Advertisement

Hit and Run: ಪ್ರತೀ ಏಳು ಅಪಘಾತಗಳಲ್ಲಿ ಒಂದು ಹಿಟ್‌ ಆ್ಯಂಡ್‌ ರನ್‌ ಪ್ರಕರಣ!

09:25 AM Feb 09, 2024 | Team Udayavani |

ಕೇಂದ್ರ ಸರಕಾರ ಹೊಸದಾಗಿ ಜಾರಿ ತಂದಿರುವ ಭಾರತೀಯ ನ್ಯಾಯ ಸಂಹಿತೆ, ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲವೊಂದು ಬಿಗಿ ಕಾನೂನುಗಳನ್ನು ಒಳಗೊಂಡಿದೆ. ಈ ಪೈಕಿ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳ ಅಪರಾಧಿ ಚಾಲಕರ ವಿರುದ್ಧ ತುಸು ಬಿಗಿ ನಿಲುವನ್ನು ತಾಳುವ ಮೂಲಕ ಚಾಲಕರ ಇಂತಹ ಅಮಾನವೀಯ ವರ್ತನೆಗೆ ಮೂಗುದಾರ ಹಾಕಲು ಮುಂದಾಗಿದೆ. ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ಬಹುತೇಕ ಟ್ರಕ್‌, ಟ್ಯಾಂಕರ್‌ ಮತ್ತು ಸರಕು ಸಾಗಣೆ ವಾಹನಗಳ ಚಾಲಕರ ಪಾತ್ರವೇ ಅಧಿಕವಾಗಿರುವುದರಿಂದ ಹೊಸ ಕಾನೂನಿಗೆ ಈ ವರ್ಗದ ಚಾಲಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಟ್ರಕ್‌ ಚಾಲಕರ ಈ ವಿರೋಧಕ್ಕೆ ಆಲ್‌ ಇಂಡಿಯಾ ಮೋಟಾರ್‌ ಟ್ರಾನ್ಸ್‌ಪೊರ್ಟ್‌ ಕಾಂಗ್ರೆಸ್‌(ಎಐಎಂಟಿಸಿ) ಕೂಡ ದನಿಗೂಡಿಸಿದೆ. ಇದೇ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ದೇಶದಾದ್ಯಂತ ಟ್ರಕ್‌ ಚಾಲಕರು ಟ್ರಕ್‌ ಬಿಟ್ಟು ರಸ್ತೆಗಿಳಿದಿದ್ದರು. ಸರಕಾರದ ಹೊಸ ಕಾನೂನಿನ ವಿರುದ್ಧ ಸಮರ ಸಾರಿದ್ದರು. ಸರಕಾರದ ಭರವಸೆಯ ಬಳಿಕ ಟ್ರಕ್‌ ಚಾಲಕರು ಮುಷ್ಕರವನ್ನು ಹಿಂಪಡೆದಿದ್ದರು. ಹಾಗಾದರೆ ಕೇಂದ್ರ ಸರಕಾರ ಜಾರಿಗೊಳಿಸಲುದ್ದೇಶಿಸಿರುವ ಹೊಸ ಕಾನೂನಿನಲ್ಲಿ ಅಂತಹ ಕಠಿನ ನಿಯಮವೇನಿದೆ?, ಜನರ ರಕ್ಷಣೆಗೆಂದೇ ರಚಿಸಲಾದ ಕಾನೂನು ಹೇಗೆ ಟ್ರಕ್‌ ಚಾಲಕರ ಅಸಮಾಧಾನಕ್ಕೆ ಕಾರಣವಾಗಿದೆ? ಎಂಬೆಲ್ಲ ವಿಷಯಗಳ ಕುರಿತಂತೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

