ಪ್ರೈಮರಿ ಶಾಲೆಯಲ್ಲಿ, ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಮೇಷ್ಟ್ರು ಕೊಡುತ್ತಿದ್ದ ಶಿಕ್ಷೆ ಇದು. ಹೆಚ್ಚಿನವರಿಗೆ, ಒಂಟಿ ಕಾಲಲ್ಲಿ 5-10 ನಿಮಿಷ ನಿಲ್ಲುವುದೂ ಕಷ್ಟವಾಗುತ್ತಿತ್ತು. ಪರಿಣಾಮ; ಶಿಕ್ಷೆಗೆ ಒಳಗಾದವರು ಒಂಟಿಕಾಲಲ್ಲಿ ನೆಟ್ಟಗೆ ನಿಲ್ಲಲೂ ಆಗದೆ, ನೆಲಕ್ಕೆ ಕಾಲೂರಲೂ ಸಾಧ್ಯವಾಗದೆ ಪೇಚಾಡುತ್ತಿದ್ದರು. ಬ್ಯಾಲೆನ್ಸ್ ತಪ್ಪಿದಂತೆ ಆದಾಗ, ಪಕ್ಕದಲ್ಲಿದ್ದ ಗೆಳೆಯರನ್ನು ಅಥವಾ ಗೋಡೆಯನ್ನು ಹಿಡಿದುಕೊಂಡು, ಕೆಳಗೆ ಬೀಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದರು. ವಾಸ್ತವ ಹೀಗಿರುವಾಗ, ಒಂಟಿಕಾಲು ಹೊಂದಿಯೂ ಬ್ಯಾಲೆನ್ಸ್ ತಪ್ಪದಂತೆ ನಿಲ್ಲಬಹುದು, ಓಡಬಹುದು, ಬದುಕಲೂಬಹುದು. ಅಷ್ಟೇ ಅಲ್ಲ; ಸಾವಿರ ಜನ ಮೆಚ್ಚುವಂತೆ ಡಾನ್ಸ್ ಮಾಡಬಹುದು ಎಂದು ಯುವತಿಯೊಬ್ಬಳು ತೋರಿಸಿಕೊಟ್ಟಿದ್ದಾಳೆ. ಅವಳ ಜೀವನ ಪ್ರೀತಿ ಕಂಡು ನಟಿ ಸೋನಾಲಿ ಬೇಂದ್ರೆ ಕಣ್ಣೀರಾಗಿದ್ದಾರೆ. ಆಕೆಯ ನೃತ್ಯ ಕಂಡು ನಟ ಸಲ್ಮಾನ್ ಖಾನ್ ಕೂಡ ಬೆರಗಾಗಿದ್ದಾನೆ. ಆಕೆಯೊಂದಿಗೆ ಡಾನ್ಸ್ ಮಾಡುವ ಮೂಲಕ ತನ್ನ ಸಂಭ್ರಮ ಹಂಚಿಕೊಂಡಿದ್ದಾನೆ.
*****
ಅಂದಹಾಗೆ ಈ ಸಾಧಕಿಯ ಹೆಸರು ಸಬ್ರಿತ್ ಕೌರ್. ತನ್ನ ಬದುಕು, ಬವಣೆಯ ಕುರಿತು ಸಬ್ರಿತ್ ಹೇಳುತ್ತಾಳೆ: ಪಂಜಾಬ್ ರಾಜ್ಯದ ಸಂಗ್ರೂರ್ ಜಿಲ್ಲೆಯಲ್ಲಿರುವ ಜುಂಧನ್ ಎಂಬ ಗ್ರಾಮ, ನನ್ನ ಹುಟ್ಟೂರು. ಅಕ್ಕ, ತಮ್ಮ, ಅಪ್ಪ-ಅಮ್ಮ ನನ್ನ ಕುಟುಂಬದ ಸದಸ್ಯರು. ಅಪ್ಪನಿಗೆ ಮದ್ಯಪಾನದ ದುಶ್ಚಟವಿತ್ತು. ಕಡೆಗೊಂದು ದಿನ ಕುಡಿತದ ಕಾರಣದಿಂದಲೇ ಅಪ್ಪ ಸತ್ತು ಹೋದರು. ಆಗ ನನಗೆ 13 ವರ್ಷ. ಅವತ್ತಿನಿಂದ ಸಂಸಾರ ನಿಭಾಯಿಸುವ ಹೊಣೆ ಅಮ್ಮನ ಹೆಗಲಿಗೆ ಬಿತ್ತು. ಚಿಕ್ಕಂದಿನಿಂದಲೂ ನನಗೆ ಡ್ಯಾನ್ಸ್ ನಲ್ಲಿ ಆಸಕ್ತಿ ಇತ್ತು. ಟಿವಿಯಲ್ಲಿ ಸಿನೆಮಾದ ಹಾಡು ಪ್ರಸಾರವಾಗುತ್ತಿದ್ದರೆ, ಅದನ್ನು ನೋಡಿಕೊಂಡೇ ನಾನೂ ಹೆಜ್ಜೆ ಹಾಕುತ್ತಿದ್ದೆ. ಆದರೆ ವಿಪರೀತ ಸ್ಟೇಜ್ ಫಿಯರ್ ಇತ್ತು. ಮನೆಯಲ್ಲಿ ಒಬ್ಬಳೇ ಇ¨ªಾಗ ನವಿಲಿನಂತೆ ಕುಣಿಯುತ್ತಿದ್ದೆ. ಆದರೆ ವೇದಿಕೆ ಏರಿದರೆ ಸಾಕು; ಕಾಲುಗಳು ನಡುಗುತ್ತಿದ್ದವು. ಕಣ್ಣುಗಳು ಮಂಜಾದಂತೆ, ತಲೆ ಸುತ್ತಿದಂತೆ ಭಾಸವಾಗುತ್ತಿತ್ತು. ಇದನ್ನು ಗಮನಿಸಿದ ಅಮ್ಮ- “ಡ್ಯಾನ್ಸ್ ಗೂ ನಿನಗೂ ಆಗಿಬರಲ್ಲ. ಚೆನ್ನಾಗಿ ಓದಿ ಬೇಗನೆ ಒಂದು ಕೆಲಸಕ್ಕೆ ಸೇರಿಕೋ. ನೀನೂ ನಾಲ್ಕು ಕಾಸು ದುಡಿದರೆ ಮನೆಯ ನಿರ್ವಹಣೆ ಸುಲಭ ಆಗುತ್ತೆ’ ಅಂದರು.
Advertisement
ಓದು ಮುಗಿಸಿದ ತತ್‌ಕ್ಷಣ ಕೆಲಸ ಸಿಗುತ್ತದೆ ಎಂಬ ಆಸೆಯಿಂದ ನರ್ಸಿಂಗ್ ಕೋರ್ಸ್ ಮುಗಿಸಿದೆ. ಈಗಲೇ ಕೆಲಸಕ್ಕೆ ಸೇರಿಕೊಂಡರೆ ಮುಂದೆ ಓದಲು ಸಾಧ್ಯವಾಗಲ್ಲ. ಒಂದು ಡಿಗ್ರಿ ಕೂಡ ಜತೆಗಿದ್ದರೆ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲ ಅನ್ನಿಸಿದಾಗ ಬಿ.ಎಸ್ಸಿಗೆ ಸೇರಿ ಕೊಂಡೆ. ಅವತ್ತು 2009ರ ಅಕ್ಟೋಬರ್ 21ರ ಬುಧವಾರ. ಕಾಲೇಜು ಮುಗಿಸಿಕೊಂಡು ಫ್ರೆಂಡ್ ಜತೆ ಸ್ಕೂಟಿಯಲ್ಲಿ ಮನೆಗೆ ಬರುತ್ತಿದ್ದೆ. ರೊಯ್ಯನೆ ಸಾಗುತ್ತಿದ್ದ ಸ್ಕೂಟಿ ಇದ್ದಕ್ಕಿದ್ದಂತೆ ಸ್ಕಿಡ್ ಆಯಿತು. ಅಷ್ಟೆ; ನಾನೇ ಒಂದು ಕಡೆಗೆ, ಗೆಳತಿ ಮತ್ತೂಂದು ಕಡೆಗೆ ಹಾರಿಬಿದ್ದೆವು.
