ಹಾವೇರಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ವಿವಿಧ ಇಲಾಖೆಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಮೂರ್‍ನಾಲ್ಕು ದಿನಗಳಲ್ಲಿ ಒಂದು ನೂರು ಕೋಟಿ ರೂ. ವಿಶೇಷ ಅನುದಾನವನ್ನು ಜಿಲ್ಲೆಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿ ಮತ್ತು ಪರಿಹಾರ ಕುರಿತು ಗುರುವಾರ ನಡೆಸಿದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮಳೆ, ಪ್ರವಾಹದಿಂದ ಹಾನಿಯಾದ ಎ ಮತ್ತು ಬಿ ಶ್ರೇಣಿಯ ಮನೆಗಳ ಪುನರ್ ನಿರ್ಮಾಣ ಕಾರ್ಯವನ್ನು ತಕ್ಷಣದಿಂದಲೇ ಆರಂಭಿಸುವಂತೆ ಜಿಲ್ಲಾಧಿ ಕಾರಿ ಕೃಷ್ಣ ಭಾಜಪೇಯಿ ಅವರಿಗೆ ಸೂಚನೆ ನೀಡಿದರು.
ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಸಮೀಕ್ಷೆ ಕಾರ್ಯದಲ್ಲಿ ಯಾವುದಾದರು ಸಂತ್ರಸ್ತರ ಮನೆಗಳುಕೈಬಿಟ್ಟು ಹೋಗಿರುವ ಕುರಿತಂತೆ ಹಾಗೂ ಪರಿಹಾರ ದೊರಕಿಲ್ಲ ಎಂಬ ದೂರುಗಳು ಇವೆಯೇ, ಮೊದಲ ಕಂತಾಗಿ ಒಂದು ಲಕ್ಷ ರೂ. ಪರಿಹಾರ ಎ ಮತ್ತು ಬಿ ಕೆಟಗರಿ ಮನೆಗಳ ಫಲಾನುಭವಿಗಳಿಗೆ ಜಮೆ ಆಗಿದೆಯೇ ಎಂದು ಜಿಲ್ಲಾ ಧಿಕಾರಿಗಳನ್ನು ಪ್ರಶ್ನಿಸಿದ ಯಡಿಯೂರಪ್ಪ, ಮೊದಲ ಕಂತಾಗಿ ಹಣ ಪಾವತಿಯಾಗಿದ್ದರೆ ತಕ್ಷಣದಿಂದಲೇ ಮನೆಗಳ ಅಡಿಪಾಯ ಕಾರ್ಯ ಆರಂಭಿಸಬೇಕು. ಹಂತ ಹಂತವಾಗಿ ಐದು ಲಕ್ಷ ರೂ.ವರೆಗೆ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಚಾರ ಮಾಡಿ: ಬೆಳೆಹಾನಿ ಕುರಿತಂತೆ ಮಾಹಿತ ಪಡೆದ ಎನ್‌ಡಿಆರ್ ಎಫ್ ಮಾರ್ಗಸೂಚಿಯ ಹೊರತಾಗಿಯೂ ಪ್ರತಿ ಹಕ್ಟೇರ್‌ಗೆ 10 ಸಾವಿರ ರೂ. ವಿಶೇಷ ಅನುದಾನ ರಾಜ್ಯ ಸರ್ಕಾರ ನೀಡುತ್ತಿರುವ ಕುರಿತಂತೆ ರೈತರಿಗೆ ಮಾಹಿತಿ ಇದೆಯೇ? ಈ ಮಾಹಿತಿ ಎಲ್ಲ ರೈತರಿಗೂ ರವಾನೆಯಾಗಬೇಕು. ಈ ಕುರಿತಂತೆ ವಿಶೇಷವಾಗಿ ಪ್ರಚಾರ ನಡೆಸಬೇಕು. ರೈತರಿಗೆ ಮಾಹಿತಿ ಗೊತ್ತಾಗಬೇಕು ಎಂದರು.
ಸಭೆಯಲ್ಲಿ ಗೃಹ, ಸಹಕಾರಿ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಮಾತನಾಡಿ, ಶಾಲಾ ಕೊಠಡಿಗಳು ಪೂರ್ಣ ಪ್ರಮಾಣದಲ್ಲಿ ಬಿದ್ದುಹೋಗಿವೆ ಹಾಗೂ ಜಿಲ್ಲೆಯಲ್ಲಿ ರಸ್ತೆ, ಸೇತುವೆ, ಅಂಗನವಾಡಿ ಕಟ್ಟಡ ಸೇರಿದಂತೆ ಮೂಲ ಸೌಕರ್ಯಗಳು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದು, ಹೆಚ್ಚುವರಿ ಅನುದಾನವನ್ನು ಜಿಲ್ಲೆಗೆ ಬಿಡುಗಡೆಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಜಿಲ್ಲಾ ಧಿಕಾರಿ ಕೃಷ್ಣ ಭಾಜಪೇಯಿ ಅತಿವೃಷ್ಟಿ ಹಾಗೂ ಪ್ರವಾಹ ಹಾನಿ ಕುರಿತಂತೆ ಮಾಹಿತಿ ನೀಡಿ, 88.42 ಕೋಟಿ ರೂ.ಗಳನ್ನು ಮನೆ ಹಾನಿಗೆ ಪರಿಹಾರವಾಗಿ ಒದಗಿಸಲಾಗಿದೆ. ವಿವಿಧ ಇಲಾಖೆಯ 1368 ಮೂಲಭೂತ ಸೌಕರ್ಯಗಳು ಹಾನಿಯಾಗಿದ್ದು, 52.14 ಕೋಟಿ ರೂ. ಅಂದಾಜು ಹಾನಿಯಾಗಿದೆ. ಇದರಲ್ಲಿ 24.34 ಕೋಟಿ ರೂ. ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಸರ್ಕಾರದಿಂದ 35 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿ ಯಲ್ಲಿ 15.93 ಕೋಟಿ ಅನುದಾನವಿದ್ದು, ಸರ್ಕಾರದಿಂದ 90 ಕೋಟಿ ಬಿಡುಗಡೆಯಾಗಿದೆ. ಒಟ್ಟಾರೆ 109.93 ಕೋಟಿ ರೂ. ಅನುದಾನದಲ್ಲಿ 71.81 ಕೋಟಿ ರೂ. ಅನುದಾನ ಖರ್ಚಾಗಿದ್ದು, ಒಟ್ಟು 24103 ಲಕ್ಷ ರೂ. ಅನುದಾನದ ಅಗತ್ಯವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್ ಇದ್ದರು.