Advertisement

ಹಿಟ್‌ ಆ್ಯಂಡ್‌ ರನ್‌ ಪ್ರಕರಣ
ರಸ್ತೆ ಅಪಘಾತವಾದಾಗ ವಿಷಯವನ್ನು ಪೊಲೀಸರಿಗೂ ತಿಳಿಸದೇ, ಕನಿಷ್ಠ ಪಕ್ಷ ಸಂತ್ರಸ್ತ ಕುಟುಂಬಗಳಿಗೂ ತಿಳಿಸದೇ ಅಪಘಾತ ಸ್ಥಳದಿಂದ ಪರಾರಿ ಆಗುವ ವಾಹನ ಚಾಲಕರ ವಿರುದ್ಧ ಹಿಟ್‌ ಆ್ಯಂಡ್‌ ರನ್‌ ಪ್ರಕರಣ ದಾಖಲಾಗುತ್ತದೆ. ಅಪರಾಧಿಗೆ ನಿರ್ದಿಷ್ಟ ಶಿಕ್ಷೆ ಮತ್ತು ದಂಡವನ್ನು ಮೊದಲಿನಿಂದಲೂ ವಿಧಿಸಿಕೊಂಡು ಬರಲಾಗುತ್ತಿದೆ. ಆದರೂ ದಿನೇದಿನೆ ದೇಶದಲ್ಲಿ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಹೊಸ ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿತ್ತು. ಉದ್ದೇಶಿತ ಹೊಸ ಕಾನೂನಿನಲ್ಲಿ ಶಿಕ್ಷೆ ಮತ್ತು ದಂಡದ ಪ್ರಮಾಣದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ಇದು ಟ್ರಕ್‌ ಚಾಲಕರು ಮತ್ತು ಎಐಎಂಟಿಸಿಯ ವಿರೋಧಕ್ಕೆ ಕಾರಣವಾಗಿದೆ. ಈ ಕಾರಣದಿಂದಾಗಿಯೇ ಟ್ರಕ್‌ ಚಾಲಕರು ತೀವ್ರ ತೆರನಾದ ಪ್ರತಿಭಟನೆ ನಡೆಸಿದ್ದರು. ಕೊನೆಗೂ ಟ್ರಕ್‌ ಚಾಲಕರು ಮತ್ತು ಎಐಎಂಟಿಸಿಯ ಒತ್ತಡಕ್ಕೆ ಮಣಿದ ಕೇಂದ್ರ ಸರಕಾರ ಜಾರಿಗೆ ತರಲುದ್ದೇಶಿಸ ಲಾಗಿ ರುವ ಕಾನೂನಿನಲ್ಲಿ ಒಂದಿಷ್ಟು ಮಾರ್ಪಾಡುಗಳನ್ನು ತರುವ ಭರವಸೆ ನೀಡಿ ಅವರನ್ನು ಸಮಾಧಾನಪಡಿಸಿದೆ.

ಏನಿದು ಹೊಸಕಾನೂನು?
ಈ ಹಿಂದೆ ಐಪಿಸಿ ಸೆಕ್ಷನ್‌ 304(ಎ)ರ ಪ್ರಕಾರ ಚಾಲಕನ ನಿರ್ಲಕ್ಷ್ಯ ಅಥವಾ ಅಜಾಗರೂಕ ಚಾಲನೆಯ ಪರಿಣಾಮ ಅಪಘಾತ ಸಂಭವಿಸಿ, ವ್ಯಕ್ತಿ ಸಾವಿಗೀಡಾದ ಸಂದರ್ಭದಲ್ಲಿ ವಿಷಯವನ್ನು ಪೊಲೀಸ್‌ ಅಥವಾ ಸ್ಥಳೀಯ ನ್ಯಾಯಾಲಯಕ್ಕೆ ವರದಿ ಮಾಡದೇ ಪರಾರಿ ಆದಲ್ಲಿ ಆತ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತಿತ್ತು. ದಂಡದ ಪ್ರಮಾಣ 2-3 ಸಾವಿರ ರೂ.ಗಳ ಒಳಗೆ ಇರುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳು ಹೆಚ್ಚುತ್ತಿರುವುದನ್ನು ಕಂಡು ಈ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್‌ 106(2) ಅಡಿಯಲ್ಲಿ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಿಗೆ 7 ಲಕ್ಷ ರೂ. ದಂಡ ಹಾಗೂ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ತರಲಾಗಿದೆ. ಈ ಅಂಶವೇ ಟ್ರಕ್‌ ಚಾಲಕರು ಮತ್ತು ಎಐಎಂಟಿಸಿ ಯ ಅಸಮಾಧಾನಕ್ಕೆ ಕಾರಣವಾಗಿ, ಅವರು ಪ್ರತಿಭಟನೆಯ ಹಾದಿ ಹಿಡಿಯಲು ಕಾರಣವಾಗಿತ್ತು.

