Advertisement
ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೊಂಡ ಎರಡು ದಿನಗಳ ಬಳಿಕ ಸಿ.ಡಬ್ಲ್ಯು.ಸಿ. ಸಭೆಯು ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸೋನಿಯಾ ಗಾಂಧಿ, ಮಾಜೀ ಪ್ರಧಾನಿ ಮನಮೋಹನ್ ಸಿಂಗ್ ಮೊದಲಾದ ಉನ್ನತ ಸ್ತರದ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. 58 ವರ್ಷಗಳ ಬಳಿಕ ಸಿ.ಡಬ್ಲ್ಯು.ಸಿ. ಸಭೆಯು ಗುಜರಾತ್ ನಲ್ಲಿ ನಡೆಯುತ್ತಿರುವುದು ವಿಶೇಷ. ಈ ಹಿಂದೆ 1961ರಲ್ಲಿ ಭಾವನಗರದಲ್ಲಿ ಸಿ.ಡಬ್ಲ್ಯು.ಸಿ. ಸಭೆಯು ನಡೆದಿತ್ತು.
ಇನ್ನು ಗುಜರಾತ್ ನಲ್ಲಿ ಇಂದು ನಡೆಯಲಿರುವ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಭೆಯು ಒಂದು ಕಾರಣಕ್ಕೆ ವಿಶೇಷತೆಯನ್ನು ಪಡೆದುಕೊಳ್ಳಲಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಪಕ್ಷಾದ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಒಂದೇ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.
Related Articles
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯಗಳನ್ನು ದೇಶದ ಮತದಾರರ ಮುಂದಿಡುವ ಮೂಲಕ ಮೋದಿ-ಶಾ ಜೋಡಿಯನ್ನು ಕಟ್ಟಿಹಾಕಲು ಕಾರ್ಯತಂತ್ರವನ್ನು ಹೆಣೆಯುವ ಕುರಿತಾಗಿ ಇಂದಿನ ಸಭೆಯಲ್ಲಿ ಉನ್ನತಮಟ್ಟದ ‘ಕೈ’ ನಾಯಕರು ಚರ್ಚೆಯನ್ನು ನಡೆಸಲಿದ್ದಾರೆ. ಮೋದಿ ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೇಶದ ಜನರಿಗೆ ನೀಡಿದ ಪೊಳ್ಳು ಭರವಸೆಗಳನ್ನೂ ಸಹ ಬಯಲು ಮಾಡುವ ಕಾರ್ಯತಂತ್ರವನ್ನು ಪಕ್ಷವು ಹೆಣೆಯಲಿದೆ ಎಂಬ ವಿಚಾರವನ್ನು ಗುಜರಾತ್ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಾಜೀವ್ ಸತಾವ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಟೇಲ್ ಮೀಸಲಾತಿ ಹೋರಾಟದ ರೂವಾರಿ ಹಾರ್ಧಿಕ್ ಪಟೇಲ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ.
Advertisement