Advertisement

ಒಂದು ಲಕ್ಷ ಗುಂಪು ಮನೆ ನಿರ್ಮಾಣ

06:11 AM Mar 01, 2019 | |

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಬಳಸಿ ನಗರ ವ್ಯಾಪ್ತಿಯಲ್ಲಿ ಒಂದು ಲಕ್ಷ ಗುಂಪು ಮನೆಗಳ ನಿರ್ಮಿಸಲು ರಾಜೀವ್‌ಗಾಂಧಿ ವಸತಿ ನಿಮಗಕ್ಕೆ 1,600 ಎಕರೆ ಭೂಮಿ ನೀಡಿರುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನಗರದ ಅರಮನೆ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅರ್ಹ ಫ‌ಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸಿ ಮಾತನಾಡಿದರು.

Advertisement

ಬಡವರು, ರಿಕ್ಷಾ ಚಾಲಕರು, ಗಾರ್ಮೆಂಟ್ಸ್‌ ಉದ್ಯೋಗಿಗ ಅನುಕೂಲಕ್ಕಾಗಿ ಗುಂಪು ಮನೆಗಳನ್ನು ನಿರ್ಮಿಸುತ್ತಿದ್ದೇವೆ. ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದ್ದು, ಈಗಾಗಲೇ 48 ಸಾವಿರ ಅರ್ಜಿ ಬಂದಿದೆ. ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಆದಷ್ಟು ಬೇಗ ಭೂಮಿ ಪೂಜೆ ನೆರವೇರಿಸಲಿದ್ದೇವೆ ಎಂದರು.

ಗುಂಪು ಮನೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ತಲಾ 1.50 ಲಕ್ಷ ರೂ. ಒದಗಿಸಲಿದ್ದು, ಮನೆ ಮಾಲೀಕರು 1.50 ಲಕ್ಷ ರೂ. ನೀಡಬೇಕು. ಉಳಿದ ಮೂರ್‍ನಾಲ್ಕು ಲಕ್ಷ ರೂ.ಗಳನ್ನು ಸರ್ಕಾರವೇ ಭದ್ರತೆ ನೀಡಿ ಬ್ಯಾಂಕ್‌ ಸಾಲ ಸೌಲಭ್ಯ ಒದಗಿಸುತ್ತದೆ. ನಾಡಿನ ಪ್ರತಿ ಕುಟುಂಬಕ್ಕೂ ಮನೆ ಅಥವಾ ನಿವೇಶನ ಒದಗಿಸುವ ಉದ್ದೇಶದಿಂದ ನಿಯಮದಲ್ಲೂ ಬದಲಾವಣೆ ತಂದಿದ್ದೇವೆ ಎಂದು ಹೇಳಿದರು.

2006-07ರಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೂ ಬಡವರಿಗೆ ನಿವೇಶದ ಹಕ್ಕುಪತ್ರ ಒದಗಿಸಲು ಚಾಲನೆ ನೀಡಲಾಗಿತ್ತು. ಹಿಂದಿನ ಸರ್ಕಾರ ಗುರುತಿಸಿದ್ದ ಎಲ್ಲ ನಿವೇಶನಗಳ ಹಕ್ಕು ಪತ್ರವನ್ನು ಈಗ ವಿತರಿಸುತ್ತಿದ್ದೇವೆ. 94-ಸಿ ಹಾಗೂ 94-ಸಿಸಿ ಅಡಿಯಲ್ಲಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಅಕ್ರಮ-ಸಕ್ರಮ ಮಾಡುತ್ತಿದ್ದೇವೆ. ಇಲ್ಲಿ ಜಾತಿ ಪ್ರಶ್ನೆಯೇ ಇಲ್ಲ ಎಂದು ವಿವರಿಸಿದರು.

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, 94-ಸಿ ಅಡಿಯಲ್ಲಿ 1,11,800 ಜನರಿಗೆ ಈವರೆಗೆ ಹಕ್ಕುಪತ್ರ ನೀಡಿದ್ದೇವೆ. 81,385 ಜನರಿಗೆ ಹಕ್ಕು ಪತ್ರ ನೀಡಲು ಬಾಕಿ ಇದೆ. 94-ಸಿಸಿ ಅಡಿಯಲ್ಲಿ 45,193 ಫ‌ಲಾನುಭವಿಗಳಿಗೆ ಹಕ್ಕು ಪತ್ರ ಹಂಚಿಕೆ ಮಾಡಿದ್ದು, 36,140 ಫ‌ಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಬಾಕಿ ಇದೆ ಎಂದರು.

Advertisement

ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದ್ದು, ಮಾ.31ರವರೆಗೂ ಅರ್ಜಿ ಸಲ್ಲುಸಲು ಅವಕಾಶವಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಂದಿರುವ ಅರ್ಜಿಗಳನ್ನು ನೋಂದಣಿ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ. ನಿವೇಶನದಲ್ಲೇ ಮೂಲ ಸೌಕರ್ಯ ಒದಗಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಅಂದು ಇಂದಿರಾ ಗಾಂಧಿಯವರು ತೆಗೆದುಕೊಂಡು ಕ್ರಾಂತಿಕಾರಿ ನಿರ್ಧಾರದಿಂದ ಬಡವರಿಗೆ ಸೂರು, ನಿವೇಶನ ಸಿಗುವಂತಾಗಿದೆ ಎಂದರು. ಮೇಯರ್‌ ಗಂಗಾಬಿಂಕೆ ಮಲ್ಲಿಕಾರ್ಜುನ್‌, ಶಾಸಕರಾದ ರೋಷನ್‌ ಬೇಗ್‌, ಬಿ.ಎನ್‌.ಸುರೇಶ್‌, ಮುನಿರತ್ನ, ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಹರ್ಷದ್‌ ಮೊದಲಾದವರು ಇದ್ದರು. ಹತ್ತು ಸಾವಿರ ಫ‌ಲಾನುಭವಿಗಳಲ್ಲಿ ಕೆಲವರಿಗೆ ಮಾತ್ರ ಸಾಂಕೇತಿಕವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಕ್ಕುಪತ್ರ ವಿತರಣೆ ಮಾಡಿದರು.

ಸಿಎಂ ಪರಿಹಾರ ನಿಧಿಗೆ ದೇಣಿಗೆ: ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮವು ತನ್ನ 12 ಕೋಟಿ ರೂ.ಗಿಂತ ಅಧಿಕ ನಿವ್ವಳ ಲಾಭಾಂಶದಲ್ಲಿ 5 ಕೋಟಿ ರೂ.ಗಳನ್ನು ಸರ್ಕಾರಕ್ಕೆ ನೀಡಿದೆ. ಇದರಲ್ಲಿ 2.50 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಾಗೂ ಉಳಿದ 2.50 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದು, ನಿಗಮದ ಅಧ್ಯಕ್ಷ ಬಿ.ಎನ್‌.ಸುರೇಶ್‌ ಚೆಕ್‌ ಅನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next