ಟ್ರಕ್‌ ಚಾಲಕರ ಅಳಲು

ಒಬ್ಬ ಟ್ರಕ್‌ ಚಾಲಕ ಮಾಸಿಕ ಸರಾ ಸರಿ 15,000 ರಿಂದ 20,000 ರೂ.ಗಳ ವರೆಗೂ ಸಂಪಾದಿಸುತ್ತಾನೆ. ಇದು ಆತನ ದಿನನಿತ್ಯದ ಖರ್ಚುವೆಚ್ಚಗಳನ್ನು ನಿಭಾಯಿಸು ವುದೇ ಕಷ್ಟಸಾಧ್ಯ ಎಂಬಂತಹ ಪರಿಸ್ಥಿತಿ ಇದೆ. ಹೀಗಿರುವಾಗ ಆತ ವಾಹನ ಚಾಲನೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಅಪಘಾತಗಳು ಸಂಭವಿಸಿ, ಅನಿವಾರ್ಯ ಪರಿಸ್ಥಿತಿಯಲ್ಲಿ ಅಪಘಾತ ಸ್ಥಳದಿಂದ ಪರಾರಿಯಾಗಬೇಕಾದ ಸನ್ನಿವೇಶ ಸೃಷ್ಟಿಯಾದಲ್ಲಿ ಆತ 7 ಲ.ರೂ.ಗಳಷ್ಟು ಬೃಹತ್‌ ಮೊತ್ತದ ದಂಡವನ್ನು ಪಾವತಿಸುವುದಾದರೂ ಹೇಗೆ?, ಅಲ್ಲದೇ ಅಪಘಾತವಾದ ಸಂದರ್ಭದಲ್ಲಿ ಚಾಲಕರಿಗೆ ಅಪಘಾತಗೊಂಡ ವ್ಯಕ್ತಿಗೆ ಸಹಕರಿಸುವ ಮನಸ್ಸಿದ್ದರೂ, ಘಟನೆ ನಡೆದಾಕ್ಷಣ ಸ್ಥಳದಲ್ಲಿ ಜಮಾಯಿಸುವ ಭಾರೀ ಸಂಖ್ಯೆಯ ಜನರು ಗಾಯಗೊಂಡವರಿಗೆ ಸಹಾಯ ಮಾಡುವ ಬದಲು ಟ್ರಕ್‌ ಚಾಲಕನನ್ನು ಹಿಡಿದು ಹೊಡೆಯಲು ಮುಂದಾಗುತ್ತಾರೆ. ಹೀಗಾಗಿ ಚಾಲಕರು ಜನರ ಹೊಡೆತದಿಂದ ತಪ್ಪಿಸಿಕೊಳ್ಳಲು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸ್ವರಕ್ಷಣೆಗೆ ಹೆಚ್ಚಿನ ಒತ್ತು ನೀಡಿ ಪರಾರಿಯಾಗುವುದನ್ನೇ ತಮ್ಮ ಪ್ರಥಮ ಆಯ್ಕೆಯನ್ನಾಗಿಸಿಕೊಂಡಿದ್ದಾರೆ.

Advertisement

ಅಲ್ಲದೇ ಕೆಲವು ಸಂದರ್ಭದಲ್ಲಿ ಸಂತ್ರಸ್ತನ ತಪ್ಪಿನಿಂದಲೇ ಅಪಘಾತ ಸಂಭವಿಸಿದ್ದರೂ ಟ್ರಕ್‌ ಚಾಲಕರೇ ಶಿಕ್ಷೆ ಎದುರಿಸಬೇಕಾಗಿ ಬಂದ ಸಾಕಷ್ಟು ನಿದರ್ಶನಗಳು ನಮ್ಮ ಮುಂದೆ ಇವೆ. ಮತ್ತೆ ಕೆಲವೊಮ್ಮೆ ಅಪಘಾತ ನಡೆಸಿದ ಚಾಲಕ ಪೊಲೀಸ್‌ ಠಾಣೆಗೆ ತೆರಳಿದರೂ ಪೊಲೀಸರ ಕಿರುಕುಳ, ದೌರ್ಜನ್ಯಕ್ಕೊಳಗಾಗುವ ಉದಾಹರಣೆಗಳೂ ಇವೆ. ಈ ಎಲ್ಲ ಜಂಜಾಟಗಳಿಂದ ಪಾರಾಗಲು ಬಹುತೇಕ ಚಾಲಕರು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸ್ಥಳದಿಂದ ಕಾಲ್ಕಿàಳಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೊಸ ಕಾನೂನು ರೂಪಣೆಯ ಸಂದರ್ಭದಲ್ಲಿ ಕೇಂದ್ರ ಸರಕಾರ ಇವೆಲ್ಲವನ್ನು ಪರಿಗಣಿಸಬೇಕಾಗಿತ್ತು ಎಂಬುದು ಟ್ರಕ್‌ ಚಾಲಕರ ಮತ್ತು ಸಂಘಟನೆಯ ಅಭಿಮತ.

