ಉಡುಪಿ : ಕುಂದಾಪುರ ಮೂಲದ ಡಾ. ದಿನೇಶ್ ಶೆಟ್ಟಿಯವರ ಇತ್ತೀಚಿನ ಹೊಸ ಆವಿಷ್ಕಾರದ ಪ್ರಸ್ತಾಪ ಅಬುಧಾಬಿ ಸರಕಾರದ ಡಿಪಾರ್ಟ್ಮೆಂಟ್ ಆಫ್ ನಾಲೆಜ್ & ಎಜುಕೇಶನ್ ಕೊಡಮಾಡುವ ಸಂಶೋಧನಾ ಅನುದಾನಕ್ಕೆ ಆಯ್ಕೆಗೊಂಡಿದೆ.ಸದ್ಯಅಬುಧಾಬಿಯಲ್ಲಿರುವ, ಯುಎಇಯ ಫ್ಲ್ಯಾಗ್ ಶಿಪ್ ಸಂಶೋಧನಾ ಸಂಸ್ಥೆಯಾದ ಖಲೀಫಾ ವಿಶ್ವವಿದ್ಯಾಲಯದಲ್ಲಿ ಡಾ. ದಿನೇಶ್ ಶೆಟ್ಟಿಯವರು ತನ್ನದೇ ತಂಡದೊಂದಿಗೆ ವಿವಿಧ ಬಗೆಯ ಸಂಶೋಧನೆಯಲ್ಲಿ ತೊಡಗಿಕೊಡಿದ್ದಾರೆ.
ಒಂದು ಮಿಲಿಯನ್ ಸಂಶೋಧನಾ ಅನುದಾನಕ್ಕೆ ಆಯ್ಕೆಗೊಂಡ ಅಂಗವಾಗಿ ಡಾ. ದಿನೇಶ್ ಶೆಟ್ಟಿಯವರ ತಂಡ ಮೂರು ವರ್ಷಗಳ ಕಾಲ ಆಧುನಿಕ ನೀರಿನ ಶುದ್ದೀಕರಣದ ಸಂಬಂಧಿ ನವೀನ ಸಾಮಗ್ರಿಗಳ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿದೆ. ಇವರ ಪ್ರಯತ್ನ ಯಶಸ್ಸು ಕಂಡರೆ ಸಮುದ್ರದ ನೀರನ್ನು ಇನ್ನಷ್ಟು ದಕ್ಷವಾಗಿ ಮತ್ತು ಕಡಿಮೆ ದರದಲ್ಲಿ ಕುಡಿಯುವ ನೀರಾಗಿ ಪರಿವರ್ತಿಸಬಹುದು. ಈ ಸ್ಪರ್ಧಾತ್ಮಕ ಅನುಧಾನಕ್ಕೆ ನೂರಾರು ಸಂಶೋಧಕರ ಜೊತೆ ದಿನೇಶ್ ಕೂಡ ತಮ್ಮ ವಿಭಿನ್ನ ಯೋಚನೆಯನ್ನು ಸಲ್ಲಿಸಿದ್ದರು. ಈ ವರ್ಷ ಆಯ್ಕೆಯಾದ ಕೆಲವೇ ಕೆಲವು ಪ್ರಸ್ತಾಪಗಳಲ್ಲಿ ಇವರದ್ದು ಕೂಡ ಒಂದು.
ಕಳೆದ ಕೆಲವು ವರ್ಷಗಳಿಂದ ಕುಡಿಯುವ ನೀರು, ನವೀಕರಿಸಬಹುದಾದ ಇಂಧನ, ಮತ್ತು ಬಯೋಮೆಡಿಕಲ್ ಸಂಶೋಧಾನಾ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಈ ಮೊದಲೂ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದರು. ಈಗಾಗಲೇ US National Academy of Sciences and Engineering ಕೊಡಮಾಡುವ Arab-American Frontiers ಪ್ರಶಸ್ತಿಗೆ ಎರಡು ವರ್ಷಗಳ ಹಿಂದಷ್ಟೇ ಆಯ್ಕೆಯಾಗಿದ್ದರು.
ಇವರ ನಲವತ್ತೈದಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಪ್ರಪಂಚದ ಪ್ರಸಿದ್ಧ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ವಿಶ್ವದ ಹಲವಾರು ದೇಶಗಳಲ್ಲಿ ತಮ್ಮ ಸಂಶೋಧನೆಯನ್ನು ಮಂಡಿಸಿದ ಹಿರಿಮೆ ಇವರದ್ದು.
ಸದ್ಯ ಅಮೆರಿಕನ್ ಕೆಮಿಕಲ್ ಸೊಸೈಟಿ ಹಾಗೂ ರಾಯಲ್ ಕೆಮಿಸ್ಟ್ರಿ ಓಫ್ ಕೆಮಿಸ್ಟ್ರಿಯ ಸದ್ಯಸ್ಯರಾಗಿದ್ದು, ಈವರೆಗೆ ಅಭಿವೃದ್ಧಿ ಪಡಿಸಿದ ಸಂಶೋಧನೆಗಳ ಮೇಲೆ ಐದು ಪೇಟೆಂಟ್ ಪಡೆದಿರುತ್ತಾರೆ. ಈಗಾಗಲೇ ಎರಡು ಬಾರಿ ಅಂತಾರಾಷ್ಟ್ರೀಯ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿದ್ದು, ಇವರು ಅಭಿವೃದ್ಧಿ ಪಡಿಸಿದ್ದ ಎರಡು ಕ್ಯಾನ್ಸರ್ ಗುರುತಿಸುವ ರಾಸಾಯನಿಕ ಅಣುಗಳು ಕ್ಲಿನಿಕಲ್ ಮಟ್ಟದಲ್ಲಿ ಪರೀಕ್ಷೆಗೊಳಪಡುತ್ತಿವೆ.
ಇವರು ಕೊರಿಯಾ ದೇಶದ ಉನ್ನತ ಶಿಕ್ಷಣ ಸಂಸ್ಥೆಯಾದ ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿಯಿಂದ ಡಾಕ್ಟರೇಟ್ ಪಡೆದಿದ್ದು, ಈ ಮೊದಲು ಅಮೆರಿಕಾದ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್, ನ್ಯೂಯೋರ್ಕ್ ಯೂನಿವರ್ಸಿಟಿ ಮತ್ತು ಕೊರಿಯಾ ದೇಶದ ಇನ್ಸ್ಟಿಟ್ಯೂಟ್ ಫಾರ್ ಬೇಸಿಕ್ ಸೈನ್ಸ್ ಸಂಸ್ಥೆಗಳಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದು.