Advertisement

ಏಕಪಥದ ರಸ್ತೆ ಈಗ 30 ಅಡಿ ಅಗಲವಾಗುತ್ತಿದೆ

12:39 PM May 15, 2017 | Team Udayavani |

ಮೈಸೂರು: ಮಲೆ ಮಹದೇಶ್ವರ ವನ್ಯಜೀವಿಧಾಮದ ಒಳಗೆ ಯಾವುದೇ ಅನುಮತಿ ಇಲ್ಲದೆ ಅಕ್ರಮ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂ ಆರೋಪ ಕೇಳಿಬಂದಿದೆ. ಕೊಳ್ಳೇಗಾಲ ತಾಲೂಕು ಹನೂರಿನಿಂದ ಅಜ್ಜೀಪುರ ಮೂಲಕ ರಾಮಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ಮಧ್ಯೆ ಸುಮಾರು 4.5 ಕಿ.ಮೀ ಉದ್ದದ ರಸ್ತೆ ಮಲೆ ಮಹದೇಶ್ವರ ವ್ಯನಜೀವಿ ವಲಯದ ವ್ಯಾಪ್ತಿಗೆ ಬರುತ್ತದೆ.

Advertisement

ಆದರೂ ಯಾವುದೇ ಎಗ್ಗಿಲ್ಲದೆ ಕಳೆದ 15 ದಿನಗಳಿಂದ ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಒಳಗೆ ಜೆಸಿಬಿ, ಲಾರಿಗಳು, ರೋಡ್‌ ರೋಲರ್‌ಗಳು ಸದ್ದು ಮಾಡುತ್ತಿದ್ದು, ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ನಡೆದಿದೆ. ಹನೂರು- ರಾಮಾಪುರ ಮಾರ್ಗ ಸುಮಾರು 14 ಕಿ.ಮೀ ಉದ್ದವಿದ್ದು, ಮಧ್ಯೆ ಅಜ್ಜೀಪುರ ಗ್ರಾಮ ಬರುತ್ತದೆ. ಸದ್ಯ ಹನೂರಿನಿಂದ ಅಜ್ಜೀಪುರದವರೆಗೆ 7 ಕಿ.ಮೀ ರಸ್ತೆಗೆ ಮೆಟಲಿಂಗ್‌ ಮಾಡಲಾಗಿದ್ದು, ಮಧ್ಯದಲ್ಲಿ ಬರುವ ಎರಡು ಸೇತುವೆ ಹಾಗೂ ಪೈಪ್‌ಲೈನ್‌ ಹಾಗೂ ರಸ್ತೆಯ ಅಂಚು ಕಟ್ಟುವ ಕಾಮಗಾರಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ತಮಿಳುನಾಡು ಮೂಲದ ಸದ್ಯ ಕೊಳ್ಳೇಗಾಲ ತಾಲೂಕಿನ ಜಾಗೇರಿ ವಾಸಿಯಾಗಿರುವ ಗುತ್ತಿಗೆದಾರರೊಬ್ಬರು ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದಾರೆ. ರಸ್ತೆಯ ಮಧ್ಯಭಾಗದಿಂದ ಎರಡೂ ಕಡೆಗಳಲ್ಲಿ ಸುಮಾರು 15 ಅಡಿ ಸೇರಿದಂತೆ ಒಟ್ಟಾರೆ ಹಿಂದಿದ್ದ ಏಕಪಥದ ರಸ್ತೆಯನ್ನು 30 ಅಡಿಗಳಷ್ಟು ಅಗಲೀಕರಣ ಮಾಡುವ ಕಾಮಗಾರಿ ನಡೆಯುತ್ತಿದ್ದು, ಹನೂರಿನಿಂದ ಈ ಮಾರ್ಗವಾಗಿ 2 ಕಿ.ಮೀ ನಷ್ಟು ಮುಂದೆ ಬಂದರೆ ಮುಂದಿನ ಸುಮಾರು 4.5 ಕಿ.ಮೀ ಅಜ್ಜೀಪುರದವರೆಗೆ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಗೆ ಸೇರುತ್ತದೆ. ಅಜ್ಜೀಪುರದಿಂದ ಮುಂದೆ ರಾಮಾಪುರದ ವರೆಗೆ ಇನ್ನೂ 7 ಕಿ.ಮೀ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ರಸ್ತೆ ಅಗಲೀಕರಣ ನಡೆಯುತ್ತಿರುವ ಅರಣ್ಯ ಪ್ರದೇಶ ಹನೂರು ಬಫ‌ರ್‌ ವಲಯಕ್ಕೆ ಸೇರುತ್ತದೆ. ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯದ ಮಾರ್ಗಸೂಚಿಯಲ್ಲಿ ಯಾವುದೇ ಸಂರಕ್ಷಿತ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವ ಸಾರ್ವಜನಿಕ ರಸ್ತೆಗಳನ್ನು ಅಗಲೀಕರಣ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ವನ್ಯಜೀವಿ ಅರಣ್ಯ ಪ್ರದೇಶದ ಒಳಗೆ ಹೊಸ ರಸ್ತೆ ನಿರ್ಮಿಸಬೇಕಿದ್ದಲ್ಲಿ ರಾಷ್ಟ್ರೀಯ ಹಾಗೂ ಕರ್ನಾಟಕ ವನ್ಯಜೀವಿ ಮಂಡಳಿಗಳ ಅನುಮತಿ ಪಡೆಯಲೇಬೇಕು. ಆದರೆ, ಈ ಕಾಮಗಾರಿಗೆ ಅಂತಹ ಯಾವುದೇ ಅನುಮತಿಪಡೆದಿಲ್ಲ ಎಂದು ತಿಳಿದುಬಂದಿದೆ.

