ಬೆಂಗಳೂರು: ನಗರದಲ್ಲಿ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಸಂತೋಷ್ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸ್ಥಳದಲ್ಲೇ ಒಂದು ಲಕ್ಷ ರೂ. ಪರಿಹಾರ ನೀಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಂತೋಷ್ ಕುಟುಂಬದ ಆರ್ಥಿಕ ಭದ್ರತೆಗಾಗಿ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ಕೊಟ್ಟಿದ್ದಾರೆ.
ಶಿವಾಜಿನಗರ ಸಮೀಪದ ಚಿನ್ನಪ್ಪ ಗಾರ್ಡನ್‌ನಲ್ಲಿರುವ ಆತನ ಮನೆಗೆ ಭೇಟಿ ನೀಡಿದ ಯಡಿಯೂರಪ್ಪ ಅವರ ಮುಂದೆ ಕುಟುಂಬ ಸದಸ್ಯರು ಕಣ್ಣೀರಿಟ್ಟರು. “ಈ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಬೇಕಾಬಿಟ್ಟಿ ಗಾಂಜಾ ಸೇವನೆ ನೆಯುತ್ತಿದೆ. ಅದನ್ನು ತಡೆಯಲು ಪ್ರಯತ್ನಿಸಿದ ನಮ್ಮ ಮನೆ ಮಗನನ್ನು ಹತ್ಯೆ ಮಾಡಿದ್ದಾರೆ. ನಮಗೆ ರಕ್ಷಣೆ ನೀಡಿ,’ ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಬಿಎಸ್‌ವೈ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕುಟುಂಬಸ್ಥರಿಗೆ ಭದ್ರತೆ ಒದಗಿಸುವ ಮನೆಯ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದರು. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಶಾಸಕ ಬಿ.ಎನ್.ವಿಜಯಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಜತೆಗಿದ್ದರು.
ಹತ್ಯೆಯಾದ ಸಂತೋಷ್ ಮನೆ ಪಕ್ಕದಲ್ಲೇ ಇರುವ ಮನೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತ ಮುಖಂಡರ ಜತೆ ಸಮಾಲೋಚನೆ ಮಾಡಿ ಅಲ್ಲಿ ಭೋಜನ ಸೇವಿಸಿದ್ದಾರೆ. ಆದರೆ, ಸಂತೋಷ್ ಮನೆಗೆ ಭೇಟಿ ನೀಡಬೇಕೆಂಬ ಸೌಜನ್ಯ ಕೂಡ ಸಿಎಂಗೆ ಇಲ್ಲದಿರುವುದು ದುರಂತ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