ಕ್ರಿಕೆಟನ್ನು ಬ್ಯಾಟ್ಸಮನ್ ಗಳ ಆಟ ಎಂದರೂ ಬಹಳಷ್ಟು ಬಾರಿ ಬೆರಗು ಮೂಡಿಸುವವರು ಬೌಲರ್ ಗಳೇ. ಅತೀ ಭಯಂಕರ ವೇಗ, ಎಲ್ಲಿಂದ ಎಲ್ಲಿಗೋ ತಿರುಗುವ ಸ್ಪಿನ್ .. ಹೀಗೆ ಬೌಲರ್ ಗಳು ಕ್ರಿಕೆಟ್ ಆಟದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ. ಅದರೆ ನಿಮಗೆ ಒಂದು ವಿಚಾರ ಕೇಳಿದರೆ ಆಶ್ಚರ್ಯ ಆಗಬಹುದು, ಕ್ರಿಕೆಟ್ ಆರಂಭವಾದಾಗ ಓವರ್ ಆರ್ಮ್ ಬೌಲಿಂಗ್ ಎಂಬ ಕಾನ್ಸೆಪ್ಟ್ ಕೂಡಾ ಇರ್ಲಿಲ್ಲ.
ಹೌದು. ಆರಂಭಿಕ ದಿನಗಳಲ್ಲಿ ಕ್ರಿಕೆಟ್ ಬೌಲಿಂಗ್ ಎಂದರೆ ಅದು ಅಂಡರ್ ಆರ್ಮ್ ಬೌಲಿಂಗ್ ಅಷ್ಟೇ. ಈಗಲೂ ಈ ರೀತಿಯ ಬೌಲಿಂಗ್ ಶೈಲಿ ಮಂಗಳೂರು ಕಡೆಯಲ್ಲಿ ಚಾಲ್ತಿಯಲ್ಲಿದೆ. ಅಲ್ಲಿ ಅಂಡರ್ ಆರ್ಮ್ ಟೂರ್ನಮೆಂಟ್ ಗಳು ನಡೆಯುತ್ತದೆ. ಆದರೆ ಬಹಳಷ್ಟು ಮಂದಿಗೆ ಗೊತ್ತಿರದ ವಿಚಾರ ಏನೆಂದರೆ ಇದು ಮೂಲ ಸ್ವರೂಪದ ಕ್ರಿಕೆಟ್. ಅಂದರೆ 17ನೇ ಶತಮಾನದ್ದು.
ಅಂಡರ್ ಆರ್ಮ್ ಕ್ರಿಕೆಟ್ ನಲ್ಲಿ ಬೌಲರ್ ಟೆನ್ ಪಿನ್ ಬೌಲಿಂಗ್ ಆಟದಂತೆ ಚೆಂಡನ್ನು ಎಸೆಯುತ್ತಾನೆ. ಅಂದರೆ ತುಸು ಬಗ್ಗಿ ಕೈಯನ್ನು ನೆಲದ ಹತ್ತಿರ ತಂದು ಆದಷ್ಟು ನೆಲದಲ್ಲೇ ಚೆಂಡನ್ನು ಎಸೆಯತ್ತಾನೆ. ವೇಗವಾಗಿ ಬರುವ ಚೆಂಡು ನೆಲಬಿಟ್ಟು ಮೇಲೆ ಬರುವುದಿಲ್ಲ. ಇದರಲ್ಲೂ ಸ್ಪಿನ್ ಮಾಡುವ ಕೌಶಲ್ಯ ಕೆಲವರಲ್ಲಿದೆ. ಇಂತಹದೇ ಬೌಲಿಂಗ್ ಶೈಲಿ ಕ್ರಿಕೆಟ್ ಆರಂಭದ ದಿನದಲ್ಲಿ ಇಂಗ್ಲೆಂಡ್ ನಲ್ಲಿತ್ತು.
