ಒಂದೇ ಸಿನಿಮಾದಲ್ಲಿ ಐದು ಹಾಗೂ ಐದಕ್ಕಿಂತ ಹೆಚ್ಚು ಕಥೆಗಳನ್ನು ಹೇಳುವ ಸಿನಿಮಾಗಳು ಕನ್ನಡದಲ್ಲಿ ಈಗಾಗಲೇ ಬಂದಿವೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ “ಒಂದ್ ಕಥೆ ಹೇಳ್ಳಾ. ಹೀಗೊಂದು ಹೆಸರಿನ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಒಂದು ಮುಖ್ಯ ಕಥೆ ಹಾಗೂ ನಾಲ್ಕು ಉಪಕಥೆಗಳೊಂದಿಗೆ ಈ ಸಿನಿಮಾ ನಿರ್ದೇಶಿಸಿದ್ದಾರೆ ಗಿರೀಶ್ ಜಿ. ಈ ಚಿತ್ರದ ವಿಶೇಷವೆಂದರೆ ಎಲ್ಲವೂ ಹಾರರ್ ಕಥೆಗಳು. ಹಾಗಾಗಿ, ಚಿತ್ರತಂಡ ಇದನ್ನು “ಹಾರರ್ ಅಂತೋಲಾಜೀ’ ಎಂದು ಹೇಳುತ್ತಿದೆ. ಚಿತ್ರದಲ್ಲಿ ಬರುವ ನಾಲ್ಕು ಉಪಕಥೆಗಳು ಕೂಡ ಅಂತಿಮವಾಗಿ ಒಂದಕ್ಕೊಂದು ಸೇರುತ್ತವೆಯಂತೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಗಿರೀಶ್, “ಚಿತ್ರದಲ್ಲಿ ಮೂವರು ಹುಡುಗರು, ಇಬ್ಬರು ಹುಡುಗಿಯರು ಬೆಂಗಳೂರಿನಿಂದ ಸಕಲೇಶಪುರಕ್ಕೆ ಪ್ರಯಾಣ ಮಾಡುವಾಗ ಅವರುಗಳಲ್ಲೆ ಒಂದೊಂದು ಕಥೆಗಳು ಹುಟ್ಟಿಕೊಳ್ಳುತ್ತವೆ. ಆ ಎಲ್ಲಾ ಕಥೆಗಳಲ್ಲೂ ಶೇಕಡಾ 60ರಷ್ಟು ಹಾರರ್ ಅಂಶಗಳು ಬರುತ್ತವೆ. ಒಂದು ಕಥೆಯಲ್ಲಿ ಭಕ್ತಪ್ರಹ್ಲಾದ ನಾಟಕವನ್ನು ಯಾಕಾಗಿ ಮಾಡುವುದಿಲ್ಲವೆಂದು ಹೇಳಲಾಗಿದೆ. ಹೋಂ ಸ್ಟೇಗಳಲ್ಲಿ ನಡೆದ ಕೆಲವು ಘಟನೆಗಳನ್ನು ಆಧರಿಸಿ ಈ ಚಿತ್ರದ ಕಥೆ ಮಾಡಲಾಗಿದೆ. ಚಿತ್ರದಲ್ಲಿ ಕೋಳಿಯೊಂದು ಮುಖ್ಯ ಪಾತ್ರವಹಿಸುತ್ತದೆ. ಹೊಸ ಬಗೆಯ ಚಿತ್ರವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎಂಬ ವಿಶ್ವಾಸವಿದೆ ಎಂದರು. ಅಂದಹಾಗೆ, ಇದೊಂದು ಕ್ರೌಡ್ ಫಂಡಿಂಗ್ ಸಿನಿಮಾವಾಗಿದ್ದು, ಸುಮಾರು 20 ಮಂದಿ ನಿರ್ಮಾಪಕರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
“ಒಂದ್ ಕಥೆ ಹೇಳ್ಳಾ’ ಚಿತ್ರದಲ್ಲಿ ಪ್ರತೀಕ್, ದೀಪಕ್, ತಾರಾ, ತಾಂಡವ್, ಸೌಮ್ಯಾ, ರಮಾಕಾಂತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರತಿಯೊಬ್ಬರು ತಮ್ಮ ಪಾತ್ರಗಳ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ, ಬಕ್ಕೇಶ್, ಕಾರ್ತಿಕ್ ಸಂಗೀತ, ಪ್ರತೀಕ್ ಸಂಕಲನವಿದೆ.