ಹೆಚ್ಚುತ್ತಲೇ ಇದೆ ರಸ್ತೆ ಅಪಘಾತ
ಕಳೆದ ಆರು ವರ್ಷಗಳ(2017-2022) ಅಂಕಿ ಅಂಶ ಗಳನ್ನು ತೆಗೆದುಕೊಂಡಾಗ ದೇಶದಲ್ಲಿ ಸಂಭವಿಸಿದ ಪ್ರತೀ ಏಳು ಅಪಘಾತಗಳಲ್ಲಿ ಒಂದು ಹಿಟ್‌ ಆ್ಯಂಡ್‌ ರನ್‌ ಪ್ರಕರಣ ದಾಖಲಾಗಿದೆ. ಇದು ನಿಜಕ್ಕೂ ಆಘಾತಕಾರಿ ವಿಷಯ. ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಗಮನಿಸಿದಾಗ ಈ ಹೊಸ ಕಾನೂನು ಅನಿವಾರ್ಯ. 2022ರಲ್ಲಿ ಭಾರತದಲ್ಲಿ ಒಟ್ಟು 4,60,000 ರಸ್ತೆ ಅಪಘಾತಗಳು ವರದಿಯಾಗಿದೆ. 2021ಕ್ಕೆ ಹೊಲಿಸಿದರೆ ಇದು ಶೇ. 12ರಷ್ಟು ಹೆಚ್ಚಾಗಿದೆ. ಇದರಲ್ಲಿ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳು 67,000. ಒಟ್ಟಾರೆಯಾಗಿ ಭಾರತದಲ್ಲಿ ಪ್ರತೀ ಗಂಟೆಗೆ ಸರಾಸರಿ 53 ರಸ್ತೆ ಅಪಘಾತಗಳು ಹಾಗೂ 19 ಸಾವುಗಳು ವರದಿಯಾಗುತ್ತಿವೆ.

ಹೊಸ ನಿಬಂಧನೆಯ ಅಗತ್ಯ
ರಾತ್ರಿಯ ಸಮಯದಲ್ಲಿ ಅಪಘಾತವಾದಲ್ಲಿ ರಸ್ತೆ ಬಹುತೇಕ ನಿರ್ಜನ ವಾಗಿರು ವುದರಿಂದ ಗಾಯಾಳುವಿನ ನೆರವಿಗೆ ಯಾರು ಧಾವಿಸುವುದಿಲ್ಲ. ಇಂತಹ ಸಂದರ್ಭ ದಲ್ಲಿ ಗಾಯಾಳುವಿಗೆ ಸಹಾಯ ಮಾಡಬೇಕಾದವರು ಚಾಲಕರು. ಅವರೇ ಪರಾರಿ ಆದಲ್ಲಿ ಗಾಯಾಳುವಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪುವ ಅಪಾಯವಿದೆ. ಹೀಗಾಗಿ ಈ ಹೊಸ ಕಾನೂನು ಸಂತ್ರಸ್ತರ ಜವಾಬ್ದಾರಿಯನ್ನು ಚಾಲಕನಿಗೆ ವಹಿಸುತ್ತದೆ. ಇದರಿಂದ ಚಾಲಕರು ಕನಿಷ್ಠ ಪೊಲೀಸರಿಗೆ ವಿಷಯ ತಿಳಿಸುತ್ತಾರೆ. ಸರ್ವೇಯೊಂದರ ಪ್ರಕಾರ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳಲ್ಲಿ ಶೇ. 50ರಷ್ಟು ಮಂದಿ ಕ್ಲಪ್ತ ಸಮಯದಲ್ಲಿ (ಗೋಲ್ಡನ್‌ ಅವರ್‌)ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಾರೆ. ಹೀಗಾಗಿ ಅಮಾಯಕರ ಪ್ರಾಣ ರಕ್ಷಣೆಯ ಉದ್ದೇಶದಿಂದ ಕೇಂದ್ರ ಸರಕಾರ ಬಿಗಿ ಕಾನೂನನ್ನು ಜಾರಿಗೆ ತರಲು ನಿರ್ಧರಿಸಿತ್ತು.

