ಹೊಸದಿಲ್ಲಿ: ಗ್ರೇಟರ್ ಇಂಫಾಲ್ ಮತ್ತು ಮಣಿಪುರದ 1700 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬೃಹತ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಇದನ್ನು ಮಣಿಪುರದ ಮಹಿಳೆಯರಿಗೆ ರಕ್ಷಾಬಂಧನ ಉಡುಗೊರೆ ಅಂತಲೇ ಬಣ್ಣಿಸಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.
‘ಕುಡಿಯುವ ನೀರಿನ ಯೋಜನೆಯಿಂದ ಒಂದು ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಸ್ಥಳೀಯ ಪಂಚಾಯತ್‌ಗಳು, ಮಣಿಪುರ ಹಳ್ಳಿಗಳ ಜನರ ಸಹಾಯದಿಂದ ಈ ಯೋಜನೆ ವಿನ್ಯಾಸಗೊಂಡಿದೆ. ಇದು ವಿಕೇಂದ್ರೀಕರಣದ ಉತ್ತಮ ನಿದರ್ಶನ’ ಎಂದು ವ್ಯಾಖ್ಯಾನಿಸಿದ್ದಾರೆ.
ದೇಶ ನಿಲ್ಲಲಿಲ್ಲ!: ಕೋವಿಡ್ 19 ಕಾರಣಕ್ಕಾಗಿ ದೇಶ ನಿಲ್ಲಲಿಲ್ಲ. ಲಾಕ್‌ಡೌನ್ ಸಮಯದಲ್ಲೂ ಪೈಪ್‌ಲೈನ್ ಹಾಕುವ ಕೆಲಸ ಮುಂದುವರಿದಿದೆ. ಮಣಿಪುರ ನೀರು ಸರಬರಾಜು ಯೋಜನೆ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ’ ಎಂದು ವಿವರಿಸಿದ್ದಾರೆ. ‘ಹರ್ ಘರ್ ಜಲ್’ ಪರಿಕಲ್ಪನೆಯಡಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಅವಳಿ ಸವಾಲು: ಈಶಾನ್ಯ ರಾಜ್ಯಗಳು ಅವಳಿ ಸವಾಲುಗಳನ್ನು ಎದುರಿಸುತ್ತಿವೆ. ಒಂದೆಡೆ ಕೋವಿಡ್ 19, ಮತ್ತೂಂದೆಡೆ ಪ್ರವಾಹದಿಂದ ಸಾಕಷ್ಟು ನಷ್ಟ ಸಂಭವಿಸಿದೆ. ಇಂಥ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಎಂದು ಭರವಸೆ ನೀಡಿದರು.
ಈಶಾನ್ಯವು ಭಾರತದ ಎಂಜಿನ್: ಈಶಾನ್ಯವು ಭಾರತದ ಪ್ರಗತಿಗೆ ಎಂಜಿನ್ ಆಗುವ ಎಲ್ಲ ಸಾಮರ್ಥ್ಯ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆಯಾಗುತ್ತಿದೆ. ಬಂಡುಕೋರರ ಬಂಡಾಯಗಳು ಕೊನೆಗೊಳ್ಳುತ್ತಿವೆ ಎಂದು ಮೋದಿ ಹೇಳಿದರು.