಂಗಳು ಕಳೆಯಬಹುದು. ಈ ಹಿಂದೆ ದಾಸ್ತಾನು ಇರಿಸಿದ್ದ ಹಳೆಯ ಈರುಳ್ಳಿ ಈಗ ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ. ಬೇರೆ ಕಡೆ ಯಿಂದ ಈರುಳ್ಳಿ ಸಾಕಷ್ಟು ಆವಕ ಆದ ರಷ್ಟೇ ಮುಂದಿನ ದಿನಗಳಲ್ಲಿ ಬೆಲೆ ಇಳಿಯಬಹುದು ಎಂದು ಮಂಗಳೂರು ಎಪಿಎಂಸಿ ವರ್ತಕರ ಸಂಘ ಮತ್ತು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮಿ¤ಯಾಜ್‌ ಉದಯವಾಣಿಗೆ ತಿಳಿಸಿದ್ದಾರೆ. ಕಳೆದ ವರ್ಷ ಇದೇ ರೀತಿ ಈರುಳ್ಳಿ ಬೆಲೆ ಏರಿಕೆ ಆದಾಗ ಜನರು, ಅದರಲ್ಲೂ ಮುಖ್ಯವಾಗಿ ಹೊಟೇಲ್‌ನವರು ಈರುಳ್ಳಿಗೆ ಪರ್ಯಾಯವಾಗಿ ಕ್ಯಾಬೆಜ್‌ ಬಳಕೆ ಮಾಡಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸ ಬಹುದು.

ಬಟಾಟೆ ಕೂಡ ದುಬಾರಿ
ಏತನ್ಮಧ್ಯೆ ಬಟಾಟೆ ಬೆಲೆ ಕೂಡ ಜಾಸ್ತಿಯಾಗಿದೆ. ಮಂಗಳವಾರ ಬಟಾಟೆ ರಖಂ ಬೆಲೆ ಕೆ.ಜಿ. ಗೆ 40 ರೂ. ಹಾಗೂ ರಿಟೇಲ್‌ ಬೆಲೆ 50 ರೂ. ಇತ್ತು. ಬಟಾಟೆ ಅಧಿಕವಾಗಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕದ ಬೆಳಗಾವಿ, ಚಿಕ್ಕಮಗಳೂರು ಮತ್ತಿತರ ಭಾಗಗಳಲ್ಲಿ ಮಳೆಯಿಂದ ಬೆಳೆ ಹಾನಿ ಆಗಿ ಪೂರೈಕೆಯಲ್ಲಿ ಏರುಪೇರು ಆಗಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಮಾರುಕಟ್ಟೆ ಮೂಲಗಳು ವಿವರಿಸಿವೆ.

Advertisement

ಖರೀದಿ ಕಡಿಮೆ
ಕೆಲವು ದಿನಗಳಿಂದ ಈರುಳ್ಳಿ ಬೆಲೆ ದಿನಕ್ಕೆ 10 ರೂ.ನಂತೆ ಹೆಚ್ಚಳ ಆಗುತ್ತಿದೆ. ಬೇಕಾದಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ. ಜನರ ಈರುಳ್ಳಿ ಖರೀದಿ ಸಾಮರ್ಥ್ಯವೂ ಕಡಿಮೆಯಾಗಿದೆ. .
-ನಿತಿನ್‌ ಶೆಟ್ಟಿ, ತರಕಾರಿ ವ್ಯಾಪಾರಿ.

Advertisement

Udayavani is now on Telegram. Click here to join our channel and stay updated with the latest news.

Next