Advertisement

Protest ಪಿಒಕೆ ಮತ್ತಷ್ಟು ಉದ್ವಿಗ್ನ: ಪೊಲೀಸ್‌ ಅಧಿಕಾರಿ ಸಾವು

12:13 AM May 13, 2024 | Team Udayavani |

ಇಸ್ಲಾಮಾಬಾದ್‌: ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ತೆರಿಗೆ ಹೊರೆ, ವಿದ್ಯುತ್‌ ಕೊರತೆಯನ್ನು ಖಂಡಿಸಿ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದ ಹಲವು ಪ್ರದೇಶಗಳಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿವೆ.

Advertisement

ವಿಶೇಷವೆಂದರೆ ರಾವಲ್‌ಕೋಟ್‌ ಪ್ರದೇಶದಲ್ಲಿ “ನಮಗೆ ಸ್ವಾತಂತ್ರ್ಯ ಕೊಡಿ’, “ಭಾರತದೊಂದಿಗೆ ನಮ್ಮನ್ನು
ವಿಲೀನಗೊಳಿಸಿ’ ಎಂದು ಬರೆಯಲಾದ ಪೋಸ್ಟರ್‌ಗಳು ಕೂಡ ಪ್ರತ್ಯಕ್ಷ ವಾಗಿವೆ. ಇವು ಪಿಒಕೆ ಮೇಲೆ ಪಾಕ್‌ ಹಿಡಿತ ಸಡಿಲವಾಗುತ್ತಿರುವುದರ ಸಂಕೇತ ಎಂದು ಕೆಲವರು ವಿಶ್ಲೇಷಿಸಿ ದ್ದಾರೆ. “ಪಾಕ್‌ ಆಕ್ರಮಿತ ಪ್ರದೇಶದ ಜನರೇ ಭಾರತದೊಂದಿಗೆ ಬರಲು ತಯಾರಾಗಿದ್ದಾರೆ’ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಸಹಿತ ಕೆಲವು ಬಿಜೆಪಿ ನಾಯಕರು ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ರವಿವಾರ ಪ್ರತಿಭಟನೆ ಹತ್ತಿಕ್ಕಲು ತೆರಳಿದ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಭಾರೀ ಸಂಘರ್ಷ ಏರ್ಪಟ್ಟಿದೆ.

ಈ ಸಂದರ್ಭದಲ್ಲಿ ಗುಂಡಿನ ಕಾಳಗವೂ ನಡೆದಿದ್ದು, ಸಬ್‌ ಇನ್‌ಸ್ಪೆಕ್ಟರ್‌ ಅದ್ನಾನ್‌ ಖುರೇಷಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಈ ಪೈಕಿ ಬಹುತೇಕರು ಪೊಲೀಸರು ಎಂದು ಹೇಳಲಾಗಿದೆ. ಪೊಲೀಸರನ್ನು ಜನರು ಅಟ್ಟಾಡಿಸಿಕೊಂಡು ಹೋಗುತ್ತಿರುವ ವೀಡಿಯೋಗಳು ವೈರಲ್‌ ಆಗಿವೆ.

ಸ್ವಾತಂತ್ರ್ಯದ ಘೋಷಣೆ
ರವಿವಾರ ಪ್ರತಿಭಟನೆಯ ವೇಳೆ ಪಿಒಕೆಯ ಅಲ್ಲಲ್ಲಿ “ನಮಗೆ ಸ್ವಾತಂತ್ರ್ಯ ಬೇಕು’ ಎಂಬ ಘೋಷಣೆಗಳನ್ನು ಪ್ರತಿಭಟನಕಾರರು ಕೂಗಿದ್ದಾರೆ ಎನ್ನಲಾಗಿದೆ. ಜಮ್ಮು – ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ ಈ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸರು ದಮನಕಾರಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮುಜಫ‌ರಾ ಬಾದ್‌ ಮತ್ತು ಇತರ ಜಿಲ್ಲೆಗಳಲ್ಲೂ ಪೊಲೀಸರೊಂದಿಗೆ ಘರ್ಷಣೆ ನಡೆದಿದೆ.

Advertisement

ಮೊಬೈಲ್‌ ನೆಟ್‌ವರ್ಕ್‌ ಸ್ಥಗಿತ
ಪಿಒಕೆಯ ಮೀರ್‌ಪುರ್‌ ಮತ್ತು ಇತರ ಕಡೆಗಳಲ್ಲಿ ಅಹಿತಕರ ಘಟನೆಗಳನ್ನು ನಿಯಂತ್ರಿಸುವುದಕ್ಕಾಗಿ ಮೊಬೈಲ್‌ ಮತ್ತು ಮೊಬೈಲ್‌ ಇಂಟರ್‌ನೆಟ್‌ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಕೈಮೀರಿರುವ ಹಿನ್ನೆಲೆಯಲ್ಲಿ ಪಾಕ್‌ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಇಸ್ಲಾಮಾಬಾದ್‌ನಲ್ಲಿ ತುರ್ತು ಸಭೆ ಕರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next