Advertisement

ಒನ್‌ಪ್ಲಸ್ 9 ಪ್ರೊ : ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

03:29 PM May 10, 2021 | Team Udayavani |

ಆ್ಯಪಲ್ ಐಫೋನ್, ಸ್ಯಾಮ್ ಸಂಗ್ ಗೆಲಾಕ್ಸಿಯ ಫ್ಲಾಗ್‌ಶಿಪ್ ಸರಣಿಯ  ಅತ್ಯುನ್ನತ ದರ್ಜೆಯ ಫೋನ್‌ಗಳ ದರ ಪ್ರಸ್ತುತ 1 ಲಕ್ಷ ರೂ. ಇದೆ. ಮೇಲ್ಮಧ್ಯಮ ವರ್ಗ ಹಾಗೂ ಮಿತವ್ಯಯ ಬಯಸುವ ಹಣವಂತರು ಅಷ್ಟೊಂದು ಹಣವನ್ನು ಒಂದು ಮೊಬೈಲ್ ಫೋನ್‌ಗೆ ಕೊಡಬೇಕಲ್ಲ ಎಂದು ಹಿಂಜರಿಯುತ್ತಾರೆ. ಆದರೂ ಮಿಡ್‌ಲ್ ರೇಂಜ್ ನಿಂದ ಒಂದು ಅತ್ಯುನ್ನತ ದರ್ಜೆಯ ಮೊಬೈಲ್ ಕೊಳ್ಳಬೇಕು ಎಂಬ ಆಸೆ ಇರುತ್ತದೆ. ಹೀಗೆ ಅ್ಯತ್ಯುನ್ನತ ಫೀಚರ್‌ಗಳೂ ಇರಬೇಕು ಆದರೆ ದರ ಅತ್ಯಂತ ದುಬಾರಿಯಾಗಿರಬಾರದು ಎಂದು ಬಯಸುವವರ ಮೆಚ್ಚಿನ ಬ್ರಾಂಡ್ ಒನ್‌ಪ್ಲಸ್.

Advertisement

ಒನ್‌ಪ್ಲಸ್ ಕಂಪೆನಿ ಪ್ರತಿ ವರ್ಷ ಒಂದು ಸರಣಿಯ ಫೋನ್‍ ಗಳನ್ನು ಬಿಡುಗಡೆ ಮಾಡುತ್ತದೆ. ಈ ವರ್ಷ 9 ಸರಣಿಯ ಫೋನ್ ಗಳನ್ನು ಇತ್ತೀಚಿಗೆ ಹೊರತಂದಿದೆ. ಒನ್‍ ಪ್ಲಸ್‍ 9 ಪ್ರೊ, ಒನ್‍ಪ್ಲಸ್‍ 9 ಮತ್ತು ಒನ್‍ ಪ್ಲಸ್‍ 9 ಆರ್‍. ಇದರಲ್ಲಿ ಅತ್ಯುನ್ನತ ಮಾದರಿ (ಹೈಎಂಡ್‍ ಮಾಡೆಲ್) ಒನ್‍ಪ್ಲಸ್‍ 9 ಪ್ರೊ. ಈ ಫೋನ್ ಬಳಕೆಯಲ್ಲಿ ಹೇಗಿದೆ ನೋಡೋಣ.

ಇದರ ದರ 8 ಜಿಬಿ ರ್ಯಾಮ್, 128 ಜಿಬಿ ಸಂಗ್ರಹ ಆವೃತ್ತಿಗೆ 64,999 ರೂ. ಇದೆ. ಅಮೆಜಾನ್‌ನಲ್ಲಿ ಎಸ್‌ಬಿಐ ಕಾರ್ಡ್‌ಗೆ 4 ಸಾವಿರ ರಿಯಾಯಿತಿ ಸಹ ಇದೆ.

