ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ (ನ.29) ಒಂದು ತಿಂಗಳು. ಮಾಸ ಕಳೆದರೂ ನೋವು ಮಾಸುತ್ತಿಲ್ಲ. ಪುನೀತ್ ಇಲ್ಲ ಎಂಬುದುನ್ನು ಕಲ್ಪಿಸಿ ಕೊಳ್ಳೋದು ಅಭಿಮಾನಿಗಳಿಗೆ, ಚಿತ್ರರಂಗದ ಮಂದಿಗೆ ಕಷ್ಟವಾಗುತ್ತಿದೆ. ಆ ಮಟ್ಟಿಗೆ ಪುನೀತ್ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ಸಾಕಷ್ಟು ಅಭಿಮಾನಿಗಳು ಪುನೀತ್ ಇಲ್ಲ ಎಂಬ ಕೊರಗಿನಲ್ಲಿ ಖನ್ನತೆಗೊಳಗಾದರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅಭಿಮಾನಿಗಳ ಈ ನಿರ್ಧಾರ ಸರಿಯಲ್ಲ. ಏಕೆಂದರೆ ನಗು ನಗುತ್ತಲೇ ಬಾಳಿ ಬದುಕಿದವರು. ಅವರು ಯಾವತ್ತೂ ಯಾರ ಮನಸ್ಸನ್ನು ನೋಯಿಸಿದವರಲ್ಲ.
ಇನ್ನು, ದೂರದ ಊರುಗಳಿಂದ ಪುನೀತ್ ಸಮಾಧಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಪ್ಪು ಅಂತಿಮ ದರ್ಶನಕ್ಕೆ ಸೇರಿದ ಜನಸ್ತೋಮ ಹಾಗೂ ಆ ನಂತರ ಅವರ ಸಮಾಧಿ ಭೇಟಿಗೆ ಬಂದ ಅಭಿಮಾನಿಗಳನ್ನು ಕಂಡಾಗ ಪುನೀತ್ ಸಂಪಾದಿಸಿದ್ದು ಎಂತಹ ಸಂಪತ್ತು ಎಂಬುದು ಗೊತ್ತಾಗುತ್ತದೆ. ಇಡೀ ಕರುನಾಡು ತನ್ನ ಮನೆಯ ಯಾರೋ ಸದಸ್ಯರನ್ನೇ ಕಳೆದುಕೊಂಡಂತಹ ದುಃಖ ಸಾಗರದಲ್ಲಿ ಮುಳುಗಿದೆ. ಇದೇ ವೇಳೆ ಪುನೀತ್ ಪ್ರಚಾರದ ಹಂಗಿಲ್ಲದೇ ಮಾಡಿದ ಸಹಾಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಪುನೀತ್ ಸ್ಮರಿಸದ ಕಾರ್ಯಕ್ರಮವಿಲ್ಲ: ಕನ್ನಡ ಚಿತ್ರರಂಗ ಕೂಡಾ ಪುನೀತ್ ನಿಧನದ ನಂತರ ಯಾವುದೇ ಕಾರ್ಯಕ್ರಮ ಮಾಡಿದರೂ ಮೊದಲು ಅಲ್ಲಿ ಪುನೀತ್ ಸ್ಮರಣೆ ಮಾಡಿಯೇ ಕಾರ್ಯಕ್ರಮ ಶುರು ಮಾಡುತ್ತಿದೆ. ಜೊತೆಗೆ ಅನೇಕ ಅಭಿಮಾನಿಗಳು, ಸಿನಿಮಾ ಮಂದಿ ಪುನೀತ್ ರಾಜ್‌ಕುಮಾರ್ ಕುರಿತಾದ ಆಲ್ಬಂ ಹೊರತರುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಪುನೀತ್ ಅವರ ಪುತ್ಥಳಿ ನಿರ್ಮಾಣವಾಗುತ್ತಿದೆ. ಅದೇನೇ ಆದರೂ ಪುನೀತ್ ಇಲ್ಲ ಎಂಬ ನೋವನ್ನು ಮಾತ್ರ ಹೃದಯದಿಂದ ಕಿತ್ತಾಕಲು ಯಾರಿಂದಲೂ ಸಾಧ್ಯವಿಲ್ಲ. ಅದೇ ನೋವಲ್ಲಿ ಅಭಿಮಾನಿಗಳು ಅಪ್ಪು ಸ್ಮರಣೆ ಮಾಡುತ್ತಿದ್ದಾರೆ.
ಪುನೀತ್ ಇದ್ದಿದ್ದರೆ ಈ ಒಂದು ತಿಂಗಳಲ್ಲಿ ಅದೆಷ್ಟೋ ಹೊಸಬರಿಗೆ ಪ್ರೋತ್ಸಾಹ ನೀಡುವ ಜೊತೆಗೆ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗುತ್ತಿದ್ದರು. ಆದರೆ, ಪುನೀತ್ ಇಲ್ಲದೇ ಇಡೀ ಕರುನಾಡು ಬಡವಾಗಿರೋದಂತೂ ಸತ್ಯ.
ಕಿರುತೆರೆಯಿಂದ ಅಪ್ಪು ಅಮರ: ಪುನೀತ್ ರಾಜ್‌ಕುಮಾರ್ ಅವರಿಗೆ ಕಿರುತೆರೆ ಮಂದಿ ಭಾನುವಾರ ನಮನ ಸಲ್ಲಿಸಿದ್ದಾರೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್ ಆಯೋಜಿಸಿದ್ದ “ಅಪ್ಪು ಅಮರ’ ಕಾರ್ಯಕ್ರಮದಲ್ಲಿ ಕಿರುತೆರೆಯ ಕಲಾವಿರು, ನಿರ್ದೇಶಕರು ಸೇರಿದಂತೆ ಎಲ್ಲಾ ವಿಭಾಗದ ಮಂದಿ ಸೇರಿ ಪುನೀತ್ ಸ್ಮರಣೆಗೈದರು. ಜೊತೆಗೆ ಪುನೀತ್ ಕುರಿತಾದ ಹಾಡುಗಳ ಮೂಲಕ ಗಾನ ನಮನ ಸಲ್ಲಿಸಲಾಯಿತು