ಗೋಕಾಕ: ಚರಂಡಿಯಲ್ಲಿ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರದಂದು ಲೋಳಸೂರ ಗ್ರಾಮದಲ್ಲಿ ನಡೆದಿದ್ದು, ಮಗುವಿನ ಸಾವಿಗೆ ಗ್ರಾಮ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಲೋಳಸೂರ ಗ್ರಾಮದ ಸಿದೀಕ್ ಸದ್ದಾಂ ತಹಶೀಲ್ದಾರ್ (೧) ಮೃತ ಮಗು.
ಮನೆಯ ಹತ್ತಿರ ಆಟ ಆಡಲು ಹೋಗಿರುವ ಸಂದರ್ಭದಲ್ಲಿ ಆಯತಪ್ಪಿ ಚರಂಡಿಯಲ್ಲಿ ಬಿದ್ದಿದೆ. ನಂತರ ಮಗುವನ್ನು ಚಿಕಿತ್ಸೆಗಾಗಿ ಖಾಸಗಿ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು, ಮಾರ್ಗ ಮಧ್ಯಲ್ಲಿಯೆ ಸಾವನ್ನಪ್ಪಿದೆ.
ಮನೆಯ ಪಕ್ಕದ ಮೋರಿಯನ್ನು ದುರಸ್ತಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಮಗು ಕಳೆದುಕೊಂಡಿರುವ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಘಟಪ್ರಭಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಿಪಿಐ ಶ್ರೀಶೈಲ ಬ್ಯಾಕೂಡ ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧಿಸಿದಂತೆ ಪತ್ರಕರ್ತರು ಮಾಹಿತಿ ಸಂಗ್ರಹಿಸಲು ಮುಂದಾದಾಗ ಮಗು ಅನಾರೋಗ್ಯದಿಂದ ಮೃತ ಪಟ್ಟಿದೆ ಎಂದು ಮೃತ ಮಗುವಿನ ಕುಟುಂಬದವರು ಠಾಣೆಗೆ ಮಾಹಿತಿ ನೀಡಿರುವುದಾಗಿ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.