ವಿನ್ಯಾಸ ಮತ್ತು ಡಿಸ್‌ಪ್ಲೇ: ಇದರ ವಿನ್ಯಾಸ ಎಂದಿನ ಒನ್‌ಪ್ಲಸ್ ಫೋನ್‌ಗಳಂತೆ ಗಮನ ಸೆಳೆಯುತ್ತದೆ. ಲೋಹದ ಫ್ರೇಂ ಇದೆ. ಹಿಂಬದಿ ಮೆಟಲ್ ಬಾಡಿ ಎಂದು ಕನ್‌ಫ್ಯೂಸ್ ಮಾಡುವಂತೆ ಗಾಜಿನ ದೇಹವನ್ನು ವಿನ್ಯಾಸ ಮಾಡಲಾಗಿದೆ. ಕನ್ನಡಿಯಂತೆ ಕಾಣುವ ವಿನ್ಯಾಸ ಮಾಡಲಾಗಿದೆ. ಸಿಮ್‌ಟ್ರೇ, ಯುಎಸ್‌ಬಿ ಟೈಪ್ ಸಿ ಪೋರ್ಟ್, ಸ್ಟೀರಿಯೋ ಸ್ಪೀಕರ್‌ಗಳನ್ನು ಫೋನಿನ ಕೆಳಭಾಗದಲ್ಲಿ ನೀಡಲಾಗಿದೆ.  ಎಡಭಾಗದಲ್ಲಿ ಧ್ವನಿ ಹೆಚ್ಚು ಕಡಿಮೆ ಮಾಡುವ ಬಟನ್ ಇದೆ. ಬಲಭಾಗದಲ್ಲಿ ಆನ್ ಅಂಡ್ ಆಫ್ ಬಟನ್ ಮತ್ತು ಅದರ ಮೇಲೆ ಒನ್‌ಪ್ಲಸ್‌ನಲ್ಲಿ ಮಾತ್ರ ಕಾಣುವ ವೈಬ್ರೇಟ್ ಮತ್ತು ರಿಂಗ್ ಮೋಡ್‌ಗೆ ಹಾಕುವ ಬಟನ್ ಇದೆ. ಇದರಲ್ಲಿ 6.7 ಇಂಚಿನ ಫುಲ್‌ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಇದೆ.ಅಂಚಿನಲ್ಲಿ ಮಡಚಿರುವ (ಕರ್ವ್‌ಡ್) ಪರದೆ ಇರುವುದರಿಂದ, ನೋಡಿದವರಿಗೆ ಇದೊಂದು ಪ್ರೀಮಿಯಂ ಫೋನ್ ಎಂಬುದು ಎದ್ದು ಕಾಣುತ್ತದೆ. ಸುಂದರವಾದ ವಿನ್ಯಾಸ ಮಾಡಲಾಗಿದೆ. 120 ಹರ್ಟ್‌ಜ್ ರಿಫ್ರೆಶ್‌ರೇಟ್. 525 ಪಿಪಿಐ ಇರುವುದರಿಂದ ಚಿತ್ರಗಳು ವಿಡಿಯೋಗಳು ಬಹಳ ಸುಂದರವಾಗಿ, ಕಾಣುತ್ತವೆ. ಮುಂಬದಿ ಕ್ಯಾಮರಾಗಾಗಿ ಮೇಲಿನ ಎಡಮೂಲೆಯಲ್ಲಿ ಪಂಚ್‌ಹೋಲ್ ಡಿಸ್‌ಪ್ಲೇ ಇದೆ. ಪರದೆಯ ಮೇಲೆಯೆ ಬೆರಳಚ್ಚು ಸ್ಕ್ಯಾನರ್ ಇದೆ. ಮತ್ತದರ ಸಂವೇದಕ ವೇಗವಾಗಿ ಕೆಲಸ ಮಾಡುತ್ತದೆ.

