Advertisement

ಮತ ಜಾಗೃತಿಗೆ ಒಂದು ನಿಮಿಷದ ಸಿನಿಮಾ!

11:54 PM Apr 01, 2019 | Lakshmi GovindaRaju |

ಬೆಂಗಳೂರು: “ಒಂದು ಸಿನಿಮಾ ಕಥೆ’ ಕೇಳಿದ್ದೀರಾ ಮತ್ತು ನೋಡಿರುತ್ತೀರ. ಆದರೆ, ಕೇವಲ ಒಂದು ನಿಮಿಷದ ಸಿನಿಮಾ ಗೊತ್ತಾ? ಮತದಾನ ಜಾಗೃತಿಗಾಗಿ ಚುನಾವಣಾ ಆಯೋಗ ಈ “ಒಂದು ನಿಮಿಷದ ಸಿನಿಮಾ’ ಹೊರತರಲು ಉದ್ದೇಶಿಸಿದೆ.

Advertisement

ಈ ಸಂಬಂಧ ವಿಡಿಯೋ ಸ್ಪರ್ಧೆ ಆಯೋಜಿಸಿದೆ. ಒಂದು ನಿಮಿಷದಲ್ಲಿ ಮತದಾನದ ಮಹತ್ವ, ಎಲ್ಲರೂ ಮತ ಚಲಾಯಿಸುವಂತೆ ಸಂದೇಶ ನೀಡುವುದು, ಯುವಕರನ್ನು ಸೆಳೆಯುವ ಅಂಶಗಳನ್ನು ಒಳಗೊಂಡ ಅತ್ಯುತ್ತಮ ವಿಡಿಯೋ ಚಿತ್ರೀಕರಣ ಮಾಡಿ, ಆಯೋಗಕ್ಕೆ ಕಳುಹಿಸಬಹುದು.

“ಓಟ್‌ ಮಾಡಿ ಆಮೇಲೆ ನೋಡಿ’, “ಮೊದಲು ಓಟಿಂಗ್‌ ಆಮೇಲೆ ಔಟಿಂಗ್‌’, “ನಮ್ಮ ನಡೆ ಮತಗಟ್ಟೆ ಕಡೆ’, “ನೈತಿಕ ಮತದಾನ’, “ಓಟಿಂಗ್‌ ನಮ್ಮ ಹೆಮ್ಮೆ ಮತ್ತು ಜವಾಬ್ದಾರಿ’ ಹಾಗೂ “ಪ್ರತಿ ಮತವೂ ಅಮೂಲ್ಯ’ ಎಂಬ ವಿಷಯಗಳ ಬಗ್ಗೆ ಒಂದು ನಿಮಿಷದ ವಿಡಿಯೋ ಸಿದ್ಧಪಡಿಸಿ, ಆಯೋಗದ ಇ-ಮೇಲ್‌ ವಿಳಾಸ; kae.eco2018@gmail.com ಗೆ ಕಳುಹಿಸಬೇಕು.

ಚಿತ್ರದ ವಿಷಯ ಸ್ವಂತದ್ದಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಮಂಡಿಸಬೇಕು. ಉತ್ತಮ ವಿಡಿಯೋಗೆ ಚುನಾವಣಾ ಆಯೋಗ ಬಹುಮಾನ ನೀಡಲಿದೆ. ಏ.5ರವರೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ನಿಮಗೆ ಆಮಂತ್ರಣ ಪತ್ರ ಬಂತ?: “ನಮ್ಮ ಮೆಟ್ರೋ’ ನಿಲ್ದಾಣದಿಂದ ಹೊರ ಬರುತ್ತಿದ್ದ ವ್ಯಕ್ತಿಯೊಬ್ಬರಿಗೆ ಪುಟ್ಟ ಬಾಲಕಿ ಎದುರಾಗಿ, ಅತ್ಯಂತ ಉತ್ಸಾಹದಲ್ಲಿ ಆಮಂತ್ರಣ ಒಂದನ್ನು ನೀಡುತ್ತಾಳೆ. “ಅಂಕಲ್‌ ತಪ್ಪದೆ ಬರ್ತೀರಾ ಅಲ್ವಾ?’ ಎಂದು ಕೇಳುತ್ತಾಳೆ. ಅದಕ್ಕೆ ಆ ವ್ಯಕ್ತಿ “ಖಂಡಿತ’ ಎಂದು ಭರವಸೆ ನೀಡುತ್ತಾರೆ. ಈ ಉತ್ತರದಿಂದ ಸಮಾಧಾನವಾಗುವುದಿಲ್ಲ.

