Advertisement

ಸರಣಿ ಜಯದಲ್ಲಿ ಬೌಲಿಂಗ್‌ ಬಲವೇ ನಿರ್ಣಾಯಕ

10:51 PM Mar 27, 2021 | Team Udayavani |

ಪುಣೆ: ಎಲ್ಲವೂ ಯೋಜನೆಯಂತೆ ಸಾಗಿದ್ದರೆ ಟೀಮ್‌ ಇಂಡಿಯಾ ಶುಕ್ರವಾರ ರಾತ್ರಿಯೇ ವಿಶ್ವ ಚಾಂಪಿಯನ್‌ ಇಂಗ್ಲೆಂಡನ್ನು ಮಣಿಸಿ ಏಕದಿನ ಸರಣಿ ಮೇಲೆ ಹಕ್ಕು ಸ್ಥಾಪಿಸಬಹುದಿತ್ತು. ಆದರೆ 336 ರನ್‌ ಪೇರಿಸಿಯೂ ಭಾರತಕ್ಕೆ ಪಂದ್ಯವನ್ನು ಉಳಿಸಿಕೊಳ್ಳಲಾಗಲಿಲ್ಲ. ಜಾನಿ ಬೇರ್‌ಸ್ಟೊ-ಬೆನ್‌ ಸ್ಟೋಕ್ಸ್‌ ಜೋಡಿ ಕೊಹ್ಲಿ ಪಡೆಯ ವಿಜಯಕ್ಕೆ ವಿಘ್ನವಾಗಿ ಪರಿಣಮಿಸಿತು.

Advertisement

ಹೀಗಾಗಿ “ಸಂಡೇ ವಾರ್‌’ಗಾಗಿ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. “ಏಕದಿನ ಫೈನಲ್‌’ಗಾಗಿ ಎರಡೂ ತಂಡಗಳು ಹುರಿಗೊಂಡಿವೆ.

ಪುಣೆ ಟ್ರ್ಯಾಕ್‌ ಕೇವಲ ಬ್ಯಾಟಿಂಗಿಗೆ ಸಹಕರಿಸುತ್ತ ಬಂದಿರುವುದರಿಂದ ಇದೊಂದು 50-50 ಪಂದ್ಯವೆಂದೇ ಹೇಳಬೇಕಾಗುತ್ತದೆ. ಇಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದವರು ಮುನ್ನೂರರ ಗಡಿ ದಾಟಿ ಎಷ್ಟೂ ಬೆಳೆಯಬಲ್ಲದು. ಹಾಗೆಯೇ ಚೇಸಿಂಗ್‌ ತಂಡ ಕೂಡ ಎಷ್ಟೇ ದೊಡ್ಡ ಮೊತ್ತವನ್ನೂ ಬೆನ್ನಟ್ಟಬಲ್ಲದು. ಇದು ಈ ಸರಣಿಯ ವಾಸ್ತವ ಸ್ಥಿತಿ.

ದ್ವಿತೀಯ ಪಂದ್ಯವನ್ನೇ ತೆಗೆದುಕೊಳ್ಳೋಣ. ಇಲ್ಲಿ ಬರೋಬ್ಬರಿ 4 ಶತಕಗಳ ಜತೆಯಾಟ ದಾಖಲುಗೊಂಡಿತು. ಸೆಂಚುರಿ ಕೂಡ ಸರಾಗವಾಗಿ ಹರಿದು ಬಂತು. ಬೌಲರ್‌ಗಳು ಚೆನ್ನಾಗಿ ದಂಡಿಸಲ್ಪಟ್ಟರು. ಪರಿಣಾಮ, ಇಂಗ್ಲೆಂಡ್‌ ಇನ್ನೂ ಎಂಟರಷ್ಟು ಓವರ್‌ ಬಾಕಿ ಇರುವಾಗಲೇ 336 ರನ್‌ ಗಡಿಯನ್ನು ಮೀರಿ ನಿಂತಿತು.