Advertisement

ಸಾಮರ್ಥ್ಯ: ಇದರಲ್ಲಿರುವುದು ಸ್ನ್ಯಾಪ್‌ಡ್ರಾಗನ್ 888 ಹೊಸ ಅತ್ಯುನ್ನತ ಪ್ರೊಸೆಸರ್. ಪ್ರೊಸೆಸರ್‌ನ ವೇಗದ ಬಗ್ಗೆ ಮಾತನಾಡುವಂತೆಯೇ ಇಲ್ಲ. ಬಹಳ ವೇಗವಾಗಿ ಕಾರ್ಯಾಚರಿಸುತ್ತದೆ. ಹೆಚ್ಚು ಬೆಲೆಯ ಫೋನ್‌ಗಳಲ್ಲಿ ಗ್ರಾಹಕರು ಬಯಸುವುದು ಇದನ್ನೇ. ದೊಡ್ಡ ಗೇಮ್‌ಗಳನ್ನು ತಡೆಯಿಲ್ಲದಂತೆ ಸರಾಗವಾಗಿ ಪ್ಲೇ ಮಾಡುತ್ತದೆ. ಅಲ್ಲದೇ ಸಾಮಾನ್ಯ ಬಳಕೆಯ ಆ್ಯಪ್‌ಗಳಿರಬಹುದು, ಮೇಲ್‌ಗಳ ತೆರೆದುಕೊಳ್ಳುವಿಕೆ ಇತ್ಯಾದಿ ವೇಗವಾಗಿ ಆಗುತ್ತದೆ. ಆದರೆ ಆರಂಭದಲ್ಲಿ ಕ್ಯಾಮರಾ ಮತ್ತು ವಿಡಿಯೋ ಶೂಟ್ ಮಾಡುವಾಗ ಫೋನ್ ತುಂಬಾ ಬಿಸಿಯಾಗಿ, ಕ್ಯಾಮರಾ ಆಗುತ್ತಿತ್ತು. ಹೊಸ ಅಪ್‌ಡೇಟ್‌ನಲ್ಲಿ ಈ ಸಮಸ್ಯೆ ನಿವಾರಿಸಲಾಗಿದೆ.

ಆಂಡ್ರಾಯ್ಡ್ 11 ಆಧಾರಿತ ಆಕ್ಸಿಜನ್ ಓಎಸ್ ನೀಡಲಾಗಿದೆ. ಒನ್‌ಪ್ಲಸ್‌ನ ಆಕ್ಸಿಜನ್ ಓಎಸ್ ಶುದ್ಧ ಆಂಡ್ರಾಯ್ಡ್ ಗೆ ಬಹಳ ಹತ್ತಿರವಾಗಿದೆ. ಹೆಚ್ಚಿನ ಯಾವುದೇ ಅಳವಡಿಕೆಯನ್ನು ಒನ್‌ಪ್ಲಸ್ ಮಾಡಿಲ್ಲ. ಹೀಗಾಗಿ ಶುದ್ಧ ಆಂಡ್ರಾಯ್ಡ್  ಯೂಸರ್‌ಫೇಸೇ ಇಲ್ಲಿ ಹೆಚ್ಚಿಗೆ ಇದೆ. ಹೀಗಾಗಿ ಪ್ಯೂರ್‍ ಆಂಡ್ರಾಯ್ಡ್ ಫೋನ್‍ ಬಯಸುವವರಿಗೆ ಇದು ಇಷ್ಟವಾಗುತ್ತದೆ.

ಕ್ಯಾಮರಾ:  ಹ್ಯಾಸಲ್‌ಬ್ಲಾಡ್ ಕ್ಯಾಮರಾ ಇದರ ಹೆಗ್ಗಳಿಕೆ. ಸ್ವೀಡನ್ ಮೂಲದ ಹ್ಯಾಸೆಲ್‌ಬ್ಲಾಡ್ ಕಂಪೆನಿ ಅತ್ಯುನ್ನತ ಕ್ಯಾಮರಾ ವೈಶಿಷ್ಟ್ಯಗಳಿಗೆ ಹೆಸರಾದದ್ದು. ಅದರ ಲೆನ್ಸ್ ಅನ್ನು ಒನ್‌ಪ್ಲಸ್ 9 ಪ್ರೊ ದಲ್ಲಿ ಬಳಸಲಾಗಿದೆ. ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ ಲೆನ್ಸ್  ಹೊಂದಿದೆ. 48 ಮೆಪಿ. ಮುಖ್ಯ ಲೆನ್ಸ್, 50 ಮೆ.ಪಿ. ಅಲ್ಟ್ರಾ ವೈಡ್, 8 ಮೆ.ಪಿ. ಟೆಲಿಫೋಟೋ ಮತ್ತು 2 ಮೆ.ಪಿ. ಮೊನೊಕ್ರೋಮ್‍ ಫೋಟೋಗಳ ಗುಣಮಟ್ಟ ಒಂದೊಳ್ಳೆಯ ಕ್ಯಾಮರಾದಲ್ಲಿ ತೆಗೆದಷ್ಟೇ ಇದೆ. ಇಷ್ಟು ಹೆಚ್ಚು ಬೆಲೆ ಕೊಟ್ಟ ಮೇಲೆ ಕ್ಯಾಮರಾ ಚೆನ್ನಾಗಿ ಇರಲೇಬೇಕು.

