Advertisement

ಕಂದಾಯ ನ್ಯಾಯಾಲಯಗಳಲ್ಲಿ ಲಕ್ಷ ಅರೆ ನ್ಯಾಯಿಕ ಪ್ರಕರಣ ಬಾಕಿ

11:31 AM Apr 20, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಂದಾಯ ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳ ಭಾರ ಹೆಚ್ಚಾಗುತ್ತಲೇ ಇದ್ದು ಪ್ರಸ್ತುತ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ಕಂದಾಯ ನ್ಯಾಯಾಲಯಗಳಲ್ಲಿ 1 ಲಕ್ಷಕ್ಕೂ ಅಧಿಕ ಅರೆ ನ್ಯಾಯಿಕ ಪ್ರಕರಣಗಳು ಬಾಕಿ ಇವೆ.

Advertisement

ಜಮೀನಿನ ಹಕ್ಕು ವರ್ಗಾವಣೆ, ಮ್ಯುಟೇಷನ್‌, ಖಾತಾ ಮತ್ತು ಆರ್‌.ಟಿ.ಸಿ ಬದಲಾವಣೆಗಳಿಗೆ ಸಂಬಂಧಿಸಿದ ಅರೆ ನ್ಯಾಯಿಕ ಪ್ರಕರಣಗಳನ್ನು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರ ಕಂದಾಯ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸುತ್ತಾರಾದರೂ ಅಧಿಕಾರಿಗಳ ಕಾರ್ಯಬಾಹುಳ್ಯದ ಪರಿಣಾಮ ಅರೆ ನ್ಯಾಯಿಕ ಪ್ರಕರಣಗಳ ಬಾಕಿ ಹೆಚ್ಚುತ್ತಲೇ ಇದೆ.

ಅದಕ್ಕಾಗಿ ಈ ಬಾಕಿ ಪ್ರಕರಣಗಳ ಭಾರ ಇಳಿಸಲು ಕಂದಾಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಂತೆ, ಅರೆ ನ್ಯಾಯಿಕ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ದೃಷ್ಟಿಯಿಂದ ಎಲ್ಲಾ ಅರೆ ನ್ಯಾಯಿಕ ಕಂದಾಯ ನ್ಯಾಯಾಲಯಗಳು ಪ್ರಕರಣಗಳ ವಿಚಾರಣೆಯನ್ನು ವಾರದ ಪ್ರತಿ ಮಂಗಳವಾರ ಮತ್ತು ಗುರುವಾರಗಳಂದು ಪೂರ್ಣದಿನ ಕಡ್ಡಾಯವಾಗಿ ನಡೆಸಲು ನಿರ್ದೇಶನ ನೀಡಿದೆ.

ಅದೇ ರೀತಿ ಮ್ಯುಟೇಷನ್‌, ಖಾತಾ ಮತ್ತು ಆರ್‌ಟಿಸಿ ಬದಲಾವಣೆಗೆ ಸಲ್ಲಿಕೆಯಾಗುವ ಅರ್ಜಿಗಳು ವಿವಾದ ರಹಿತವಾದ ಪ್ರಕರಣಗಳಿದ್ದಲ್ಲಿ ಖಾತೆ ಬದಲಾವಣೆಯನ್ನು 60 ದಿನಗಳಲ್ಲಿ ಭೂಮಿ ತಂತ್ರಾಂಶದ ಮೂಲಕ ಸಕಾಲ ಸೇವೆಗಳಡಿ ವಿಲೇವಾರಿ ಮಾಡಲಾಗುತ್ತಿದೆ. ಅಲ್ಲದೇ ಅರ್ಜಿಯು ಆಸ್ತಿಯ ಹಕ್ಕಿನ ಹೊರತಾದ ವಿವಾದಿತ ಪ್ರಕರಣವಾಗಿದ್ದಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮದ ಪ್ರಕಾರ ತಹಶೀಲ್ದಾರರು ಮೂರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು. ಮೇಲ್ಮನವಿಗಳನ್ನು ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು 6 ತಿಂಗಳಲ್ಲಿ ಇತ್ಯರ್ಥಪಡಿಸಲು ಸೂಚಿಸಲಾಗಿದೆ.

