Advertisement

ಒಂದೆಡೆ ಖುಷಿ ಮತ್ತೂಂದೆಡೆ ಬೇಜಾರು

07:30 AM Mar 23, 2018 | |

ಹೌದು, ಆವತ್ತು ಸರ್‌ ಹೇಳಿದ್ದು ನಿಜವಾಗಿಯೂ ಸತ್ಯ. ನಮ್ಮ ಜೀವನದಲ್ಲಿ ಖುಷಿ ಮತ್ತು ದುಃಖ ಈ ಎರಡೂ ಭಾವನೆಗಳು ಒಮ್ಮೆಲೇ ಬರುವುದಿಲ್ಲ. ಒಂದೊಮ್ಮೆ ಅಂಥ ಕ್ಷಣ ಬಂದಿದ್ದರೂ ಅದು ನಮ್ಮ ಜೀವನದಲ್ಲಿ ಮರೆಯಲಾಗದ ಅದ್ಭುತ ಕ್ಷಣ. ಈಗ ನನ್ನ ಜೀವನದಲ್ಲೂ ಇಂತಹ ದಿನಗಳು ಬಂದಿವೆ. ಅಂತೂ ಕಷ್ಟಪಟ್ಟು ಡಿಗ್ರಿ ಮುಗಿಸಿದ್ದಾಯ್ತು, ಇನ್ನು ನನ್ನ ಜೀವನವನ್ನು ನಾನೇ ರೂಪಿಸಿಕೊಳ್ಳಬಹುದು ಎಂದು ಸಂತೋಷವಾದರೂ ಇಷ್ಟು ದಿನದ ಒಡನಾಟ, ಸರಿಯಾದ ಸಮಯಕ್ಕೆ ಮಾರ್ಗದರ್ಶನ ನೀಡಿದ ಗುರುಗಳು, ಸುಖ-ದುಃಖ ಗಳನ್ನು ಹಂಚಿಕೊಂಡ ಗೆಳೆಯರು- ಹೀಗೆ ನನ್ನ ಜೀವನದ ಒಂದು ಭಾಗವೇ ಆಗಿದ್ದ ಕಾಲೇಜನ್ನು ಇನ್ನು ಕೆಲವೇ ದಿನಗಳಲ್ಲಿ ಬಿಟ್ಟು ಹೋಗಬೇಕಾದ ಸತ್ಯವನ್ನು ಕಷ್ಟವಾದರೂ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ.

Advertisement

ನನಗೆ ಇವತ್ತಿಗೂ ಸರಿಯಾಗಿ ನೆನಪಿದೆ- ಆವತ್ತು ಪದವಿಯ ಮೊದಲನೆಯ ದಿನವೆಂದು ಭಯಮಿಶ್ರಿತ ಸಂತಸದಲ್ಲಿ ಹೊಸ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವಾಗಲೇ ವರುಣನ ಆರ್ಭಟ ಆರಂಭವಾಗಿತ್ತು. ಹೀಗೆ ವರುಣನ ಶುಭ ಆಗಮನದಿಂದ ಆರಂಭವಾದ ನನ್ನ ಕಾಲೇಜು ಜೀವನ ಇಂದು ವರುಣನ ಆಗಮನದ ಸಮಯಕ್ಕೆ ಮುಕ್ತಾಯವಾಗುತ್ತಿದೆ. ಅಂದಿನಿಂದ ಇಂದಿನವರೆಗಿನ ಮೂರು ವರುಷಗಳ ಪ್ರಯಾಣದಲ್ಲಿ ಅದೆಷ್ಟೋ ಹೊಸ ಮನಸ್ಸುಗಳ ಪರಿಚಯವಾಗಿ ಅವರಿಂದು ನನ್ನ ಮನಸ್ಸಿಗೆ ಹತ್ತಿರವಾಗಿದ್ದಾರೆ.