Related Articles
ಸಣ್ಣಪುಟ್ಟ ಕೆಲಸ ಮಾಡಿಕೊಂಡು ಮನೆ ನಡೆಸುತ್ತಿದ್ದವಳು ಅಮ್ಮ. ಅವಳಿಗೆ ಪ್ರೈವೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಶಕ್ತಿಯಾದರೂ ಎಲ್ಲಿಂದ ಬರಬೇಕು? ಹಾಗಂತ ಅಮ್ಮ ಹೆದರಲಿಲ್ಲ. ಹತ್ತಾರು ಆಸ್ಪತ್ರೆಗಳ ಬಾಗಿಲು ಬಡಿದಳು. ತನಗೆ ಅರ್ಥವಾದಂತೆ ಡಾಕ್ಟರ್‌ಗಳಿಗೆ ವಿವರಿಸಿ ಹೇಳಿದಳು. ರಿಪೋರ್ಟ್‌ಗಳ ಪಟ್ಟಿ ಕೊಟ್ಟಳು. ಎಲ್ಲವನ್ನೂ ಪರೀಕ್ಷಿಸಿದ ಲುಧಿಯಾನದ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾಕ್ಟರ್ “ಗ್ಯಾಂಗ್ರಿನ್ ಕಾರಣಕ್ಕೆ ಕಾಲು ಕೊಳೆತು ಹೋಗಿದೆ. ತೊಡೆಯ ಭಾಗದವರೆಗೆ ಕತ್ತರಿಸಲೇಬೇಕು. ಈ ಚಿಕಿತ್ಸೆಗೆ 7 ಲಕ್ಷ ರೂಪಾಯಿ ಖರ್ಚಾಗುತ್ತದೆ’ ಅಂದರಂತೆ. ಮಗಳ ಜೀವಕ್ಕಿಂತ 7 ಲಕ್ಷ ದೊಡ್ಡದಲ್ಲ ಎಂದು ಯೋಚಿಸಿದ ಅಮ್ಮ, ಬ್ಯಾಂಕ್‌ನಲ್ಲಿ ಪರ್ಸನಲ್ ಲೋನ್ ಪಡೆದು, ಆಸ್ಪತ್ರೆಗೆ ಕಟ್ಟಿದಳು. 2010ರ ಸೆಪ್ಟಂಬರ್ 16ರಂದು, ಎಡಗಾಲಿನ ತೊಡೆಯವರೆಗಿನ ಭಾಗವನ್ನು ಕಟ್ ಮಾಡಲಾಯಿತು. ಈ ವೇಳೆಗೆ, ನೋವು ನುಂಗಿ ಬದುಕುವುದು ನನಗೂ ಅಭ್ಯಾಸವಾಗಿ ಹೋಗಿತ್ತು. ಹಾಗಾಗಿ ಹೊಸ ಬದುಕಿಗೆ ಬೇಗ ಹೊಂದಿಕೊಳ್ಳಲು ನಿರ್ಧರಿಸಿದೆ.
Advertisement
“ತೊಡೆಯ ಭಾಗದವರೆಗೂ ಕಾಲನ್ನು ಕತ್ತರಿಸಲಾಗಿದೆ’ ಎಂದು ಗೊತ್ತಾಗುತ್ತಿದ್ದಂತೆ ಜನ ನನ್ನನ್ನು ನೋಡುವ ದೃಷ್ಟಿಯೇ ಬದಲಾಯಿತು. ಕೆಲವರು ಅಯ್ಯೋ ಎಂದರು. ಹಲವರು ಆಡಿಕೊಂಡರು. ಮತ್ತೆ ಕೆಲವರು, ಮುಂದೆ ಹೇಗೆ ಬದುಕ್ತೀಯ? ಎಂದು ಕೇಳಿದರು. ನಿನ್ನ ಭವಿಷ್ಯದ ಗತಿ ಏನು ಎಂದು ಪ್ರಶ್ನಿಸಿದರು. ಇಂಥ ಮಾತುಗಳನ್ನೇ ಕೇಳುತ್ತಾ ಉಳಿದರೆ ಹುಚ್ಚು ಹಿಡಿಯುವುದು ಗ್ಯಾರಂಟಿ ಅನ್ನಿಸಿದಾಗ ಜನರ ಭೇಟಿಯನ್ನೇ ಅವಾಯx… ಮಾಡಿದೆ. ಅಂಗವೈಕಲ್ಯ ಇದ್ದರೂ ಮಹತ್ವದ ಸಾಧನೆ ಮಾಡಿದವರ ಕುರಿತು ನಿರಂತರವಾಗಿ ಓದ ತೊಡಗಿದೆ. ಯು ಟ್ಯೂಬ್‌ನಲ್ಲಿ ಹಲವರ ಸಂದರ್ಶನ ನೋಡಿದೆ. ಆಗ ಕಾಣಿಸಿದ್ದೇ ವಿನೋದ್ ಠಾಕೂರ್ ಅವರ ನೃತ್ಯ. ಅವರಿಗೆ ಮಂಡಿಯತನಕ ಎರಡೂ ಕಾಲು ಇರಲಿಲ್ಲ. ಮೋಟು ಕಾಲುಗಳ ಸಹಾಯದಿಂದಲೇ ಆತ India’s Got Talent ಸ್ಪರ್ಧೆಯಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡಿ ಎಲ್ಲರ ಮನಗೆದ್ದ. ಅದನ್ನು ನೋಡುತ್ತಿದ್ದಂತೆಯೇ, ನಾನೂ ಅದೇ ವೇದಿಕೆಯಲ್ಲಿ ನರ್ತಿಸಬೇಕು. ಆತನಂತೆಯೇ ಹೆಸರು ಮಾಡಬೇಕು ಅನ್ನಿಸಿತು. ಅಮ್ಮನ ಜತೆ ಎಲ್ಲವನ್ನೂ ಹೇಳಿಕೊಂಡೆ. “ಜತೆಗೆ ನಾನಿದ್ದೇನೆ, ಅಭ್ಯಾಸ ಶುರು ಮಾಡು’ ಅಂದಳು ಅಮ್ಮ.