ಉತ್ತಮ ಕ್ಯಾಮರಾ ಫೋನ್ ಬೇಕೆನ್ನುವವರು ಇದನ್ನು ಪರಿಗಣಿಸಬಹುದು. ಸೆಲ್ಫೀ ಕ್ಯಾಮರಾಗೆ 16 ಮೆಗಾಪಿಕ್ಸಲ್ ನೀಡಲಾಗಿದೆ. ಸೆಲ್ಫೀ ಕ್ಯಾಮರಾ ಗುಣಮಟ್ಟ ಕೂಡ ಚೆನ್ನಾಗಿದೆ.

ಬ್ಯಾಟರಿ: 4500 ಎಂಎಎಚ್ ಬ್ಯಾಟರಿಯಿದೆ. ಇದರಲ್ಲಿನ ಪ್ರೊಸೆಸರ್ ಅತ್ಯುನ್ನತವಾಗಿರುವುದರಿಂದ ಬ್ಯಾಟರಿಯನ್ನು ವೇಗವಾಗಿ ಬಳಸುತ್ತದೆ. ಹೀಗಾಗಿ ಹೆಚ್ಚಿನ ಸಮಯ ಫೋನ್‌ನಲ್ಲಿ ಕಳೆಯುವವರು ದಿನದಲ್ಲಿ ಎರಡು ಬಾರಿ ಚಾರ್ಜ್ ಮಾಡಬೇಕಾಗುತ್ತದೆ. ಆದರೆ ಇದಕ್ಕೆ ನೀಡಿರುವ ಚಾರ್ಜರ್ ಮಾತ್ರ ರಕ್ಕಸತನದ ಸಾಮರ್ಥ್ಯ ಹೊಂದಿದೆ. ಇದು ಸರಿ ಸುಮಾರು 29 ನಿಮಿಷದಿಂದ 35 ನಿಮಿಷದೊಳಗೆ  ಶೇ. 1 ರಿಂದ ಶೇ.100 ಚಾರ್ಜ್ ಮಾಡುತ್ತದೆ! ಬ್ಯಾಟರಿ ಕಡಿಮೆಯಿದ್ದರೆ, ಚಾರ್ಜ್‌ಗಿಟ್ಟು ತಿಂಡಿ ಊಟ ಮಾಡುವುದರೊಳಗೆ ಶೇ. 70ರಷ್ಟು ಚಾರ್ಜ್ ಆಗುತ್ತದೆ. ಇದು ವೈರ್‌ಲೆಸ್ ಚಾರ್ಜರ್ ಅನ್ನೂ ಬೆಂಬಲಿಸುತ್ತದೆ. ಬೇಕೆನಿಸಿದವರು ಇದರ ವೈರ್‌ಲೆಸ್ ಚಾರ್ಜರ್ ಪ್ರತ್ಯೇಕವಾಗಿ ಕೊಳ್ಳಬೇಕು.

ಸರಿಪಡಿಸಬೇಕಾದದ್ದು: ಕೆಲವೊಮ್ಮೆ ಫೋನ್‍ ಇದ್ದಕ್ಕಿದ್ದಂತೆ ಬಿಸಿಯಾಗುತ್ತದೆ. ಮೊದಲು ವಿಡಿಯೋ ಮಾಡಿದಾಗ ಬಿಸಿಯಾಗುತ್ತಿತ್ತು. ಅದನ್ನು ಅಪ್‍ ಡೇಟ್‍ನಲ್ಲಿ ಸರಿಪಡಿಸಲಾಗಿದೆ. ಆದರೆ ಸಾಮಾನ್ಯ ಬಳಕೆಯಲ್ಲಿ ಅಂದರೆ ಮಾತನಾಡುವಾಗ, ಫೋನ್ ನಲ್ಲಿ ಫೇಸ್‍ ಬುಕ್‍, ವಾಟ್ಸಪ್‍,ವೆಬ್‍ ಪುಟಗಳನ್ನು ಓದುವಂಥ ಸಾಧಾರಣ ಬಳಕೆಯಲ್ಲೂ ಹೆಚ್ಚು ಬಿಸಿಯಾಗುತ್ತಿದೆ. ಈ ಸಮಸ್ಯೆ ಮುಂದಿನ ಅಪ್‍ಡೇಟ್‍ನಲ್ಲಿ ನಿವಾರಣೆ ಆಗಬಹುದು.

ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next