Advertisement
ಕೆಎಸ್ಸಾರ್ಟಿಸಿಯು ಮೊದಲನೇ ಹಂತದಲ್ಲಿ ದ.ಕ. ಜಿಲ್ಲೆಯ ಮಂಗಳೂರು, ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಸರಕಾರಿ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಿದೆ. ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಬಸ್ ನಿಲ್ದಾಣಗಳಲ್ಲಿ ನೀರಿನ ಘಟಕದ ಕೆಲಸ ಕೊನೆಯ ಹಂತದಲ್ಲಿದ್ದು, ಮುಂದಿನ ಒಂದು ತಿಂಗಳೊಳಗಾಗಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ. ಮಂಗಳೂರು ಬಸ್ ನಿಲ್ದಾಣದಲ್ಲಿ ನೀರಿನ ಘಟಕ ಸ್ಥಾಪನೆಯ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಸುಮಾರು ಎರಡು ತಿಂಗಳೊಳಗೆ ತಲೆಯೆತ್ತಲಿದೆ.
ಕೆಎಸ್ಸಾರ್ಟಿಸಿಯು ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನೀರಿನ ಘಟಕ ಸ್ಥಾಪನೆ ಮಾಡುತ್ತಿದ್ದು, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಸಹಯೋಗದಲ್ಲಿ ಘಟಕಗಳು ತಲೆಯೆತ್ತಲಿವೆ. ಘಟಕವು ಗಂಟೆಗೆ 250 ಲೀಟರ್ ಶುದ್ಧೀಕರಣ ನೀರು ಪಡೆಯುವ ಸಾಮರ್ಥ್ಯವನ್ನು ಹೊಂದಿರಲಿವೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ದಿನಂಪ್ರತಿ ಸುಮಾರು 350ಕ್ಕೂ ಹೆಚ್ಚು ಬಸ್‌ಗಳು, ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ನಿಲ್ದಾಣದಿಂದ ನೂರಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ನಾನಾ ಪ್ರದೇಶಗಳಿಗೆ ದಿನಂಪ್ರತಿ ಸಂಚರಿ ಸುತ್ತಿದ್ದು, ನೂತನ ಯೋಜನೆಯಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ವಾಗಲಿದೆ. ಕೆಎಸ್ಸಾರ್ಟಿಸಿ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಈಗಾಗಲೇ ಅರ್ಧ ಲೀಟರ್ ಕುಡಿಯುವ ನೀರಿನ ಬಾಟಲಿಗಳನ್ನು ನೀಡಲಾಗುತ್ತಿದೆ. ನಿಗಮ ಇದಕ್ಕಾಗಿ ವರ್ಷಕ್ಕೆ ಸುಮಾರು 6 ಕೋಟಿ ರೂ. ವ್ಯಯಿಸುತ್ತಿದೆ. ಇವಿಷ್ಟೇ ಅಲ್ಲದೆ, ಎಲ್ಲ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಬೆಳಗ್ಗಿನ ವೇಳೆ ದಿನಪತ್ರಿಕೆಯನ್ನು ನೀಡಲಾಗುತ್ತಿದೆ.
Related Articles
ಕೆಎಸ್ಸಾರ್ಟಿಸಿಯ ಯೋಜನೆಯಾದ ಶುದ್ಧ ಕುಡಿಯುವ ನೀರಿನ ಘಟಕ ದಿನದ 24 ಗಂಟೆಯೂ ಕಾರ್ಯಾಚರಿಸಲಿದೆ. 1 ರೂ., 2 ರೂ. ಮತ್ತು 5 ರೂ. ನಾಣ್ಯವನ್ನು ಯಂತ್ರಕ್ಕೆ ಹಾಕುವ ಮೂಲಕ ಮಿನರಲ್ ನೀರು ಪಡೆಯಬಹುದಾಗಿದೆ. ಕೆಲವೊಂದು ಬಸ್ ನಿಲ್ದಾಣಗಳಲ್ಲಿನ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಕುಡಿಯುವ ನೀರು ಮಾರಾಟ ಮಾಡಲಾಗುತ್ತಿದ್ದು, ನೂತನ ಘಟಕದಿಂದ ಇದಕ್ಕೆ ಕಡಿವಾಣ ಬೀಳಬಹುದು.
Advertisement
2 ತಿಂಗಳಲ್ಲಿ ಆರಂಭಶುದ್ಧ ಕುಡಿಯುವ ನೀರಿನ ಘಟಕ ತಲೆಯೆತ್ತುವುದರಿಂದ ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮಂಗಳೂರು ವಿಭಾಗದಲ್ಲಿ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಘಟಕ ಪ್ರಾರಂಭವಾಗಲಿದೆ.
– ದೀಪಕ್ ಕುಮಾರ್,
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಾಧಿಕಾರಿ ನವೀನ್ ಭಟ್ ಇಳಂತಿಲ