ನನ್ನ ಜೀವನದಲ್ಲಾದ ಒಂದು ತಿರುವು ಎಂದರೆ ನಾನು ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದು. ಪಿಯುಸಿಯಲ್ಲಿ ವಾಣಿಜ್ಯ ವಿದ್ಯಾರ್ಥಿನಿಯಾದ ನಾನು ಹೇಗೋ ಅನಿರೀಕ್ಷಿತವಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡ ನಂತರ ನನಗೆ ತಿಳಿಯಿತು, ದುಡ್ಡಿನ ಲೆಕ್ಕಚಾರಕ್ಕೂ ಮಿಗಿಲಾಗಿ ಮಾನವ ಸಂಬಂಧಗಳಿಗೆ ಬೆಲೆ ಕೊಡುವ, ಮಾನವನ ಭಾವನೆಗಳಿಗೆ ಸ್ಪಂದಿಸುವ ಕಲಾವಿಷಯದಲ್ಲಿ ಏನೋ ಆಕರ್ಷಣೆ ಇದೆಯೆಂದು.

ಪಠ್ಯಪುಸ್ತಕವನ್ನು ಬಿಟ್ಟು ಬೇರೆ ಪುಸ್ತಕವನ್ನು ಓದುವುದರಿಂದ ಸುಮ್ಮನೆ ಸಮಯ ವ್ಯರ್ಥ ಎಂದುಕೊಂಡಿದ್ದ ನನಗೆ ಇತರ ಪುಸ್ತಕಗಳನ್ನು ಓದುವಂತೆ ಒತ್ತಡ ಹೇರಿ ಪುಸ್ತಕದ ರುಚಿಯನ್ನು ಹಿಡಿಸಿ, ಬರವಣಿಗೆಯ ಪರಿಚಯ ಮಾಡಿಕೊಟ್ಟವರು ಕೆಲವರಾದರೆ, ಎಂತಹ ಒತ್ತಡ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೆ ಹಸನ್ಮುಖೀಯಾಗಿದ್ದು ನನ್ನಲ್ಲಿ ಪ್ರಭಾವ ಬೀರಿದವರು ಇನ್ನೂ ಕೆಲವರು. ಹೀಗೆ, ನನಗೆ ಶೈಕ್ಷಣಿಕ ಪರೀಕ್ಷೆಯನ್ನು ಎದುರಿಸುವ ಜೊತೆಗೆ ಜೀವನ ಪರೀಕ್ಷೆಯನ್ನು ಎದುರಿಸಲು ಮಾರ್ಗದರ್ಶನ ನೀಡಿದ ಉಪನ್ಯಾಸಕರಿಗೆ ಎಂದಿಗೂ ಚಿರಋಣಿ.

ಪ್ರತಿಯೊಂದು ಚಿಕ್ಕಪುಟ್ಟ ವಿಷಯಗಳಲ್ಲೂ ಖುಷಿಪಡುತ್ತ, ಗೆದ್ದಾಗ ಪ್ರಶಂಸಿಸಿ, ಸೋತಾಗ ಧೈರ್ಯ ನೀಡಿ, ಸುಖ-ದುಃಖಗಳನ್ನು ಹಂಚಿಕೊಂಡ ನನ್ನ ಸ್ನೇಹಿತರು ಇನ್ನೂ ನನ್ನ ಜೊತೆ ಇರುವುದು ಕೇವಲ ಕೆಲವೇ ದಿನಗಳು. ಅಗಲುವಿಕೆ ಅನಿವಾರ್ಯವಾದರೂ ಇಷ್ಟು ದಿನದ ಸಿಹಿ ಒಡನಾಟ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣಗಳು. 

Advertisement

ಕೊನೆಯದಾಗಿ ಹೇಳುವುದೇನೆಂದರೆ ನಾನು ತಿಳಿದೋ ತಿಳಿಯದೆಯೋ   ನಿಮ್ಮ ಮನಸ್ಸಿಗೆ ನೋವು ಮಾಡಿದ್ದರೆ ಪ್ಲೀಸ್‌ ನನ್ನನ್ನು ಕ್ಷಮಿಸಿ ಬಿಡಿ.

ಸಂಧ್ಯಾ ಜಿ. ಶೆಟ್ಟಿ ಪತ್ರಿಕೋದ್ಯಮ ವಿಭಾಗ  ಎಂ.ಜಿ.ಎಂ. ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next