ಒನ್ ಪ್ಲಸ್ ಕಂಪೆನಿ ಇತ್ತೀಚಿಗೆ ಒನ್‍ಪ್ಲಸ್ 9 ಆರ್ ಟಿ ಎಂಬ ಹೊಸ ಫೋನನ್ನು ಹೊರತಂದಿದೆ. ಈ ಮುಂಚೆ ಒನ್‍ಪ್ಲಸ್ 9 ಪ್ರೊ. ಒನ್‍ಪ್ಲಸ್ 9 ಹಾಗೂ ಒನ್ ಪ್ಲಸ್ 9 ಆರ್ ಫೋನ್‍ಗಳನ್ನು ಹೊರತಂದಿತ್ತು. ಅದರ 9 ಸರಣಿಯ ಕುಟುಂಬಕ್ಕೆ ಹೊಸ ಸೇರ್ಪಡೆ 9 ಆರ್ ಟಿ. ಈ ಹೊಸ ಫೋನ್ ದೈನಂದಿನ ಬಳಕೆಯಲ್ಲಿ ಹೇಗಿದೆ? ನೀಡುವ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆಯೇ? ವಿವರ ಇಲ್ಲಿದೆ.
ಪರದೆ: ಇದರ ಪರದೆ 6.62 ಇಂಚಿನ ಅಮೋಲೆಡ್ ಪರದೆ ಹೊಂದಿದೆ. 120 ರಿಫ್ರೆಶ್ ರೇಟ್, 2400 * 1080 ಪಿಕ್ಸಲ್ ಉಳ್ಳದ್ದಾಗಿದೆ. ಸ್ಪರ್ಶ ಸಂವೇದನ ಚೆನ್ನಾಗಿದೆ. ಯಾವುದೇ ಅಡೆತಡೆ ಇಲ್ಲದೇ ಸರಾಗವಾಗಿ ಪರದೆ ಸ್ಕ್ರಾಲ್ ಆಗುತ್ತದೆ. ಅಮೋಲೆಡ್ ಪರದೆ ಹೊಂದಿರುವುದರಿಂದ ಆಕರ್ಷಕ ನೋಟ ಕಂಡುಬರುತ್ತದೆ. ವಾತಾವರಣದಲ್ಲಿರುವ ಬೆಳಕಿಗನುಗಣವಾಗಿ ಪರದೆಯ ಬ್ರೈಟ್‍ನೆಸ್ ಅನ್ನು ತಾನೇ ತಾನಾಗಿ ಹೊಂದಿಸಿಕೊಳ್ಳುತ್ತದೆ. ಅತ್ತ ದೊಡ್ಡದೂ ಅಲ್ಲ ಅಥವಾ ಚಿಕ್ಕದೂ ಅಲ್ಲದಂತೆ ಪರದೆಯ ಅಳತೆ ಸಮರ್ಪಕವಾಗಿದೆ. ಪರದೆಯ ಎಡ ಮೂಲೆಯಲ್ಲಿ ಸೆಲ್ಫೀ ಕ್ಯಾಮರಾ ಲೆನ್ಸ್ ಇದೆ. ಇದನ್ನು ಮೊಬೈಲ್ ಪರಿಭಾಷೆಯಲ್ಲಿ ಪಂಚ್ ಹೋಲ್ ಕ್ಯಾಮರಾ ಎನ್ನುತ್ತಾರೆ. ಪರದೆಯನ್ನು ಸಣ್ಣಪುಟ್ಟ ಬೀಳುವಿಕೆಗೆ ಒಡೆಯದಂತೆ ರಕ್ಷಿಸಲು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯಿದೆ. ಪರದೆಯ ಮೇಲೆಯೇ ಬೆರಳಚ್ಚು ಸ್ಕ್ಯಾನರ್ ಇದೆ. ಮತ್ತು ಇದು ವೇಗವಾಗಿ ಕಾರ್ಯ ನಿರ್ವಹಿಸುತ್ತದೆ.
