Advertisement

ಬೆಳ್ತಂಗಡಿ: ಆ. 9ರ ಮಹಾ ಪ್ರವಾಹಕ್ಕೆ ಒಂದು ವರ್ಷ; ಇನ್ನೂ ಬಾಡಿಗೆ ಮನೆಯಲ್ಲೇ ಸಂತ್ರಸ್ತರ ವಾಸ

11:59 AM Aug 08, 2020 | mahesh |

ಬೆಳ್ತಂಗಡಿ: ಪಶ್ಚಿಮಘಟ್ಟ ಗುಡ್ಡಗಾಡು ನಲುಗಿ ಇತಿಹಾಸದಲ್ಲಿ ಕಂಡುಕೇಳರಿಯದ ಪ್ರವಾಹಕ್ಕೆ ತುತ್ತಾಗಿದ್ದ ಬೆಳ್ತಂಗಡಿ ತಾಲೂಕು ಆಗಸ್ಟ್‌ 9ಕ್ಕೆ ಒಂದು ವರ್ಷ ಪೂರೈಸುತ್ತಿದೆ. ಅಂದು ಸಂತ್ರಸ್ತರಾದವರ ಬದುಕು ಮತ್ತೆ ಹಸನಾಗಿಲ್ಲ. ಪರಿಹಾರ ಮೊತ್ತ ಖಾತೆಗೆ ಜಮೆಯಾದರೂ ತಾಂತ್ರಿಕ ತೊಂದರೆಗಳಿಂದ ಮನೆಗಳು ಪೂರ್ಣಗೊಳ್ಳದೆ ಬಾಡಿಗೆ ಮನೆಯಲ್ಲೇ ವಾಸ ಒಂದೆಡೆಯಾದರೆ, ನದಿ ಪಾತ್ರದ ಮಂದಿ ಪ್ರವಾಹದ ಭಯದಲ್ಲೇ ಜೀವನ ಸಾಗಿಸುತ್ತಿವೆ.

Advertisement

ಆಗಸ್ಟ್‌-ಅಕ್ಟೋಬರ್‌-2019ರಲ್ಲಿ ನೆರೆ ಹಾವಳಿಯಿಂದ ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳಲ್ಲಿ ಹಾನಿಯಾದ ಮನೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನೆರೆ ಸಂತ್ರಸ್ಥರ ಪುನರ್ವಸತಿ ಯೋಜನೆ-2019 ರಡಿ 289 ಮನೆಗಳನ್ನು ಗುರುತಿಸಲಾಗಿತ್ತು. ಈವರೆಗೆ ನೆರೆಯಿಂದ ಮನೆ ಕಳೆದುಕೊಂಡ ತಾಲೂಕಿನ ಫಲಾನುಭವಿಗಳಿಗೆ 2020 ಜೂನ್‌ 03 ರ ವರೆಗೆ 5,55,00,000 ರೂ. ಹಣ ಬಿಡುಗಡೆಯಾಗಿರುವ ಲೆಕ್ಕ ಕಂದಾಯ ಇಲಾಖೆಯಲ್ಲಿದೆ.

ಲೆಕ್ಕ ನೀಡಿದರೂ ಪಕ್ಕವಾಗದ ಮನೆ
203 ಮನೆ ಸಂಪೂರ್ಣ ಹಾನಿ, 55 ಮನೆ ಭಾಗಶಃ ಹಾನಿ, 31 ಅಲ್ಪ-ಸ್ವಲ್ಪ ಹಾನಿ ಎಂದು ಪರಿಗಣಿಸಿ ಒಟ್ಟು 289 ಮನೆಗಳು ಹಾನಿಗೊಳಗಾಗಿರುವುದಾಗಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಸಂಪೂರ್ಣ ಮತ್ತು ಭಾಗಶಃ ಹಾನಿಗೊಳಗಾದ ಒಟ್ಟು 258 ಮನೆಗಳಪೈಕಿ 255 ಮನೆಗಳಿಗೆ 5 ಲಕ್ಷ ರೂ. ಪರಿಹಾರದ ಹಣ ಸರಕಾರ ಘೋಷಿಸಿತ್ತು.