ಬಾಕಿ ಪ್ರಕರಣಗಳ ವಿಲೇವಾರಿಯನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳಿಗೆ ಸರ್ಕಾರ ತಿಂಗಳ ಗುರಿ ನೀಡಿದೆ. ಅದರಂತೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಅರೆ ನ್ಯಾಯಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪ್ರತಿ ಜಿಲ್ಲಾಧಿಕಾರಿ ಪ್ರತಿ ತಿಂಗಳು 75 ಪ್ರಕರಣಗಳನ್ನು ಹಾಗೂ ಉಪ ವಿಭಾಗಾಧಿಕಾರಿಗಳು ಪ್ರತಿ ತಿಂಗಳು 100 ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಗುರಿ ನಿಗದಿಪಡಿಸಲಾಗಿದೆ.

Advertisement

1.05 ಲಕ್ಷ ಪ್ರಕರಣಗಳು ಬಾಕಿ: ರಾಜ್ಯದ ಎಲ್ಲಾ ಕಂದಾಯ ನ್ಯಾಯಾಲಯಗಳಲ್ಲಿ 1.05 ಲಕ್ಷ ಪ್ರಕರಣಗಳು ಬಾಕಿ ಇದ್ದಾವೆ. ಇದರಲ್ಲಿ ಉಪವಿಭಾಗಾಧಿಕಾರಿ ಹಂತದಲ್ಲಿ ಹೆಚ್ಚು ಬಾಕಿ ಪ್ರಕರಣಗಳು ಬಾಕಿ ಇದ್ದರೆ, ಜಿಲ್ಲಾ ಮಟ್ಟದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು 19 ಸಾವಿರ ಪ್ರಕರಣಗಳು ಬಾಕಿ ಉಳಿದಿವೆ. ಉಳಿದಂತೆ ಬೆಂಗಳೂರು ಗ್ರಾಮಾಂತರ-6,887. ರಾಮನಗರ- 5,326. ಚಿಕ್ಕಬಳ್ಳಾಪುರ-5,302. ಕೋಲಾರ-6,212. ತುಮಕೂರು-13,865. ಚಿತ್ರದುರ್ಗ-3,091. ದಾವ ಣ ಗೆರೆ- 1,479. ಶಿವಮೊಗ್ಗ-1,686. ಮೈಸೂರು- 4,458. ಮಂಡ್ಯ-6,538. ಚಾಮರಾಜನಗರ-1,724. ಹಾಸನ-3,138. ಚಿಕ್ಕಮಗಳೂರು-2,265. ಕೊಡಗು- 651. ದಕ್ಷಿಣ ಕನ್ನಡ-3,558. ಉಡುಪಿ-1,891. ಬೆಳಗಾವಿ-3,861. ಬಾಗಲಕೋಟೆ-708. ವಿಜಯ ಪುರ-781, ಧಾರವಾಡ-357. ಗದಗ-311. ಹಾವೇರಿ -915. ಉತ್ತರ ಕನ್ನಡ-237. ಕಲಬುರಗಿ-1,136. ಬಳ್ಳಾರಿ-1,168. ಬೀದರ್‌ -1,594. ಕೊಪ್ಪಳ-774. ರಾಯಚೂರು-2,929. ಯಾದಗಿರಿ-1,273. ವಿಜ ಯನಗರ-1,155 ಪ್ರಕರಣಗಳು ಬಾಕಿ ಉಳಿದಿವೆ.

ಅಪರ ಜಿಲ್ಲಾಧಿಕಾರಿ, ಉಪ ತಹಶೀಲ್ದಾರ್‌ಗೆ ಹೊಣೆ? ಕಂದಾಯ ನ್ಯಾಯಾಲಯಗಳ ಅರೆ ನ್ಯಾಯಿಕ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಉಳಿದಿರುವುದು ಹಾಗೂ ಮೇಲ್ಮನವಿಗಳ ಇತ್ಯರ್ಥ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣಗಳ ಇತ್ಯರ್ಥದ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರ ಜತೆಗೆ ಆಯಾ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿ ಹಾಗೂ ಉಪತಹಶೀಲ್ದಾರರಿಗೆ ನೀಡಬೇಕೆಂಬ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

●ರಫೀಕ್‌ ಅಹ್ಮದ್‌

 

Advertisement

Udayavani is now on Telegram. Click here to join our channel and stay updated with the latest news.

Next