Advertisement

ಡಿಪೋಗೆ ಏಕಪಥ ರಸ್ತೆ ತೊಡಕು

10:30 AM Sep 17, 2018 | Team Udayavani |

ಸುಳ್ಯ: ಕೆಎಸ್‌ಆರ್‌ಟಿಸಿ ನೂತನ ಬಸ್‌ ಡಿಪೋ ಘಟಕಕ್ಕೆ ಬಸ್‌ ಸಂಚಾರ ಸುಗಮವಾಗಿ ಸಾಗಲು ಇಲ್ಲಿನ ಏಕಪಥ ರಸ್ತೆಯೇ ಅಡ್ಡಿಯಾಗಿದೆ. ಸುಳ್ಯ-ಸಂಪಾಜೆ ಹೆದ್ದಾರಿಯಲ್ಲಿ ನಗರದ ಬಸ್‌ ನಿಲ್ದಾಣದಿಂದ ಒಂದೂವರೆ ಕಿ.ಮೀ. ದೂರದ ಕಾಯರ್ತೋಡಿಯಲ್ಲಿ ಡಿಪೋ ಇದೆ. ಇಲ್ಲಿನ ಸಂಪರ್ಕ ರಸ್ತೆ ಏಕಪಥದಿಂದ ಕೂಡಿದೆ. ದಿನವಿಡೀ ವಾಹನಗಳು ಸಂಚಾರ ಸಾಧ್ಯವಾಗದ ಸ್ಥಿತಿ ಇದೆ.

Advertisement

ಇಕ್ಕೆಲಗಳಲ್ಲಿ ಇಳಿಯಲೂ ಜಾಗವಿಲ್ಲ
ಅರಣ್ಯ ಇಲಾಖೆ ಬಳಿಯಿಂದ ಕೊಂಚ ದೂರದಲ್ಲಿನ ಉಬರಡ್ಕ ಸಂಪರ್ಕ ರಸ್ತೆಯಲ್ಲಿ 200 ಮೀ. ದೂರದಲ್ಲಿ ಡಿಪೋ ಇದೆ. ಮುಖ್ಯ ರಸ್ತೆಯಿಂದ ಡಿಪೋ ತನಕ ಏಕಪಥವಿದೆ. ಇಲ್ಲಿ ಒಂದು ಬಸ್‌ ಹೋಗುವಷ್ಟು ಮಾತ್ರ ರಸ್ತೆ ಇದೆ. ಏಕಕಾಲದಲ್ಲಿ ಎರಡು ಬಸ್‌ಗಳು ಪ್ರವೇಶಿಸಿದರೆ ಸಂಚರಿಸಲು ಸಾಧ್ಯವಿಲ್ಲ. ಎರಡು ಬಸ್‌ ಮುಖಾಮುಖಿಯಾದರೆ ಒಂದು ಬಸ್‌ ಹಿಂಬದಿಯಾಗಿ ಡಿಪೋ ಅಥವಾ ಮುಖ್ಯರಸ್ತೆಗೆ ಪ್ರವೇಶಿಸಿ ದಾರಿ ಕೊಡಬೇಕಾದಂತಹ ಪರಿಸ್ಥಿತಿ ಇಲ್ಲಿದೆ. 

