ಅರೆ, ಇದೇನು ಈರುಳ್ಳಿ ದರ ಶತಕ ದಾಟಿದ್ದು, ಎಲ್ಲೂ ಕೂಡ ಬೆಲೆ ಕಡಿಮೆಯಾಗಿರುವ ಸುದ್ದಿ ಇಲ್ಲ. ಇದು ಸಾಧ್ಯವೇ ಎಂದು ನೀವು ಪ್ರಶ್ನಿಸಬಹುದು.
Advertisement
ಹೌದು, ಇದು ನಿಜ. ಬಿಹಾರದಲ್ಲಿ ರಾಜ್ಯ ಸಹಕಾರ ಮಾರುಕಟ್ಟೆ ಮಂಡಳಿಯು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಈರುಳ್ಳಿ ನೀಡುವ ಉದ್ದೇಶದಿಂದ ಸಬ್ಸಿಡಿ ದರದಲ್ಲಿ 35 ರೂ.ಗೆ ಮಾರಾಟ ಮಾಡುತ್ತಿದೆ. ಇದಕ್ಕಾಗಿ ಪಾಟ್ನಾದ ಸುಮಾರು 25ಕ್ಕೂ ಅಧಿಕ ಪ್ರದೇಶದಲ್ಲಿ ಮೊಬೈಲ್ ವಾಹನದ ಮೂಲಕ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕಾಲೊನಿಗೂ ಈ ವಾಹನ ಬರುತ್ತದೆ. ಒಬ್ಬರು ಗರಿಷ್ಠ ಎರಡು ಕೆಜಿ ಮಾತ್ರ ಖರೀದಿಸಬಹುದು.
ಈ ಮೊಬೈಲ್ ವಾಹನ ಬರುತ್ತಿದ್ದಂತೆ ಗ್ರಾಹಕರು ಮುತ್ತಿಕೊಳ್ಳುತ್ತಿದ್ದು, ಸುಮಾರು ದೂರದವರೆಗೂ ಕ್ಯೂನಲ್ಲಿ ನಿಂತಿರುತ್ತಾರೆ. ಬೇಗ ಈರುಳ್ಳಿ ಸಿಗದಿದ್ದರೆ ಜನರು ರೊಚ್ಚಿಗೇಳುವ ಸಾಧ್ಯತೆ ಇರುವುದರಿಂದ ವಾಹನದ ಸಿಬ್ಬಂದಿ, ಮಾರಾಟಗಾರರು ಹೆಲ್ಮೆಟ್ ಧರಿಸಿಕೊಂಡೇ ಈರುಳ್ಳಿ ಮಾರುತ್ತಾರೆ. ಅರಹಾ ಪ್ರದೇಶದಲ್ಲಿ ಜನರ ದೊಂಬಿ ಉಂಟಾಗಿ ಕಲ್ಲು ತೂರಿದ್ದರಿಂದ ಹಲವರು ಗಾಯಗೊಂಡಿದ್ದರು. ನಮಗೆ ಪೊಲೀಸ್ ಭದ್ರತೆ ನೀಡಿಲ್ಲ. ಹೀಗಾಗಿ ನಾವೇ ಸ್ವಯಂ ರಕ್ಷಣೆಗೆ ಹೆಲ್ಮೆಟ್ ಧರಿಸಿಕೊಂಡು ಈರುಳ್ಳಿ ಮಾರುತ್ತಿದ್ದೇವೆ ಎಂದು ಸಹಕಾರದ ಸಂಘದ ಸಿಬ್ಬಂದಿ ತಿಳಿಸಿದ್ದಾರೆ. ಪ್ರತಿ ಕಾಲೊನಿಗೂ ಈ ಮೊಬೈಲ್ ವಾಹನ ಬರುತ್ತದೆ. ಜನರಿಗೆ ಅಗತ್ಯವಿರುವಷ್ಟು ಈರುಳ್ಳಿ ಪೂರೈಸಲಾಗುವುದು. ಗಲಾಟೆ, ದಾಂಧಲೆಗೆ ಅವಕಾಶ ಕೊಡಬೇಡಿ ಎಂದು ಸಂಘದ ನೌಕರರು ಮನವಿ ಮಾಡಿದ್ದಾರೆ.