ದೊಡ್ಡ ಮೊತ್ತ ಸಮಸ್ಯೆಯಲ್ಲ
ಸದ್ಯ ಯಾವ ತಂಡದಲ್ಲೂ ಬ್ಯಾಟಿಂಗ್‌ ಸಮಸ್ಯೆ ಎಂಬುದಿಲ್ಲ. ಎರಡೂ ತಂಡಗಳು ನಿರಾಯಾಸವಾಗಿ 300 ರನ್‌ ಪೇರಿಸುವ ಸಾಮರ್ಥ್ಯ ಹೊಂದಿವೆ. ಭಾರತದ ಓಪನಿಂಗ್‌ ನಿರೀಕ್ಷಿತ ಮಟ್ಟದಲ್ಲಿ ಇಲ್ಲವಾದರೂ ಅನಂತರದ ಹಂತದಲ್ಲಿ ರನ್‌ ಪ್ರವಾಹವೇ ಹರಿದು ಬರುತ್ತಿದೆ.

Advertisement

ಇಂಗ್ಲೆಂಡಿನ ಓಪನಿಂಗ್‌ ಮಾತ್ರವೇ ಬಲಿಷ್ಠ ಎಂದು ನಂಬಲಾಗಿತ್ತು. ಆದರೆ ಶುಕ್ರವಾರ ಇದು ಸಂಪೂರ್ಣ ಸುಳ್ಳಾಯಿತು. ಆಂಗ್ಲರ ಮಿಡ್ಲ್ ಆರ್ಡರ್‌ ಸಾಮರ್ಥ್ಯವಿಲ್ಲಿ ಅನಾವರಣಗೊಂಡಿತು. ಬೇರ್‌ಸ್ಟೊ-ಸ್ಟೋಕ್ಸ್‌ ಕ್ರೀಸ್‌ ಆಕ್ರಮಿಸಿಕೊಂಡು ಪಂದ್ಯದ ಗತಿಯನ್ನೇ ಬದಲಿಸಿದ ನಿದರ್ಶನ ಎದುರಿಗಿದೆ. ಹೀಗಾಗಿ ಅಂತಿಮ ಸವಾಲು ಕೊಹ್ಲಿ ಪಡೆಯ ಪಾಲಿಗೆ ನಿರೀಕ್ಷಿಸಿದಷ್ಟು ಸುಲಭವಲ್ಲ.

“ದೊಡ್ಡ ಮೊತ್ತವೇನೂ ನಮಗೆ ಸಮಸ್ಯೆ ಅಲ್ಲ. ಇದನ್ನು ಕಂಡು ನಾವು ದಿಗಿಲುಗೊಳ್ಳುವುದೂ ಇಲ್ಲ. ಮುನ್ನೂರು ಪ್ಲಸ್‌ ರನ್ನನ್ನು ನಾವು ಅದೆಷ್ಟೋ ಸಲ ಯಶಸ್ವಿಯಾಗಿ ಬೆನ್ನಟ್ಟಿದ್ದೇವೆ…’ ಎಂದು ಆರಂಭಕಾರ, ಶತಕವೀರ ಬೇರ್‌ಸ್ಟೋ ಹೇಳಿರುವುದು ಇಡೀ ತಂಡದ ಆತ್ಮವಿಶ್ವಾಸವನ್ನು ಸಾರುತ್ತದೆ.

ಬೌಲಿಂಗ್‌ ಮ್ಯಾಜಿಕ್‌
ಬೌಲಿಂಗ್‌ ಮ್ಯಾಜಿಕ್‌ ನಡೆಯದೇ ಹೋದರೆ ಯಾವ ತಂಡಕ್ಕೂ ಉಳಿಗಾಲವಿಲ್ಲ ಎಂಬುದು ಸದ್ಯದ ಸ್ಥಿತಿ. ಬೌಲಿಂಗ್‌ ಬಲ್ಲವರು, ನಿರಂತರ ವಿಕೆಟ್‌ ಉರುಳಿಸುವವರು ಇಲ್ಲಿ ಗೆದ್ದು ಬರುತ್ತಾರೆ ಎಂಬುದು ಎಲ್ಲರ ಲೆಕ್ಕಾಚಾರ.