ಕೊಂಚ ಎಡವಿದರೆ ಅಪಾಯ ಇಲ್ಲಿ ಕಟ್ಟಿಟ್ಟ ಬುತ್ತಿ. ಈ ರಸ್ತೆ ಉಬರಡ್ಕ, ಕಂದ ಡ್ಕಕ್ಕೆ ಸಂಪರ್ಕ ಕಲ್ಪಿಸುವ ಕಾರಣ ಬಸ್‌ ಮಾತ್ರವಲ್ಲದೆ ಇತರ ವಾಹನಗಳು ಸಂಚರಿಸುತ್ತವೆ. ಇಡಿ ರಸ್ತೆ ಏಕಪಥವಾಗಿದ್ದರೂ, ವಾಹನ ದಟ್ಟನೆ ಹೆಚ್ಚಿರುವ ಡಿಪೋ-ಮುಖ್ಯ ರಸ್ತೆ ತನಕ ಟ್ರಾಫಿಕ್‌ ಜಾಮ್‌ ಇಲ್ಲಿನ ನಿತ್ಯದ ಸಂಗತಿ. ಒಟ್ಟು ಏಳೆಂಟು ಕಿ.ಮೀ. ದೂರದ ಈ ರಸ್ತೆ ದ್ವಿಪಥಗೊಳಿಸಿದರೆ ಅನುಕೂಲವಿದೆ. ಇದರಲ್ಲಿ 200 ಮೀ. ರಸ್ತೆ ಅಗಲಗೊಳಿಸುವುದು ಅನಿವಾರ್ಯ ಎನ್ನುತ್ತಾರೆ ಕೆಎಸ್‌ಆರ್‌ಟಿಸಿಯ ಕೆಲ ಚಾಲಕರು. ಪುತ್ತೂರು ಡಿಪೋದೊಂದಿಗೆ ಸೇರಿದ್ದ ಸುಳ್ಯವನ್ನು ಪ್ರತ್ಯೇಕಗೊಳಿಸಿ ಸುಮಾರು 3.5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಿದ ಬಸ್‌ ಡಿಪೋ 2017 ಜು. 15ರಂದು ಉದ್ಘಾಟನೆಗೊಂಡಿತ್ತು. 7.08 ಎಕರೆ ಜಾಗದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ಈ ಡಿಪೋ ಇದೆ. 60ರಿಂದ 70 ಬಸ್‌ ನಿಲು ಗಡೆ ಸಾಮರ್ಥ್ಯ ಹೊಂದಿದೆ. ಪ್ರತಿದಿನ 70 ಬಸ್‌ ಡಿಪೋದಿಂದ ತೆರಳುತ್ತವೆ. ರೂಟ್‌ ಹೆಚ್ಚಾದಂತೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

5 ಕೋ.ರೂ. ಪ್ರಸ್ತಾವನೆ ಸಲ್ಲಿಕೆ 
ರಸ್ತೆಯನ್ನು ಎರಡು ಯೋಜನೆಯಡಿ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ. 2 ಕೋ.ರೂ. ಮತ್ತು 3 ಕೋ.ರೂ. ಅನುದಾನ ಸೇರಿ ಒಟ್ಟು 5 ಕೋ.ರೂ. ವೆಚ್ಚದಲ್ಲಿ ವಿಸ್ತರಣೆ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ. ರಸ್ತೆಯ ಇಕ್ಕೆಲ ಖಾಸಗಿಯವರಿಗೆ ಸೇರಿದ್ದಾಗಿದ್ದು, ಭೂ ಸ್ವಾಧೀನದ ಬಳಿಕ ವಿಸ್ತರಣೆಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯ. ಜತೆಗೆ ಮುಖ್ಯ ರಸ್ತೆಯಿಂದ ಡಿಪೋ ರಸ್ತೆಗೆ ತಿರುವು ಇರುವ ಸ್ಥಳದಲ್ಲಿ ವೃತ್ತ ನಿರ್ಮಿಸಬೇಕಿದೆ. ಈ ಎಲ್ಲ ಬೇಡಿಕೆ ತತ್‌ಕ್ಷಣ ಕಾರ್ಯರೂಪಕ್ಕೆ ಬಂದಲ್ಲಿ ಸಂಚಾರ ಸಮಸ್ಯೆ ನೀಗಬಹುದು.

ಟೆಂಡರ್‌ ಹಂತದಲ್ಲಿ
ಸುಮಾರು 5 ಕೋ.ರೂ. ವೆಚ್ಚದಲ್ಲಿ ಉಬರಡ್ಕ ರಸ್ತೆ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 200 ಮೀ. ಡಿಪೋ ರಸ್ತೆ ಕೂಡ ಇದರೊಂದಿಗೆ ಸೇರಿದೆ. ಕಾಮಗಾರಿ ಟೆಂಡರ್‌ ಹಂತದಲ್ಲಿದ್ದು, ಅದು ಪೂರ್ಣಗೊಂಡ ಬಳಿಕ ಕೆಲಸ ನಡೆಯಲಿದೆ.
-ಎಸ್‌.ಅಂಗಾರ
ಸುಳ್ಯ ಶಾಸಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next