ಕುಣಿಗಲ್: ಪಟ್ಟಣದ ರಸ್ತೆ ಬದಿಯ ಫುಟ್ಪಾತ್ ವ್ಯಾಪಾರಿಗಳಿಂದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ವ್ಯಾಪಾರಿಗಳು ವಾರದ ಒಳಗಾಗಿ ವ್ಯಾಪಾರ ತೆರವುಗೊಳಿಸುವಂತೆ ಸಬ್ ಇನ್‌ಸ್ಪೆಕ್ಟರ್ ಎಸ್.ವಿಕಾಸ್ ಎಚ್ಚರಿಕೆ ನೀಡಿ ದರು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಫುಟ್ಪಾತ್ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದರು.
ನಾಗರಿಕರ ದೂರು: ಪಟ್ಟಣದ ಗ್ರಾಮದೇವತೆ, ಹುಚ್ಚಮಾಸ್ತಿಗೌಡ ಸರ್ಕಲ್, ತುಮಕೂರು ರಸ್ತೆ, ಮದ್ದೂರು ರಸ್ತೆ, ಈದ್ಗ ಮೈದಾನ ಕಾಂಪ್ಲೆಕ್ಸ್ ಎದುರು ಸೇರಿದಂತೆ ಜನಸಂದಣಿ ಹೆಚ್ಚಿರುವ ಹಲವು ಸ್ಥಳಗಳಲ್ಲಿ ವ್ಯಾಪಾರಿಗಳು ಕಾನೂನು ಉಲ್ಲಂಘಿಸಿ ವಸ್ತುಗಳಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಹಾಗೂ ಸಾರ್ವ ಜನಿಕರು ತಿರುಗಾಡಲು ತೀವ್ರ ತೊಂದರೆ ಉಂಟಾಗಿದೆ ಎಂಬ ನಾಗರಿಕರು ದೂರು ನೀಡಿದ್ದಾರೆ. ಕೂಡಲೇ ಫುಟ್ಪಾತ್‌ನಲ್ಲಿ ವ್ಯಾಪಾರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸೂಚಿಸಿದರು.
ವ್ಯಾಪಾರಕ್ಕೆ ಅನುವು ಮಾಡಿಕೊಡಿ: ತಕ್ಷಣ ತೆರವು ಮಾಡಿ ಎಂದರೇ ನಾವು ಎಲ್ಲಿಗೆ ಹೋಗಬೇಕು ಎಂದು ಅಳಲು ತೋಡಿಕೊಂಡ ವ್ಯಾಪಾರಸ್ಥರು, ಇದನ್ನೇ ನಂಬಿ ಸುಮಾರು 30 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಯಾರಿಗೂ ತೊಂದರೆಯಾಗದಂತೆ ಈಗಿರುವ ಸ್ಥಳದಲ್ಲೇ ವ್ಯಾಪಾರ ಮಾಡುವುದಕ್ಕೆ ಅವಕಾಶ ಮಾಡಿಕೊಡುವಂತೆ ವ್ಯಾಪಾರಿಗಳು ಮನವಿ ಮಾಡಿದರು. ಮನವಿ ತಳ್ಳಿ ಹಾಕಿದ ಪಿಎಸ್‌ಐ ವಿಕಾಸ್, ಬಡವರಿಗೆ ರೀತಿಯಲ್ಲಿ ತೊಂದರೆ ಕೊಡಬೇಕು. ಅನ್ಯಾಯ ಮಾಡಬೇಕು ಎಂಬ ಉದ್ದೇಶ ನಮಗೆ ಇಲ್ಲ. ಪೊಲೀಸರಿಗೂ ಮಾನವೀಯತೆ ಇದೆ. ನಾನೂ ವ್ಯಾಪಾರಸ್ಥ ಕುಟುಂಬದಿಂದ ಬಂದವನು. ಸಮಸ್ಯೆ ಏನೆಂಬುದು ಗೊತ್ತಿದೆ. ಆದರೆ ಕಾನೂನಿಗೆ ಯಾರೂ ದೊಡ್ಡವರಲ್ಲ. ಕಾನೂನು ಮೀರಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿದರೆ ನಾಗರಿಕರಿಗೆ ತೊಂದರೆ ಯಾಗುವುದಲ್ಲದೆ, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಅಪಘಾತಗಳು ಸಂಭವಿಸಿ ಅಮಾಯಕ ಜನರು ತೊಂದರೆಗೆ ಸಿಲುಕಲಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ನಿಮ್ಮನ್ನು ರಸ್ತೆ ಬದಿಯಿಂದ ತೆರವುಗೊಳಿಸಲಾಗುತ್ತಿದೆ ಎಂದು ಮನವರಿಕೆ ಮಾಡಿದರು. ಎಲ್ಲಾದರೂ ಸೂಕ್ತ ಸ್ಥಳದಲ್ಲಿ ವ್ಯಾಪಾರ ಮಾಡಿ, ತೆರವು ಕಾರ್ಯಾ ಚರಣೆಗೆ ಸಹಕರಿಸುವಂತೆ ಮನವಿ ಮಾಡಿದರು. ನಮ್ಮ ಮಾತಿಗೂ ಬೆಲೆ ಕೊಡದೇ ಅದೇ ಸ್ಥಳದಲ್ಲಿ ವ್ಯಾಪಾರ ಮುಂದುವರೆಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಪಿಎಸ್‌ಐ ಎಚ್ಚರಿಸಿದರು.