Advertisement

ಒಂದು ರೂ.ಗೆ ಒಂದು ಇಡ್ಲಿ ಹತ್ತು ರೂ.ಗೆ ಚಿತ್ರಾನ್ನ !

09:23 PM Sep 10, 2018 | |

ಹುಣಸೂರಿಗೆ ಬಂದರೆ ಒಂಟೆ ಪಾಳ್ಯಬೋರೆ ಅನ್ನೋ ಏರಿಯಾ ಕಡೆ ಹೋಗುವುದನ್ನು ಮರೆಯಬೇಡಿ. ಏಕೆಂದರೆ ಇಲ್ಲಿ ಬಿಸಿ ಬಿಸಿ ಇಡ್ಲಿ ಸಿಗುತ್ತದೆ. 

Advertisement

ಹೆಸರು ಸಾವಿತ್ರಮ್ಮನ ಹೋಟೆಲ್‌. ಹಾಗಂತ ಬೋಡೇìನೂ ಹಾಕಿಲ್ಲ.  ಪಟ್ಟಣದ ಜನರ ಮನಸ್ಸಲ್ಲಿ, ಬಾಯಲ್ಲೇ ಈ ಹೋಟೆಲ್‌ ಹೆಸರು ಇದೆ.  ಹೋಟೆಲ್‌ ಏನು ದೊಡ್ಡದಲ್ಲ. ಮನೆಯ ಮುಂದಿನ ರೂಮ್‌ ಅನ್ನೇ ಹೋಟೆಲ್‌ ಆಗಿ ಬದಲಿಸಿಕೊಳ್ಳಲಾಗಿದೆ.  ಈ  ಹೋಟೆಲ್‌ ತೆರೆಯುವುದು ಬೆಳಗ್ಗೆ ಐದು ಗಂಟೆಗೆ. 6-7 ಗಂಟೆಯಿಂದಲೇ ಬಿಸಿ ಬಿಸಿ ಚಿತ್ರಾನ್ನ, ವಡೆ ಕೂಡ ಸಿಗುತ್ತದೆ. ಇಡ್ಲಿಗೆ ಈ ಹೋಟೆಲಿನವರು ಕೊಡುವ ಹುರಿಗಡಲೆ ಚಟ್ನಿ ಚಂದದ ಕಾಂಬಿನೇಷನ್‌. 

ಒಂದು ಸಾರಿ ತಿಂದರೆ ಮತ್ತೆ ತಿನ್ನಬೇಕು ಅನಿಸುವಷ್ಟು ರುಚಿ ಇದೆ. ಸಾವಿತ್ರಮ್ಮನವರ ಹೋಟೆಲ್‌ ತಿಂಡಿಗಳ ಬೇಲೆ ಕೇಳಿದರೆ ಅಚ್ಚರಿಯಾಗುವುದು ಗ್ಯಾರಂಟಿ. ಕಾರಣ ಒಂದು ಇಡ್ಲಿಗೆ  ಒಂದು ರೂ. ಚಿತ್ರಾನ್ನ 10ರೂ. ಕಡಲೇ ಬೇಳೆ ವಡೆ 2ರೂ. ಇದು ಇಂದಿನ ಬೆಲೆ. ಈ ಹೋಟೆಲ್‌ ಶುರುವಾದಾಗ, ಒಂದು ಇಡ್ಲಿಗೆ 30 ಪೈಸೆ ಇತ್ತು. ಆಮೇಲೆ 50 ಪೈಸೆ ಆಯಿತು. ಈಗ ಒಂದು ರೂ.ಗೆ ಬಂದು ನಿಂತಿದೆ.  ಇಲ್ಲಿಗೆ ಬರುವ ಗ್ರಾಹಕರೂ ಕೂಡ ಹೊಟ್ಟತುಂಬ ತಿಂದು ಖುಷಿಯಿಂದಲೇ  ತೆರಳುತ್ತಾರೆ. ಏಕೆಂದರೆ, ಬೆಲೆ ಕಡಿಮೆ ಇದ್ದರೂ ತಿಂಡಿಯ ಗುಣಮಟ್ಟ ಚೆನ್ನಾಗಿದೆ.   

