ಕುಕ್ಕೆ ಸುಬ್ರಮಣ್ಯಕ್ಕೆ ಹೋಗಲು 2-3 ಹಾದಿಗಳುಂಟು. ಅವುಗಳಲ್ಲಿ ಬಿಸಿಲೇ ಘಾಟ್ ಮಾರ್ಗ ಕೂಡ ಒಂದು. ಈ ಮಾರ್ಗ ಸರಿಯಿಲ್ಲದ ಕಾರಣ, ಹೆಚ್ಚು ಜನರು ಇಲ್ಲಿ ಪಯಣಿಸಲು ಇಚ್ಛಿಸುವುದಿಲ್ಲ. ಆದರೆ, ಈ ಮಾರ್ಗದಲ್ಲಿ ಅದ್ಭುತವಾದ ರಮಣೀಯ ತಾಣಗಳಿವೆ. ಅವುಗಳಲ್ಲಿ ಬಿಸಿಲೇ ವ್ಯೂ ಪಾಯಿಂಟ್ ಬಹಳ ಜನಪ್ರಿಯ. ಇಲ್ಲಿಗೆ ಬಹಳ ಹತ್ತಿರದಲ್ಲೇ ಇರುವ ಮಂಕನಹಳ್ಳಿಯ “ರಿಡ್ಜ್ ಪಾಯಿಂಟ್ ಸ್ಮಾರಕ’, ನಿಜಕ್ಕೂ ಒಂದು ವಿಸ್ಮಯ.
ರಿಡ್ಜ್ ಎಂದರೆ, ಅಂಚು ಎಂದರ್ಥ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಮಂಕನಹಳ್ಳಿಯಲ್ಲಿ ಬೀಳುವ ಮಳೆ ನೀರು, ಎರಡು ಸಮುದ್ರಗಳನ್ನು ಸೇರುತ್ತದೆ! ಈ ವಿಶೇಷವನ್ನು ದಾಖಲಿಸುವ ಒಂದು ಸ್ಮಾರಕ ಸ್ತಂಭವನ್ನು ಸ್ವಾತಂತ್ರ್ಯಪೂರ್ವದಲ್ಲಿಯೇ ಬ್ರಿಟಿಷ್ ಅಧಿಕಾರಿಗಳು ಸ್ಥಾಪಿಸಿದ್ದಾರೆ. ಮಂಕನಹಳ್ಳಿಯಲ್ಲಿ ಬಿದ್ದ ಒಂದು ಭಾಗದ ಮಳೆ ನೀರು, ಝರಿಯಾಗಿ ಪೂರ್ವ ದಿಕ್ಕಿಗೆ ಹರಿದು ಸಮೀಪದಲ್ಲಿ ಸಕಲೇಶಪುರ ಸಮೀಪ ಹೇಮಾವತಿಯ ಒಡಲನ್ನು ಸೇರುತ್ತದೆ.
ಅಲ್ಲಿಂದ ಅದು ಕೆ.ಆರ್. ಪೇಟೆ ತಾಲೂಕಿನ ಸಂಗಾಪುರ ಸಮೀಪದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಯಲ್ಲಿ ಲೀನವಾಗಿ, ಮುಂದೆ ತಮಿಳುನಾಡಿನಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮಂಕನಹಳ್ಳಿಯ ಮತ್ತೂಂದು ಭಾಗದಲ್ಲಿ ಬಿದ್ದ ಮಳೆನೀರು, ಪಶ್ಚಿಮದ ಕಡೆ ಚಲಿಸಿ, ಕುಮಾರ ಪರ್ವತ ಶ್ರೇಣಿಯ ಬೆಟ್ಟಕುಮರಿ ಪ್ರದೇಶದಲ್ಲಿ ಕಾಣಸಿಗುವ ಅಡ್ಡಹೊಳೆ, ಪುಷ್ಪ ಗಿರಿ ಪ್ರದೇಶದ ಹೊಳೆಗಳಲ್ಲಿ ಮಿಳಿತವಾಗಿ ಕುಕ್ಕೆ ಸುಬ್ರಮಣ್ಯ ಪವಿತ್ರ ಕ್ಷೇತ್ರದಲ್ಲಿ “ಕುಮಾರ ಧಾರಾ’ ನದಿಯೆಂಬ ಹೆಸರು ಗಳಿಸುತ್ತದೆ.
ಅಲ್ಲಿ ಅದು ಕಾಡಿನಲ್ಲಿ ನಾರು, ಬೇರು, ಗಿಡ ಮೂಲಿಕೆಗಳನ್ನು ಬಳಸಿ, ಔಷಧಿಯುಕ್ತ ನೀರಾಗಿ, ಜನರೊಳಗೂ ನಂಬಿಕೆಯನ್ನು ಬಿತ್ತುತ್ತದೆ. ಈ ನದಿಯಲ್ಲಿ ಮಿಂದರೆ ಆರೋಗ್ಯಕ್ಕೆ ಒಳ್ಳೆಯದೆಂಬ ಭಾವನೆ ಹಲವರಲ್ಲಿದೆ. ಮುಂದೆ ಗುಂಡ್ಯಾ ನದಿಯ ಮೂಲಕ ನೇತ್ರಾವತಿ ನದಿಯ ಜೊತೆ ಸಾಗಿ, ಮಂಗಳೂರಿನ ಸಮೀಪ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಒಂದೇ ಊರಿನ ನೆತ್ತಿ ಮೇಲೆ ಬಿದ್ದ ನೀರು, ಎರಡು ಸಾಗರ ಸೇರುವ ವಿಸ್ಮಯ ಇದಾಗಿದೆ.
* ಬಾಲಸುಬ್ರಹ್ಮಣ್ಯ ಕೆ.ಎಸ್.