ಹನೂರಿನಿಂದ ಅಜ್ಜೀಪುರ ನಡುವೆ ಈ ರಸ್ತೆಯ ಇಕ್ಕೆಲಗಳಲ್ಲೂ ಅರಣ್ಯ ಪ್ರದೇಶವಿದ್ದು, ವನ್ಯಜೀವಿಗಳಾದ ಆನೆ, ಜಿಂಕೆ, ಕಾಡುಕೋಣ, ಕಡವೆ ಮುಂತಾದವು ಮೇವು-ನೀರಿಗಾಗಿ ಈ ರಸ್ತೆಯಲ್ಲಿ ಹಾದು ಹೋಗುವುದು ಸಾಮಾನ್ಯ ಸಂಗತಿ. ಈ ರಸ್ತೆ ಅಗಲೀಕರಣದಿಂದ ಈ ರಸ್ತೆಯಲ್ಲಿ ಹಾದುಹೋಗುವ ವಾಹನಗಳ ವೇಗ ಹೆಚ್ಚಲಿದ್ದು, ವನ್ಯಪ್ರಾಣಿಗಳಿಗೆ ಕಂಟಕ ಪ್ರಾಯವಾಗಿ ಪರಿಣಮಿಸಲಿವೆ ಎಂದು ವನ್ಯಜೀವಿ ಪ್ರಿಯರು ಆತಂಕ ವ್ಯಕ್ತಪಡಿಸುತ್ತಾರೆ.

Advertisement

ಇವರ ಆತಂಕ್ಕೆ ಪುಷ್ಟಿ ನೀಡುವಂತೆ ಜನವರಿ ತಿಂಗಳಲ್ಲಿ ಇದೇ ರಸ್ತೆಯಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಎರಡು ಸಾರಂಗಗಳು ವಾಹನಗಳಿಗೆ ಬಲಿಯಾಗಿವೆ. ಇಂತಹ ಪ್ರದೇಶದಲ್ಲಿ ರಸ್ತೆ ಅಗಲೀಕರಣವಾಗಿ ವಾಹನಗಳ ಓಡಾಟದ ವೇಗ ಹೆಚ್ಚಾದಾಗ ರಸ್ತೆ ದಾಟಲು ಪರದಾಡುತ್ತ ಇನ್ನಷ್ಟು ವನ್ಯಪ್ರಾಣಿಗಳು ಬಲಿಯಾಗ ಬೇಕಾಗುತ್ತದೆಯಲ್ಲದೆ, ಮಾನವ ಮತ್ತು ವನ್ಯಪ್ರಾಣಿಗಳ ನಡುವಿನ ಸಂಘರ್ಷವೂ ಹೆಚ್ಚಲಿದೆ ಎಂದು ಹೇಳುತ್ತಾರೆ ವನ್ಯಜೀವಿ ಪ್ರಿಯರು.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next