ಒಂಟೆಪಾಳ್ಯಬೋರೆಯ ಮಂದಿ ಮಾತ್ರವಲ್ಲದೆ, ಅಕ್ಕಪಕ್ಕದ ಬಡಾವಣೆಯವರು ಸಹ ಬೆಳಗ್ಗೆಯೇ ಇಡ್ಲಿಗಾಗಿ ಈ ಹೋಟೆಲಿನ ಮುಂದೆ  ಕ್ಯೂ ನಿಲ್ಲುತ್ತಾರೆ. ಮನೆಗಳವರೂ ಪಾರ್ಸೆಲ್‌ ಒಯ್ಯುತ್ತಾರೆ. ಇಲ್ಲಿ ಪಾರ್ಸೆಲ್‌ ಎಂದರೆ ಪೇಪರ್‌, ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಸಮಸ್ಯೆ ಕಾಡುವುದಿಲ್ಲ. ಏಕೆಂದರೆ, ಪಾರ್ಸೆಲ್‌ ಬೇಕಾದಲ್ಲಿ ಕ್ಯಾರಿಯರ್‌ ತರಲೇಬೇಕು, ಇದು ಇಲ್ಲಿನ ಪಾಲಿಸಿ.

ಇದೆಲ್ಲ ಹೇಗೆ ಸಾಧ್ಯ?
ಮೊದಲು ಸಾವಿತ್ರಮ್ಮನವರ ಬದುಕಿನ ಕಥೆ ಕೇಳಿ. ಈ ಹೋಟೆಲ್‌ ಶುರುವಾಗುವುದಕ್ಕೆ ಅವರ ಪತಿಯೇ ಕಾರಣ.  20 ವರ್ಷಗಳ ಹಿಂದೆಯೇ ಸಾವಿತ್ರಮ್ಮನವರ ಪತಿ ದೂರವಾದರು. ಅವರು ಗಾರೆ ಕೆಲಸ ಮಾಡುತ್ತಿದ್ದರು. ಈ ಕಷ್ಟದ ಸಂದರ್ಭದಲ್ಲಿ  ಸಾವಿತ್ರಮ್ಮ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳಲಿಲ್ಲ. ಹೇಗಾದರೂ ಮಾಡಿ ಬದುಕಬೇಕು ಅಂತ ಅಪ್ಪನ ಮನೆಗೆ ಬಂದರು. ಮನೆಯ ಮುಂದಿನ ರೂಮ್‌ನಲ್ಲಿ ಒಂದು ಕೈ ನೋಡೋಣ ಅಂತ ಶುರುಮಾಡಿದ್ದೇ ಈ ಹೋಟೆಲ್‌. 

Advertisement

ಈ ಪುಟ್ಟ ಹೋಟೆಲ್‌ನಿಂದ ಬಂದ ಲಾಭದಲ್ಲೇ ಮಗಳ ಮದುವೆಯನ್ನೂ ಮಾಡಿರುವುದು ಸಾವಿತ್ರಮ್ಮ ಅವರ ಹೆಗ್ಗಳಿಕೆ. ಅಂದಹಾಗೆ, ತಿಂಡಿಯನ್ನು ಇಷ್ಟು ಕಡಿಮೆ ಬೆಲೆಗೆ ಹೇಗೆ ಕೊಡುತ್ತಾರೆ ಅಂತ ಕೇಳಿದರೆ- ದಿನಸಿ ಪದಾರ್ಥಗಳನ್ನು ನೇರವಾಗಿ ರೈತರಿಂದ ಖರೀದಿಸುವುದರಿಂದ ಇಟ್ಟ ಬೆಲೆಯಲ್ಲೇ ಲಾಭ ಬರುತ್ತಿದೆ. “ನನಗೆ ಲಾಭ ಜಾಸ್ತಿ ಬೇಡ. ನೆಮ್ಮದಿ ಜೀವನ ಬೇಕು. ಈ ಕಾರಣಕ್ಕಾಗಿಯೇ ಹೆಚ್ಚು ಬೆಲೆ ಇಟ್ಟಿಲ್ಲ’ ಎನ್ನುತ್ತಾರೆ ಸಾವಿತ್ರಮ್ಮ. 

ಸಂಪತ್‌ಕುಮಾರ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next