ಕಾರ್ಯಾಚರಣಾ ವ್ಯವಸ್ಥೆ: ಇದು ಆಂಡ್ರಾಯ್ಡ್ 11 ಓಎಸ್ ಹೊಂದಿದೆ. ಒನ್ ಪ್ಲಸ್ ನ ಹೆಚ್ಚುಗಾರಿಕೆಯಾದ ಆಕ್ಸಿಜನ್ ಓಎಸ್ ಒಳಗೊಂಡಿದೆ. ಒನ್ ಪ್ಲಸ್ ಈಗ ಕೆಲವು ದೇಶಗಳಲ್ಲಿ ತನ್ನ ಹೊಸ ಫೋನ್‍ಗಳಿಗೆ ಕಲರ್ ಓಎಸ್ ಬಳಸುತ್ತಿದೆ. ಆದರೆ ಭಾರತದಲ್ಲಿ ಆಕ್ಸಿಜನ್ ಓಎಸ್ ಅನ್ನು ಇನ್ನೂ ಉಳಿಸಿಕೊಂಡಿದೆ. ಇದರಲ್ಲಿ ಆಕ್ಸಿಜನ್ ಓಎಸ್ 11 ಇದೆ. ಈ ಫೋನಿಗೆ ಮೂರು ಆಂಡ್ರಾಯ್ಡ್ ಅಪ್‍ಡೇಟ್‍ಗಳು ದೊರಕುವುದಾಗಿ ಕಂಪೆನಿ ತಿಳಿಸಿದೆ. ಅಂದರೆ ಮುಂದೆ ಆಂಡ್ರಾಯ್ಡ್ 12, 13, 14 ಅಪ್‍ಡೇಟ್‍ಗಳು ಈ ಮೊಬೈಲ್‍ಗೆ ದೊರಕಲಿವೆ. ಒನ್‍ಪ್ಲಸ್ ಕಾರ್ಯಾಚರಣಾ ವ್ಯವಸ್ಥೆ (ಓಎಸ್) ಎಂದಿನಂತೆ ಸರಾಗವಾಗಿದೆ. ಐಕಾನ್‍ಗಳ ಶೈಲಿ ವಾಲ್‍ಪೇಪರ್ ಗಳ ವಿನ್ಯಾಸ ಒನ್ ಪ್ಲಸ್ ನಲ್ಲಿ ತನ್ನದೇ ಸ್ಟಾಂಡರ್ಡ್ ಹೊಂದಿರುವುದರಿಂದ ಜಾತ್ರೆ ರೀತಿಯಲ್ಲಿಲ್ಲದೇ ನೀಟ್ ಆಗಿದೆ.
ಮೊಬೈಲ್ ವಿನ್ಯಾಸ: ಇದರ ಹಿಂಬದಿ ಕೇಸ್ ಲೋಹದ್ದಾಗಿದೆ. ಫ್ರೇಂ ಕೂಡ ಲೋಹದಿಂದ ಮಾಡಲ್ಪಟ್ಟಿದೆ. ಈ ಫೋನು ಹ್ಯಾಕರ್ ಬ್ಲ್ಯಾಕ್ ಹಾಗೂ ನ್ಯಾನೋ ಸಿಲ್ವರ್ ಎರಡು ಬಣ್ಣಗಳಲ್ಲಿ ದೊರಕುತ್ತಿದ್ದು, ಹ್ಯಾಕರ್ ಬ್ಲ್ಯಾಕ್ ಹೆಸರಿನ ಕಪ್ಪು ಬಣ್ಣದ ಫೋನು ವಿಶಿಷ್ಟವಾಗಿದೆ. ಇತ್ತೀಚಿಗೆ ಕಪ್ಪು ಬಣ್ಣದ ಫೋನ್‍ಗಳ ಟ್ರೆಂಡ್ ಕಡಿಮೆಯಾಗಿತ್ತು. ಈ ಫೋನ್ ಮೂಲಕ ಸಂಪೂರ್ಣ ಕಪ್ಪು ಬಣ್ಣ ಮತ್ತೆ ಬಂದಿದೆ. ಇಡೀ ಮೊಬೈಲ್ ಕಪ್ಪು ಬಣ್ಣದಿಂದ ಕಂಗೊಳಿಸುತ್ತದೆ. ಕಪ್ಪು ಬಣ್ಣದ ಆವೃತ್ತಿಯಲ್ಲಿ ಹಿಂಬದಿಯನ್ನು ಬೆರಳಚ್ಚು ಗುರುತು ಮೂಡದಂತೆ ವಿನ್ಯಾಸ ಮಾಡಲಾಗಿದೆ. ಫೋನಿನ ಅಳತೆ ಒಂದು ಕೈಯಲ್ಲಿ ಹಿಡಿದು ಬಳಸಲು ಅನುಕೂಲಕರವಾಗಿದೆ. ಫೋನಿನ ತೂಕ 199 ಗ್ರಾಂ ಇದೆ. ಯಾವುದೇ ಕವರ್ ಇಲ್ಲದೇ ಬಳಸಿದರೆ ಬಹಳ ಹಗುರವಾಗಿ ಸ್ಲಿಮ್ ಆಗಿರುತ್ತದೆ.