ಒಂಟಿಕಾಲಿನಲ್ಲಿ ನಿಲ್ಲುವುದು, ಓಡುವುದು, ನಾಜೂಕಿನಿಂದ ನಡೆಯುವುದು, ಡ್ಯಾನ್ಸ್ ಗೆ ತಕ್ಕಂತೆ ದೇಹವನ್ನು ಬಳುಕಿಸುವುದು ಸುಲಭವಲ್ಲ. ಸ್ವಲ್ಪ ಬ್ಯಾಲೆನ್ಸ್ ತಪ್ಪಿದರೂ ಎಡವಟ್ಟಾಗುತ್ತದೆ ಅನ್ನಿಸಿದಾಗ, ದೇಹಕ್ಕೆ ಶಿಸ್ತು ಕಲಿಸಲು ನಿರ್ಧರಿಸಿದೆ. ಜಾಗಿಂಗ್, ಸ್ಕಿಪ್ಪಿಂಗ್, ಜಿಮ್‌ನಲ್ಲಿ ಕಸರತ್ತು ಮಾಡುವ ಮೂಲಕ ಕೊಬ್ಬು ಕರಗಿಸಿದೆ. ಯೋಗ-ಧ್ಯಾನದ ಮೂಲಕ ಏಕಾಗ್ರತೆ ಸಾಧಿಸಿದೆ. ಟೀವಿ ನೋಡಿಕೊಂಡು ಸಾಕಷ್ಟು ಹಾಡಿಗೆ ಸ್ಟೆಪ್ ಹಾಕುವುದನ್ನೂ ಕಲಿತೆ. ಇವೆಲ್ಲ ಪೂರ್ವ ತಯಾರಿಯ ಅನಂತರ, ನನಗೂ ಡ್ಯಾನ್ಸ್ ಕಲಿಸಿಕೊಡಿ ಎಂಬ ಮನವಿಯೊಂದಿಗೆ ನೃತ್ಯ ಶಾಲೆಗಳ ಬಾಗಿಲು ಬಡಿದೆ. ಆಗಲೂ ಅಷ್ಟೆ: ಜನ ಗೇಲಿ ಮಾಡಿದರು. “ನೀನು ಡ್ಯಾನ್ಸ್ ಮಾಡ್ತೀಯ? ಒಂಟಿ ಕಾಲಲ್ಲಿ ಅದೇನು ಸ್ಟೆಪ್ ಹಾಕೋಕಾಗುತ್ತೆ? ಹೀಗೆಲ್ಲ ಹಗಲುಗನಸು ಕಾಣಬಾರದು…’ ಎಂದು ಬುದ್ಧಿ ಹೇಳಿದರು. ಯಾರೆಷ್ಟೇ ಹಂಗಿಸಿದರೂ ನಾನು ಕುಗ್ಗಲಿಲ್ಲ. ಕಡೆಗೆ, ರಾಕ್ ಸ್ಟಾರ್ ಅಕಾಡೆಮಿಯ ನಿರ್ದೇಶಕ ಸಮೀರ್ ಮಹಾಜನ್ ನನಗೆ ನೃತ್ಯ ಕಲಿಸಲು ಒಪ್ಪಿದರು. ಅಲ್ಲಿ ಪೂರ್ತಿ ಒಂದು ವರ್ಷ ಅಭ್ಯಾಸ ಮಾಡಿದ ಅನಂತರ 2014ರಲ್ಲಿ, India’s Got Talent ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿಯೇಬಿಟ್ಟಿತು!’*****
ಅನಂತರದಲ್ಲಿ ಎಲ್ಲವೂ ಕನಸಿನಂತೆಯೇ ನಡೆದುಹೋಗಿದೆ ಅನ್ನಬೇಕು. India’s Got Talent ಸ್ಪರ್ಧೆಯಲ್ಲಿ ಸಬ್ರಿàತ್ ಕೌರ್ ದ್ವಿತೀಯ ಸ್ಥಾನ ಪಡೆದಳು. ಡ್ಯಾನ್ಸ್ ಕಲಿಯಲು ಆಕೆ ದೇಹವನ್ನು “ಸಿದ್ಧ ಮಾಡಿದ ರೀತಿ’, ನೃತ್ಯದ ಬಗ್ಗೆ ಆಕೆಗಿದ್ದ ಪ್ರೀತಿ, ಸ್ಟೆಪ್ ಹಾಕುವಲ್ಲಿ ಅವಳಿಗಿದ್ದ ಆತ್ಮವಿಶ್ವಾಸ ಕಂಡು ಸ್ಪರ್ಧೆಯ ತೀರ್ಪುಗಾರರು ಬೆರಗಾ ದರು. ನಟ ಸಲ್ಮಾನ್ ಖಾನ್ ಆಕೆಯ ಪ್ರತಿಭೆಗೆ ತಲೆಬಾಗಿದ. ಜತೆ ಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ಆಕೆಯ ಬೆನ್ನುತಟ್ಟಿದ. ಈ ಮಧ್ಯೆ ಯಶ್ ಮಕ್ಕರ್ ಎಂಬಾತನನ್ನ ಮದುವೆಯಾದ ಸಬ್ರಿತ್ 2 ತಿಂಗಳ ಅನಂತರ ಡೈವೋರ್ಸ್ ಪಡೆದ ಘಟನೆಯೂ ನಡೆದು ಹೋಯಿತು. ಈಗ ಪಂಜಾಬ್‌ನಲ್ಲಿ ಅಮ್ಮನ ಜತೆಗಿದ್ದಾಳೆ ಸಬ್ರಿತ್. ಅವಳೀಗ ಸೆಲೆಬ್ರಿಟಿ! ಹೆಸರಾಂತ ಕಂಪೆನಿಗಳು ತಮ್ಮ ಕಾರ್ಯಕ್ರಮದಲ್ಲಿ ಆಕೆಯ ಡ್ಯಾನ್ಸ್ ಶೋ ಏರ್ಪಡಿಸುತ್ತವೆ. ಪಂಜಾಬಿ ಸಿನೆಮಾ, ಧಾರಾವಾಹಿಗಳಲ್ಲಿ ಆಕೆಗಾಗಿಯೇ ಪಾತ್ರಗಳು ಸೃಷ್ಟಿಯಾಗುತ್ತಿವೆ. ಈ ಮೊದಲು ಆಡಿಕೊಂಡಿದ್ದವರೇ ಈಗ ಆಟೋಗ್ರಾಫ್ ಪಡೆಯಲು, ಆಕೆಯ ಜತೆಗೆ ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಎಲ್ಲವನ್ನೂ ಮುಗುಳ್ನಗೆಯ ಮೂಲಕವೇ ಸ್ವೀಕರಿಸುವ ಸಬ್ರಿತ್ ಹೇಳುತ್ತಾಳೆ: ‘ಬದುಕಿನ ಎಲ್ಲ ಮುಖವನ್ನೂ ನಾನು ನೋಡಿದ್ದಾಯಿತು. ನನಗಾಗಿ ಜೀವ ತೇಯ್ದವಳು ಅಮ್ಮ. ಇನ್ನು ಮುಂದೆ ಅವಳ ಪಾಲಿಗೆ ನಾನು ಅಮ್ಮನಾಗಬೇಕು. ಇಷ್ಟರಲ್ಲೇ ನಡೆಯುವ America’s Got Talent ಸ್ಪರ್ಧೆಯಲ್ಲಿ ಭಾಗವಹಿಸಿ, ಅಲ್ಲೂ ಗೆದ್ದು ಅಮ್ಮನ ಖುಷಿ ಹೆಚ್ಚಿಸಬೇಕು…’ ಸಬ್ರಿàತ್‌ಗೆ ಅಮೆರಿಕದಲ್ಲೂ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿ. ಯು ಟ್ಯೂಬ್ ನಲ್ಲಿ Subhreet Kaur Ghumman ಎಂದು ಟೈಪ್ ಮಾಡಿದರೆ ಈಕೆಯ ನೃತ್ಯದ, ಬಾಳ ಕಥೆಯ ದೃಶ್ಯಗಳಿವೆ. ಸಾಧ್ಯವಾದರೆ ವೀಕ್ಷಿಸಿ. – ಎ.ಆರ್.ಮಣಿಕಾಂತ್