ಅವುಗಳಲ್ಲಿ ಪ್ರಥಮ ಹಂತವಾಗಿ 1 ಲಕ್ಷ ರೂ. ಹಣ ಬಿಡುಗಡೆಗೊಳಿಸಿದೆ. ಬಳಿಕ ತಳಪಾಯ-ಗೋಡೆ- ಛಾವಣಿ-ಪೂರ್ಣ ಹೀಗೆ ಹಂತವಾರು ಪ್ರಗತಿ ಸಾಧಿಸಿದ ಫಲಾನುಭವಿಗಳಿಗೆ ಜಿ.ಪಿ.ಎಸ್‌. ಅಳವಡಿಸಿದ ಅನಂತರ ನೇರವಾಗಿ ಖಾತೆಗೆ ಜಮಾ ಮಾಡ ಲಾಗುತ್ತಿದೆ. ಉಳಿದಂತೆ ಅಲ್ಪ-ಸ್ವಲ್ಪ ಹಾನಿಗೊಳಗಾದ 31 ಮನೆಗಳಿಗೆ ಪ್ರತಿ ಫಲಾನುಭವಿಗೆ 50,000 ರೂ. ಪೂರ್ಣ ಮೊತ್ತದ ಪರಿಹಾರದ ಹಣ ನೀಡಲಾಗಿದೆ. ಇಷ್ಟಾದರೂ ಮನೆಗಳು ಪೂರ್ಣ ಗೊಂಡಿಲ್ಲ. ಒಟ್ಟು 69 ಮನೆಗಳು ತಳಪಾಯ ಹಂತದಲ್ಲಿ, 77 ಮನೆಗಳು ಗೋಡೆ ಹಂತ, 67 ಮನೆಗಳು ಛಾವಣಿ ಹಂತ, 7 ಮನೆಗಳಷ್ಟೆ ಪೂರ್ಣ ಹಂತವಾಗಿದೆ.

ಬಾಡಿಗೆ: ಸ್ಪಷ್ಟತೆ ಇಲ್ಲ
ತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡಿಕೊಳ್ಳುವ ಫಲಾನುಭವಿಗೆ 50,000 ರೂ. ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುವ ಫಲಾನುಭವಿಗೆ ಪ್ರತಿ ತಿಂಗಳು 5,000 ರೂ.ನಂತೆ 10 ತಿಂಗಳ ವರೆಗೆ ಮಾಸಿಕ ಬಾಡಿಗೆ ನೀಡಲಾಗಿದೆ. ಆದರೆ ಪ್ರಸಕ್ತ 10 ತಿಂಗಳು ಪೂರ್ಣಗೊಂಡಿದ್ದರಿಂದ ಮುಂದಕ್ಕೆ ಬಾಡಿಗೆ ನೀಡುವ ಬಗ್ಗೆ ಸರಕಾರ ಸ್ಪಷ್ಟತೆ ನೀಡಿಲ್ಲ. ಇತ್ತ ಮನೆಯೂ ಪೂರ್ಣಗೊಂಡಿಲ್ಲ. ಈ ಮಧ್ಯೆ ಕೊರೊನಾದಿಂದ ಬದುಕು ಮತ್ತಷ್ಟು ಜಟಿಲವಾಗಿದೆ.

Advertisement

ಪ್ರವಾಹಕ್ಕೆ ತುತ್ತಾದ ಮಂದಿಗೆ ಮನೆ ನಿರ್ಮಾಣ ಸೇರಿದಂತೆ ಅಗತ್ಯತೆ ಪೂರೈಸುವಲ್ಲಿ ಶಾಸಕನಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ತಾಂತ್ರಿಕ ತೊಂದರೆ ಸರಿಪಡಿಸಲು ಮುಖ್ಯಮಂತ್ರಿ ಬಳಿ ಚರ್ಚಿಸಿದ್ದೇನೆ. ಚಾರ್ಮಾಡಿ ರಸ್ತೆ ಸರ್ವೆ ನಡೆಸಿ ಕೇಂದ್ರಕ್ಕೆ ವರದಿ ನೀಡಲಾಗಿದೆ.
-ಹರೀಶ್‌ ಪೂಂಜ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next