ನವದೆಹಲಿ: 2022-23ರ ಹಣಕಾಸು ವರ್ಷದಲ್ಲಿ ಭಾರತದ ದೇಸಿ ರಕ್ಷಣಾ ಉತ್ಪಾದನೆಯು ಇದೇ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂ.ಗೂ ಅಧಿಕವಾಗಿದೆ.
2021-22ರ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ರಕ್ಷಣಾ ಉತ್ಪದನೆಯು 95,000 ಕೋಟಿ ರೂ. ಆಗಿತ್ತು. ದೇಸಿ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಲು ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.
ರಕ್ಷಣಾ ಸಚಿವಾಲಯದ ಸ್ಥಿರವಾದ ಪ್ರಯತ್ನಗಳಿಂದಾಗಿ ಇದೇ ಮೊದಲ ಬಾರಿಗೆ ದೇಶಿ ರಕ್ಷಣಾ ಉತ್ಪಾದನೆಯು ಒಂದು ಲಕ್ಷ ಕೋಟಿ ರೂ.ಗಳನ್ನು ಮೀರಿದೆ. ಪ್ರಸ್ತುತ 1,06,800 ಕೋಟಿ ರೂ. ಮೊತ್ತದ ರಕ್ಷಣಾ ಉತ್ಪನ್ನಗಳನ್ನು ದೇಶದಲ್ಲಿ ತಯಾರಿಸಲಾಗಿದೆ. 2021-22 ಹಣಕಾಸು ವರ್ಷಕ್ಕೆ ಹೋಲಿಸಿದರೆ 2022-23ರ ಹಣಕಾಸು ವರ್ಷದಲ್ಲಿ ದೇಸಿ ರಕ್ಷಣಾ ಉತ್ಪಾದನೆಯು ಶೇ.12ರಷ್ಟು ಏರಿಕೆಯಾಗಿದೆ.
“ರಕ್ಷಣಾ ಉತ್ಪನ್ನ ತಯಾರಿಕಾ ಕಂಪನಿಗಳು ಮತ್ತು ಅದರ ಪಾಲುದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಮೂಲಕ ದೇಶದಲ್ಲಿ ರಕ್ಷಣಾ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡುತ್ತಿದೆ,” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.