Advertisement
ಕನ್ನಡ ನಾಡು-ನುಡಿ, ನೆಲ-ಜಲ, ಭಾಷೆಯ ಮೇಲಿನ ಅಭಿಮಾನ ಕೇವಲ ನವೆಂಬರ್ ತಿಂಗಳಿಗಷ್ಟೇ ಸೀಮಿತ ಎಂಬುದು ಅನೇಕರ ವಾದ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ನಗರದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸಹಾಯಕ ನಿರ್ದೇಶಕ ಪಾ.ನಟರಾಜ್ ಅವರು, ತಮ್ಮ ವೃತ್ತಿಯಲ್ಲೇ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ದೈನಂದಿನ ಕಚೇರಿ ಕೆಲಸಗಳಲ್ಲಿ ಸಂಪೂರ್ಣ ಕನ್ನಡ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.
Related Articles
Advertisement
ಕನ್ನಡದ ಪ್ರೀತಿ ಹೇಗೆ?: ಶಾಲಾ ವಿದ್ಯಾರ್ಥಿಯಾಗಿದ್ದ ವೇಳೆ ಒಮ್ಮೆ ಮೈಸೂರಿನ ದಸರಾ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರಾಧ್ಯಾಪರೊಬ್ಬರು ಕನ್ನಡ ಅಂಕಿಗಳಿದ್ದ ಭಿತ್ತಿಪತ್ರ ಹಂಚುತ್ತಾ, ಕನ್ನಡ ಬಳಸುವಂತೆ ಮನವಿ ಮಾಡುತ್ತಿದ್ದರು.
ಅಂದಿನ ಈ ಘಟನೆಯೇ ತಮಗೆ ಕನ್ನಡದ ಮೇಲೆ ಹೆಚ್ಚಿನ ಆಸಕ್ತಿ ಮೂಡಿಸುವ ಜತೆಗೆ ಕನ್ನಡವನ್ನು ಉಳಿಸಿ-ಬೆಳೆಸಬೇಕೆಂಬ ಬಗ್ಗೆ ಅಭಿಮಾನ ಹೆಚ್ಚಾಗಲು ಕಾರಣವಾಯಿತು ಎಂದಿದ್ದಾರೆ. ಕರ್ನಾಟಕದಲ್ಲಿರುವ ಅನ್ಯ ಭಾಷಿಕರು ತಮ್ಮ ಸಂಸ್ಕೃತಿ, ಭಾಷಾಭಿಮಾನವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರೇ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸುತ್ತಿಲ್ಲ ಎಂದು ವಿಷಾದಿಸಿದ್ದಾರೆ.
ಇಂಗ್ಲಿಷ್ ಅರ್ಜಿ ತಿರಸ್ಕರಿಸಿ: ರಾಜ್ಯದ ಸಾಕಷ್ಟು ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಉಳಿವಿಗಾಗಿ ಅನೇಕರು ಶ್ರಮಿಸುತ್ತಿದ್ದಾರೆ. ಸರ್ಕಾರ ಇವರನ್ನು ಗುರುತಿಸಬೇಕು. ಜತೆಗೆ ಆಂಗ್ಲ ಭಾಷೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸ್ವೀಕರಿಸದ ಅಧಿಕಾರ ನೀಡಿದರೆ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆ ಬಳಕೆಗೆ ಆದ್ಯತೆ ಸಿಗಲಿದೆ ಎಂದು ಕನ್ನಡ ಅಭಿಮಾನಿ ಪಾ.ನಟರಾಜ್ ಅಭಿಪ್ರಾಯಪಟ್ಟಿದ್ದಾರೆ.
* ಸಿ.ದಿನೇಶ್