Advertisement

“ಹೊಟ್ಟೆ ತುಂಬಿದವರಿಗೆ ಹಸಿವು ಅರ್ಥವಾಗದು”- ನಾರಾಯಣ ಮೂರ್ತಿ ಹೇಳಿಕೆಗೆ ಸಚಿವರ ಆಕ್ಷೇಪ

11:37 PM Dec 01, 2023 | Team Udayavani |

ಕೊಪ್ಪಳ/ಕಾರವಾರ/ಮೈಸೂರು: “ಜನರಿಗೆ ಯಾವುದನ್ನೂ ಉಚಿತವಾಗಿ ನೀಡ ಬಾರದು’ ಎಂಬ ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಅವರ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಚಿವರಾದ ಶಿವರಾಜ ತಂಗಡಗಿ, ಡಾ| ಎಚ್‌.ಸಿ.ಮಹದೇವಪ್ಪ, ಮಂಕಾಳು ವೈದ್ಯ ಮತ್ತಿತರರು ನಾರಾಯಣ ಮೂರ್ತಿಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ “ಹೊಟ್ಟೆ ತುಂಬಿದವರಿಗೆ ಹಸಿದವರ ನೋವು ಅರ್ಥವಾಗದು’ ಎಂದು ತಿರುಗೇಟು ನೀಡಿದ್ದಾರೆ.

Advertisement

ಕೊಪ್ಪಳದಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ, ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಕೆಲವು ಶ್ರೀಮಂತರಿಗೆ ಸಹಿಸಲು ಆಗುತ್ತಿಲ್ಲ. ಇನ್ಫೋಸಿಸ್‌ ನಾರಾಯಣ ಮೂರ್ತಿ ಅಥವಾ ಪ್ರಧಾನಿ ಮೋದಿಯಂಥವರಿಗೆ ಬದುಕಲು ಈ ಯೋಜನೆ ಕೊಡುತ್ತಿಲ್ಲ. ಸಾಮಾನ್ಯರು ಹಾಗೂ ಬಡವರ ಅನುಕೂಲಕ್ಕಾಗಿ ಈ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಜನರಿಗೆ ಗ್ಯಾರಂಟಿ ಜಾರಿಯ ಭರವಸೆ ಕೊಟ್ಟಿದೆ. ಬಡವರ ಹಸಿವು ನೀಗಿಸಲು ಯೋಜನೆ ಜಾರಿಗೆ ತಂದಿದೆ. ಹೊಟ್ಟೆ ತುಂಬಿದವರ ಮಾತನ್ನು ನಾವು ಕೇಳುವ ಆವಶ್ಯಕತೆಯಿಲ್ಲ. ಹೊಟ್ಟೆ ಹಸಿದವರ ಮಾತು ಕೇಳುತ್ತೇವೆ ಎಂದು ಪ್ರತಿಕ್ರಿಯಿದ್ದಾರೆ.

ಸರಕಾರ ದುಡಿದು ತಿನ್ನುವ ವರ್ಗದ ಜತೆಗಿದೆ: ವೈದ್ಯ
ಕಾರವಾರದಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಮಂಕಾಳು ವೈದ್ಯ, ಹೊಟ್ಟೆ ತುಂಬಿದವರಿಗೆ ಹಸಿದವರ ನೋವು ಅರ್ಥವಾಗದು. ಸರಕಾರ ದುಡಿದು ತಿನ್ನುವ ವರ್ಗದ ಜತೆಗಿದೆ. ಜನರು ಉಚಿತ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದಕ್ಕೆ ಕಾಂಗ್ರೆಸ್‌ ಸರಕಾರವನ್ನು ಅಭಿನಂದಿಸುತ್ತಿದ್ದಾರೆ. ಜನರಿಗಿಂತ ಮುಖ್ಯವಾಗಿ ಬೇರೆಯವರ ಮಾತನ್ನ ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ನ್ಯಾಯಕ್ಕೆ ವಿರೋಧ: ಮಹದೇವಪ್ಪ
ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಡಾ| ಎಚ್‌.ಸಿ.ಮಹದೇವಪ್ಪ ಅವರು, ಎನ್‌.ಆರ್‌. ನಾರಾಯಣ ಮೂರ್ತಿ ಹೇಳಿಕೆ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಬಡತನ ನಿರ್ಮೂಲನೆಗೆ ವಿರುದ್ಧವಾದದ್ದು ಎಂದು ಟೀಕಿಸಿದ್ದಾರೆ.

Advertisement

ನಾರಾಯಣಮೂರ್ತಿಗೆ ಬಡವರ ಕಷ್ಟ ಗೊತ್ತಿಲ್ಲ. ಹಾಗಾಗಿ ಉಚಿತ ಕೊಡುಗೆಗಳನ್ನು ನೀಡದಂತೆ ಹೇಳಿದ್ದಾರೆ. ಬಡವರಿಗೆ ನೀಡುವ ಉಚಿತ ಯೋಜನೆಗಳ ಬಗ್ಗೆ ಮಾತನಾಡುವ ನಾರಾಯಣಮೂರ್ತಿ ಅವರು, ಕಾರ್ಪೊರೇಟ್‌ ಸಂಸ್ಥೆಗಳ ಸಾವಿರಾರು ಕೋಟಿ ರೂ. ಸಾಲ ಮನ್ನಾ ಮಾಡಿರುವ ಕೇಂದ್ರ ಸರಕಾರದ ನಿಲುವನ್ನು ಯಾಕೆ ಖಂಡಿಸಿಲ್ಲ ಎಂದು ಅಸಮಾಧಾನ
ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next