ದ್ವಿತೀಯ ಪಂದ್ಯದಲ್ಲಿ ಭಾರತ ಬೇರ್‌ಸ್ಟೊ-ಸ್ಟೋಕ್ಸ್‌ ಜೋಡಿಯನ್ನು ಬೆಳೆಯಲು ಬಿಡದೇ ಹೋಗಿದ್ದರೆ ಪಂದ್ಯದ ಫಲಿತಾಂಶ ಬದಲಾಗುವ ಎಲ್ಲ ಸಾಧ್ಯತೆ ಇತ್ತು. ಆದರೆ ಇವರು ಸ್ಪಿನ್‌ ಬೌಲರ್‌ಗಳನ್ನೇ ಟಾರ್ಗೆಟ್‌ ಮಾಡಿಕೊಂಡು ಮುನ್ನುಗ್ಗಿದರು. ಕುಲದೀಪ್‌, ಕೃಣಾಲ್‌ ಬೌಲಿಂಗ್‌ ಪುಡಿಪುಡಿಯಾಯಿತು. ಆಂಗ್ಲರ ಸರದಿಯಲ್ಲಿ ಬರೋಬ್ಬರಿ 20 ಸಿಕ್ಸರ್‌ ಸಿಡಿಯಲ್ಪಟ್ಟಿತು. ರವೀಂದ್ರ ಜಡೇಜ ತಂಡದಿಂದ ಬೇರ್ಪಟ್ಟ ಬಳಿಕ ಭಾರತದ ಸ್ಪಿನ್ನರ್ ಈ ರೀತಿಯಾಗಿ ದಂಡಿಸಿಕೊಂಡದ್ದು ಇದೇ ಮೊದಲು!

ಬೌಲಿಂಗ್‌ ಬದಲಾವಣೆ?
ಅಂತಿಮ ಪಂದ್ಯದಲ್ಲಿ ಭಾರತದ ಸ್ಪಿನ್‌ ವಿಭಾಗದಲ್ಲಿ ಮಹತ್ತರ ಬದಲಾವಣೆ ಸಂಭವಿಸುವ ಸೂಚನೆ ಇದೆ. ಕುಲದೀಪ್‌ ಬದಲು ಚಹಲ್‌, ಕೃಣಾಲ್‌ ಸ್ಥಾನಕ್ಕೆ ವಾಷಿಂಗ್ಟನ್‌ ಸುಂದರ್‌ ಬರಬಹುದು. ಆದರೆ ಚಹಲ್‌ ಕೂಡ ಹೇಳುವಂಥ ಫಾರ್ಮ್ ನಲ್ಲಿಲ್ಲ ಎಂಬುದನ್ನು ಗಮನಿಸಬೇಕು!

ಭಾರತದ ವೇಗದ ಬೌಲಿಂಗ್‌ ವಿಭಾಗದಲ್ಲೂ ಒಂದು ಬದಲಾವಣೆ ಸಂಭವಿಸಬಹುದು. ಟಿ. ನಟರಾಜನ್‌ ಅವರನ್ನು ಕಣಕ್ಕಿಳಿಸಲು ತಂಡ ಯೋಚಿಸುತ್ತಿದೆ. ಮೊಹಮ್ಮದ್‌ ಸಿರಾಜ್‌ ಕೂಡ ರೇಸ್‌ನಲ್ಲಿದ್ದಾರೆ. ಶಾದೂìಲ್‌ ಅಥವಾ ಪ್ರಸಿದ್ಧ್ ಕೃಷ್ಟ ಅವರಿಗೆ ವಿಶ್ರಾಂತಿ ನೀಡಬಹುದು.

ಸರಣಿಯನ್ನು ಸಮಬಲಕ್ಕೆ ತಂದ ಇಂಗ್ಲೆಂಡ್‌ ಭಾರೀ ಆತ್ಮವಿಶ್ವಾಸದಲ್ಲಿದೆ. ಗೆಲುವಿನ ಪಡೆಯನ್ನೇ ಅದು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಸಾಲು ಸಾಲು ಕುತೂಹಲ
ಸರಣಿ ನಿರ್ಣಾಯಕ ಪಂದ್ಯದ ಪಿಚ್‌ ಹೇಗಿದ್ದೀತು? ಭಾರತ ತಂಡದಲ್ಲಿ ಎಷ್ಟು ಬದಲಾವಣೆ ಸಂಭವಿಸೀತು? ಟೆಸ್ಟ್‌ ಮತ್ತು ಟಿ20 ಸರಣಿ ಗೆದ್ದ ಟೀಮ್‌ ಇಂಡಿಯಾಕ್ಕೆ ಏಕದಿನ ಸರಣಿ ಒಲಿದೀತೇ, ಅಥವಾ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ತನ್ನ ಛಾತಿಗೆ ತಕ್ಕ ಪ್ರದರ್ಶನ ನೀಡಿ ಪ್ರತಿಷ್ಠೆ ಮೆರೆದೀತೇ? ಇವೆಲ್ಲ ಕ್ರಿಕೆಟ್‌ ಪ್ರೇಮಿಗಳ ಕುತೂಹಲವನ್ನು ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next