ಬಂಟ್ವಾಳ: ಪುರಸಭೆಯ ಕುಡಿಯುವ ನೀರಿನ ಪೈಪ್‌ಲೈನ್ ಒಂದು ಕಡೆಯಿಂದ ದುರಸ್ತಿ ಅಗುತ್ತಿದ್ದಂತೆ ಇನ್ನೊಂದು ಕಡೆಯಲ್ಲಿ ಒಡೆಯುತ್ತಿರುವುದು ಪೈಪ್ ಲೈನ್ ಅಳವಡಿಕೆಯ ಕಳಪೆ ನಿರ್ವಹಣೆ ಯನ್ನು ಬೊಟ್ಟು ಮಾಡಿದೆ.
ಮಂಗಳವಾರ ಬಿ.ಸಿ. ರೋಡ್ ಫ್ಲೈ ಓವರ್ ಅಡಿಯಲ್ಲಿ ಪೈಪ್‌ಲೈನ್ ಒಡೆದಿತ್ತು. ಅದರ ಮೂಲವನ್ನು ಪತ್ತೆ ಹಚ್ಚಲು ಪರದಾಡಿದ ನಗರ ನೀರು ಒಳಚರಂಡಿ ತಾಂತ್ರಿಕ ವಿಭಾಗ ರಾ.ಹೆ.ಸರ್ವಿಸ್ ಲೈನ್ ಅಗೆದಿರುವುದು ಎರಡು ದಿನಗಳ ಹಿಂದಿನ ವಿಷಯ.
ಅಲ್ಲಿ ಪೈಪ್‌ಲೈನ್ ದುರಸ್ತಿ ಆಗಿ ನೀರು ಹರಿಸುತ್ತಿದ್ದಂತೆ, ಈ ಹಿಂದೆ ಕಾಮಗಾರಿ ಮಾಡಿದ ಬಿ.ಸಿ. ರೋಡ್ ಸ್ಟೇಟ್ ಬ್ಯಾಂಕ್ ಬಳಿ ಕಾಂಕ್ರೀಟ್ ಸ್ಲ್ಯಾಬ್ ಬದಿಯಲ್ಲಿ ನೀರು ಚಿಮ್ಮಲಾರಂಭಿಸಿದೆ.
ಸುದೀರ್ಘ ಅವಧಿಯ ಬಳಿಕ ರಾ.ಹೆ. ಪ್ರಾಧಿಕಾರದ ಕೃಪೆಯಲ್ಲಿ ಇಲ್ಲಿನ ಸರ್ವಿಸ್ ರಸ್ತೆ ಕಾಂಕ್ರೀಟ್‌ಗೊಂಡಿತ್ತು. ಇದೀಗ ಮೂರು ತಿಂಗಳು ದಾಟುತ್ತಿದ್ದಂತೆ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ನೀರು ಚಿಮ್ಮಿದೆ. ಇದರಿಂದ ಬಿ.ಸಿ. ರೋಡಿನಲ್ಲಿ ರಸ್ತೆ ಅಗೆಯುವ, ದುರಸ್ತಿಯ ಮಾಡುವ ಕಾಮಗಾರಿ ಮುಂದುವರಿದಿದೆ.
ಕಳೆದ ಒಂದು ದಶಕದಿಂದ ಬಿ.ಸಿ. ರೋಡಿನ ಸರ್ವಿಸ್ ರಸ್ತೆಯನ್ನು ಅಗೆಯುವ, ಮುಚ್ಚುವ, ಪುನಃ ಅಗೆಯುವ ಕಾಮಗಾರಿ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಮೂರು ತಿಂಗಳ ಹಿಂದೆ 1.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಯನ್ನು ಪುನಃ ಅಗೆಯಲಾಗಿದೆ. ಇಲ್ಲಿ ಕಾಂಕ್ರೀಟ್ ಹಾಕುವ ಬದಲು ಮಣ್ಣು ತುಂಬಿಸಿ ಮುಚ್ಚಲಾಗಿದೆ.