ಇದನ್ನೂ ಓದಿ:ರಷ್ಯಾ, ಉಕ್ರೇನ್ ಸಮರ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಕುಸಿತ;ಲಾಭಗಳಿಸಿದ ITC ಷೇರು
ಪ್ರೊಸೆಸರ್: ಇದರಲ್ಲಿ ಅತ್ಯುನ್ನತ ದರ್ಜೆಯ ಸ್ನಾಪ್‍ಡ್ರಾಗನ್ 888 ಪ್ರೊಸೆಸರ್ ಇದೆ. ಇದೇ ಪ್ರೊಸೆಸರ್ ಅನ್ನು 70 ಸಾವಿರ ರೂ. ಬೆಲೆಯ ಒನ್ ಪ್ಲಸ್ 9 ಪ್ರೊನಲ್ಲೂ ಬಳಸಲಾಗಿದೆ. ಇದು 5ಜಿ 8 ಬ್ಯಾಂಡ್ ಗಳನ್ನು ಬೆಂಬಲಿಸುತ್ತದೆ. ನೆಟ್ ವರ್ಕ್ ಸಿಗ್ನಲ್ ಸ್ವೀಕರಿಸುವ ಸಾಮರ್ಥ್ಯ ಚೆನ್ನಾಗಿದೆ. ಫೋನನ್ನು ಹೆಚ್ಚು ಬಳಸಿದಾಗಲೂ ಬಿಸಿಯಾಗುವುದಿಲ್ಲ. ಸ್ವಲ್ಪ ಬೆಚ್ಚಗಾಗುತ್ತಾದರೂ, ಕೆಲವು ಫೋನ್‍ಗಳನ್ನು ಬಳಸಿದಾಗ ಆಗುವಂತೆ ಬಿಸಿಯ ಅನುಭವ ನೀಡುವುದಿಲ್ಲ.
ಬ್ಯಾಟರಿ: 4500 ಎಂಎಎಚ್ ಬ್ಯಾಟರಿ ಹೊಂದಿದೆ. ಇದಕ್ಕೆ 65 ವ್ಯಾಟ್ಸ್ ವಾರ್ಪ್ ಚಾರ್ಜರ್ ನೀಡಲಾಗಿದೆ. ಇದು ಸ್ನಾಪ್‍ಡ್ರಾಗನ್ 888 ಹೆಚ್ಚು ಸಾಮರ್ಥ್ಯದ ಪ್ರೊಸೆಸರ್ ಹೊಂದಿರುವುದರಿಂದ ದೀರ್ಘ ಕಾಲದ ಬ್ಯಾಟರಿ ಬಾಳಿಕೆಯನ್ನು ನಿರೀಕ್ಷಿಸುವಂತಿಲ್ಲ. ಒಂದು ದಿನದ ಸಾಧಾರಣ ಬಳಕೆಗೆ ಅಡ್ಡಿಯಿಲ್ಲ. ಐದು ಅಥವಾ ಐದೂವರೆ ಗಂಟೆಗಳ ಪರದೆ ಬಳಕೆ ಕಾಲ (ಸ್ಕ್ರೀನ್ ಆನ್ ಟೈಮ್) ಹೊಂದಿದೆ. ಇದಕ್ಕೆ 65 ವಾರ್ಪ್ ಚಾರ್ಜರ್ ನೀಡಿರುವುದರಿಂದ ವೇಗವಾಗಿ ಚಾರ್ಜ್ ಆಗುತ್ತದೆ. ಸೊನ್ನೆಯಿಂದ 10 ನಿಮಿಷಕ್ಕೆ ಶೇ. 30ರಷ್ಟು, 15 ನಿಮಿಷಕ್ಕೆ ಶೇ. 50ರಷ್ಟು, 20 ನಿಮಿಷಕ್ಕೆ ಶೇ. 70ರಷ್ಟು, 30 ನಿಮಿಷಕ್ಕೆ ಶೇ. 95 ರಷ್ಟು ಚಾರ್ಜ್ ಆಗುತ್ತದೆ. ಶೂನ್ಯದಿಂದ ಶೇ. 100ರಷ್ಟು ಚಾರ್ಜ್ ಆಗಲು 35 ನಿಮಿಷ ಸಾಕು.