ತಮಿಳುನಾಡಿನಲ್ಲಿ ಅತೀ ಹೆಚ್ಚು ಅಪಘಾತ
2018ರಿಂದ 2022ರ ವರೆಗಿನ ಅಂಕಿ ಅಂಶಗಳ ಪ್ರಕಾರ, ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತೀ ಹೆಚ್ಚು ಅಪಘಾತ ಪ್ರಕರಣಗಳು ದಾಖಲಾಗಿವೆ. ದೇಶದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಅನಂತರದ ಸ್ಥಾನದಲ್ಲಿದೆ. 2022ರಲ್ಲಿ ವಾಹನವು ಹಿಂದಿನಿಂದ ಗುದ್ದಿ ಆದ ಅಪಘಾತ ಪ್ರಕರಣದಲ್ಲಿ ಸಾವಿನ ಪ್ರಮಾಣ ಶೇ. 19.5ರಷ್ಟಿದ್ದು, ಹಿಟ್‌ ಆ್ಯಂಡ್‌ ರನ್‌ ಮತ್ತು ಮುಖಾಮುಖೀ ಢಿಕ್ಕಿಯಲ್ಲಿ ಕ್ರಮವಾಗಿ ಶೇ. 18.1 ಮತ್ತು ಶೇ. 15.7ರಷ್ಟು ಸಾವುಗಳು ಸಂಭವಿಸಿವೆ.

ದೇಶದಲ್ಲಿ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಅಧಿಕ
ವಿಶ್ವದಲ್ಲಿನ ರಸ್ತೆ ಅಪಘಾತಗಳು ಮತ್ತು ಸಾವನ್ನಪ್ಪುವವರ ದತ್ತಾಂಶಗಳ ಪ್ರಕಾರ, ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಎರಡನೇ ಸ್ಥಾನದಲ್ಲಿರುವ ಚೀನದಲ್ಲಿ ನಮ್ಮ ಅರ್ಧದಷ್ಟು ಪ್ರಕರಣ ದಾಖಲಾಗಿದೆ. ದೇಶದಲ್ಲಿ ದಿನೇದಿನೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚುತ್ತಿರುವುದು ಆಘಾತಕಾರಿ ವಿಷಯ. ವಿಶ್ವ ಆರೋಗ್ಯ ಸಂಸ್ಥೆ 2023ರ ಡಿಸೆಂಬರ್‌ನಲ್ಲಿ ಬಿಡುಗಡೆ ಗೊಳಿಸಿದ ವರದಿಯೊಂದರ ಪ್ರಕಾರ ವಿಶ್ವದಾದ್ಯಂತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣದಲ್ಲಿ ಶೇ. 28ರಷ್ಟು ಭಾರತವೂ ಸೇರಿದಂತೆ ಆಗ್ನೇಯ ಏಷ್ಯಾದಲ್ಲಿ ದಾಖಲಾಗಿದೆ. ಶೇ. 25ರೊಂದಿಗೆ ಪಶ್ಚಿಮ ಫೆಸಿಫಿಕ್‌ ಎರಡನೇ ಸ್ಥಾನದಲ್ಲಿದೆ. ಇನ್ನು ಯುರೋಪಿಯನ್‌ ದೇಶಗಳಲ್ಲಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಪ್ರಮಾಣ ಶೇ.5ರಷ್ಟಾಗಿದೆ.

ಭಾರತದ ಆರ್ಥಿಕತೆಯಲ್ಲಿ ಟ್ರಕ್‌ ಚಾಲಕರ ಪಾತ್ರ
ಭಾರತದ ಆರ್ಥಿಕತೆಯಲ್ಲಿ ಲಾರಿ ಚಾಲಕರ ಪಾತ್ರವೂ ಬಹಳಷ್ಟಿದೆ. ಪ್ರಸ್ತುತ ದೇಶದಲ್ಲಿ ರಸ್ತೆ ಮೂಲಕವೇ ವಾರ್ಷಿಕ 4.6 ಶತಕೋಟಿ ಟನ್‌ ಸರಕು ಸಾಗಣೆ ಯಾಗುತ್ತಿದೆ. 2050ರ ವೇಳೆಗೆ ಇದು 9.6 ಟ್ರಿಲಿಯನ್‌ ಟನ್‌ ತಲುಪುವ ನಿರೀಕ್ಷೆಯಿದೆ. ಹೀಗಾಗಿ ಟ್ರಕ್‌ ಉದ್ಯಮವು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

 ಸುಶ್ಮಿತಾ ನೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next