Advertisement

ತಕ್ಷಣ “ಪ್ರಾಮಿಸ್‌ ಮಾಡಿ’ ಎಂದು ಹೇಳುತ್ತಾಳೆ. ಆ ವ್ಯಕ್ತಿ ಆಣೆ ಮಾಡುತ್ತಾರೆ. ಇದು ಯಾವುದೋ ಮದುವೆ ಅಥವಾ ಗೃಹಪ್ರವೇಶದ ಆಮಂತ್ರಣವಲ್ಲ; ಮತದಾನದ ಆಮಂತ್ರಣ! ಚುನಾವಣಾ ಆಯೋಗ ಇಂಥದ್ದೊಂದು ಚುಟುಕು ವಿಡಿಯೋವನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಅದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈಗಾಗಲೇ ಸುಮಾರು ಎರಡು ಸಾವಿರ ಜನ ಇದನ್ನು ವೀಕ್ಷಿಸಿದ್ದಾರೆ.

ಬಾಲಕಿ, ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪತ್ರವನ್ನು ಕವರ್‌ನಲ್ಲಿಟ್ಟು ಕೊಡುತ್ತಾಳೆ. ನಂತರ “ಮತದಾನ ಮಾಡುತ್ತಿರಲ್ಲಾ?’ ಎಂದು ನಗುಮೊಗದಿಂದ ಕೇಳುತ್ತಾಳೆ.ಆಮಂತ್ರಣ ಪಡೆದ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಪ್ಪದೇ ಮತದಾನ ಮಾಡುವುದಾಗಿ ಪ್ರಮಾಣ ಮಾಡಿದ್ದಾರೆ.

“ಜವಾಬ್ದಾರಿಯುತ ಪ್ರಜೆಯಾಗಳಾಗಿ ಮತದಾನ ಮಾಡಿ. ಈ ಜನತಂತ್ರದ ಹಬ್ಬಕ್ಕೆ ನಿಮ್ಮ ಗೆಳಯರು, ಮನೆಯವರು ಎಲ್ಲರನ್ನೂ ಕರೆದುಕೊಂಡು ಬನ್ನಿ. ವೋಟ್‌ ಮಾಡಿ ಆಮೇಲೆ ನೋಡಿ’ ಎಂದು ವೀಡಿಯೊದಲ್ಲಿ ಬಾಲಕಿ ಹೇಳಿದ್ದಾಳೆ. ಈ ವೀಡಿಯೊವನ್ನು 80ಕ್ಕೂ ಹೆಚ್ಚು ಜನ ಶೇರ್‌ ಮಾಡಿದ್ದಾರೆ.

ಜಾಗೃತಿಗೆ ಕೈಜೋಡಿಸಿದ ಆರ್‌ಜೆಗಳು: ಮತದಾನದ ಬಗ್ಗೆ ರೇಡಿಯೋ ಜಾಕಿಗಳು (ಆರ್‌ಜೆ) ಸಹ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ದಿನನಿತ್ಯದ ಶೋ ಮಾತ್ರವಲ್ಲದೆ, ಚುನಾವಣಾ ಆಯೋಗದ ವೆಬ್‌ಸೈಟ್‌ ಮೂಲಕವೂ ಜಾಗೃತಿ ಕಾಯಕ ಮಾಡುತಿದ್ದಾರೆ. ಆರ್‌ಜೆ ಪ್ರದೀಪ್‌, ಸೌಜನ್ಯಾ ಮತ್ತು ಸ್ಮಿತಾ ಸೇರಿದಂತೆ ಹಲವರು ಕಡ್ಡಾಯವಾಗಿ ಮತದಾನ ಮಾಡುವಂತೆ ವಿಡಿಯೋಗಳ ಮೂಲಕ ಮತದಾರರನ್ನು ಕೋರುತ್ತಿದ್ದಾರೆ.

ವ್ಯಂಗ್ಯಚಿತ್ರ ಪ್ರದರ್ಶನ ಇಂದು: ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಲಾಲ್‌ಬಾಗ್‌ನಲ್ಲಿ ವ್ಯಂಗ್ಯಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಪ್ರದರ್ಶನ ನಡೆಯಲಿದೆ.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next