ಕ್ಯಾಮರಾ: ಇದು 50 ಮೆ.ಪಿ. ಮುಖ್ಯ ಕ್ಯಾಮರಾ. ಸೋನಿ ಐಎಂಎಕ್ಸ್ 766 ಸೆನ್ಸರ್ ಹೊಂದಿದೆ. ಆಪ್ಟಿಕ್ ಇಮೇಜ್ ಸ್ಪೆಬಿಲೈಸೇಷನ್ ಸೌಲಭ್ಯ ಇದೆ. 16 ಮೆ.ಪಿ. ವೈಡ್ ಆಂಗಲ್ ಲೆನ್ಸ್ ಹಾಗು 2 ಮೆ.ಪಿ. ಮ್ಯಾಕ್ರೋ ಲೆನ್ಸ್ ಹೊಂದಿದೆ. ಸೆಲ್ಫೀ ಕ್ಯಾಮರಾ 16 ಮೆ.ಪಿ. ಇದೆ.
ಕ್ಯಾಮರಾ ವಿಷಯದಲ್ಲಿ ಮೊಬೈಲ್ ಉತ್ತಮ ಫಲಿತಾಂಶ ನೀಡುತ್ತದೆ. 108 ಮೆಗಾಪಿಕ್ಸಲ್ ಎಂದು ಕೆಲವು ಬ್ರಾಂಡ್ ಗಳು ಪ್ರಚಾರ ಮಾಡುವುದುಂಟು. ಆದರೆ ಮೆಗಾಪಿಕ್ಸಲ್ ಎಂಬುದು ಮುಖ್ಯವಲ್ಲ. ಕ್ಯಾಮರಾ ಲೆನ್ಸ್ ಗುಣಮಟ್ಟ ಮುಖ್ಯ ಎಂಬುದು ಇದರ 50 ಮೆಗಾ ಪಿಕ್ಸಲ್ ಕ್ಯಾಮರಾದ ಫೋಟೋಗಳನ್ನು ನೋಡಿದಾಗ ತಿಳಿಯುತ್ತದೆ. ಕ್ಯಾಮರಾದಲ್ಲಿ ಉತ್ತಮ ಫೋಟೋಗಳು ಮೂಡಿ ಬರುತ್ತವೆ. ಸೆಲ್ಫೀ ಕ್ಯಾಮರಾ ಕೂಡ ಉತ್ತಮವಾಗಿದೆ.
ಈ ಫೋನಿನ ದರ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಆವೃತ್ತಿಗೆ 42,999 ರೂ. ಹಾಗೂ 12 ಜಿಬಿ ರ್ಯಾಮ್ ಮತ್ತು 256 ಆಂತರಿಕ ಸಂಗ್ರಹ ಆವೃತ್ತಿಗೆ 46,999 ರೂ. ಇದೆ. ಅಮೆಜಾನ್‍ನಲ್ಲಿ ಈಗ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಕೊಂಡರೆ 4000 ರೂ. ರಿಯಾಯಿತಿ ಇದೆ.
ಒಟ್ಟಾರೆ ಇದೊಂದು ಫ್ಲ್ಯಾಗ್‍ಶಿಪ್ ದರ್ಜೆಯ ಫೋನ್ ಆಗಿದ್ದು, ಒನ್‍ಪ್ಲಸ್ ಕಂಪೆನಿಯ ಇತ್ತೀಚಿನ ಫ್ಲ್ಯಾಗ್‍ಶಿಪ್ ಫೋನ್‍ಗಳಿಗೆ ಹೋಲಿಸಿದರೆ ದರ ಮಿತವ್ಯಯ ಎನ್ನಬಹುದು. ಒನ್‍ಪ್ಲಸ್‍ನ ಗುಣಮಟ್ಟಕ್ಕೆ ತಕ್ಕಂತೆ ಈ ದರಕ್ಕೆ ನಿಸ್ಸಂಶಯವಾಗಿ ಇದೊಂದು ಉತ್ತಮ ಫೋನ್.
ಕೆ.ಎಸ್. ಬನಶಂಕರ ಆರಾಧ್ಯ