ಆದರೆ ಈ ಶೈಲಿಯ ಬದಲಾವಣೆಗೆ ಕಾರಣವಾಗಿದ್ದು ಒಬ್ಬಾಕೆ ಹೆಣ್ಣು. ಅದು 18ನೇ ಶತಮಾನದ ಆರಂಭ. ಮಹಿಳಾ ಕ್ರಿಕೆಟ್ ಗೆ ಹೆಚ್ಚಿನ ಪ್ರಾಮುಖ್ಯತೆ ಏನೂ ಇರಲಿಲ್ಲ. ಇಂಗ್ಲೆಂಡ್ ನ ಪ್ರತಿಷ್ಠಿತ ಮನೆತನದ ಹುಡುಗಿಯರು ಹವ್ಯಾಸಕ್ಕೆ ಆಡುತ್ತಿದ್ದರಷ್ಟೇ. ಅದರೆ ಅವರಿಗೆ ದೊಡ್ಡ ಸಮಸ್ಯೆಯಾಗಿದ್ದು ಅವರು ಹಾಕುತ್ತಿದ್ದ ಸ್ಕರ್ಟ್. ಆ ಕಾಲದ ಹುಡುಗಿಯರು ಉದ್ದವಾದ, ತುಸು ಅಗಲವಾದ ಸ್ಕರ್ಟ್‌ಗಳನ್ನು ಧರಿಸುತ್ತಿದ್ದರು. ಈ ಹುಡುಗಿಯರು ಅಂಡರ್ ಆರ್ಮ್ ಬಾಲ್ ಹಾಕಲು ಕೆಳಗೆ ಬಾಗಿದಾಗ, ಹೆಚ್ಚಾಗಿ, ಚೆಂಡು ಅವರ ಸ್ಕರ್ಟ್‌ನಲ್ಲಿ ಸಿಕ್ಕಿಕೊಳ್ಳುತ್ತಿತ್ತು. ಇದು ತುಂಬಾ ಕಿರಿಕಿರಿ ಅನಿಸ್ತಿತ್ತು. ಆದರೆ ಆಗ ಬೇರೆ ಬಟ್ಟೆ ಧರಿಸುವ ಅವಕಾಶ ಇರಲಿಲ್ಲ, ಹೀಗಾಗಿ ಚೆಂಡು ಸಿಕ್ಕಿ ಹಾಕದಂತೆ ಮಾಡಲು ಬೇರೆ ಏನಾದರೂ ಮಾಡಲೇ ಬೇಕಿತ್ತು. ಆಗ ಹೊಳೆದಿದ್ದೇ ರೌಂಡ್ ಆರ್ಮ್ ಆಕ್ಷನ್.
ಇಂಗ್ಲೆಂಡ್ ಬೌಲರ್ ಜಾನ್ ವಿಲ್ಸ್ ನ ಸಹೋದರಿ ಕ್ರಿಶ್ಚಿನಾ ವಿಲ್ಸ್ ಇದಕ್ಕೊಂದು ಉಪಾಯ ಹುಡುಕಿದ್ದರು. ಕೆಳಕ್ಕೆ ಬಾಗಿ ಚೆಂಡೆಸುವ ಬದಲು ಸ್ವಲ್ಪ ಎತ್ತರದಿಂದಲೇ ಬೌಲಿಂಗ್ ಮಾಡಬಹುದಲ್ಲವೇ ಎಂದು ಯೋಚನೆ ಮಾಡಿದ ಕ್ರಿಶ್ಚಿನಾ ಹೊಸ ಶೈಲಿಯನ್ನೇ ಕಂಡು ಹಿಡಿದರು. ಅದುವೆ ರೌಂಡ್ ಆರ್ಮ್ ಬೌಲಿಂಗ್. ಅಂದರೆ ಕೈಯನ್ನು ತುಸು ಅಡ್ಡವಾಗಿಟ್ಟು ಚೆಂಡನ್ನು ಎಸೆಯುವುದು, ಇನ್ನೂ ಸಿಂಪಲ್ ಆಗಿ ಹೇಳಬೇಕೆಂದರೆ ಲಂಕಾದ ಮಾಜಿ ಬೌಲರ್ ಲಸಿತ್ ಮಾಲಿಂಗ ರೀತಿಯ ಬೌಲಿಂಗ್ ಶೈಲಿ. ಆದರೆ ಕೈ ಭುಜದ ಮೇಲೆ ಬರಬಾರದು ಅಷ್ಟೇ.
ಕ್ರಿಶ್ಚಿನಾ ಹೊಸ ಸಂಶೋಧನೆ ಕಂಡ ಸಹೋದರ ಜಾನ್ ಇದನ್ನು ಪಂದ್ಯದಲ್ಲಿ ಎಕ್ಸಪರಿಮೆಂಟ್ ಮಾಡಲು ಮುಂದಾದ. ಅದು 1822ರಲ್ಲಿ ಎಂಸಿಸಿ ವಿರುದ್ಧ ನಡೆದ ಪಂದ್ಯ. ಇಲ್ಲಿ ಜಾನ್ ಮೊದಲ ಬಾರಿ ರೌಂಡ್ ಆರ್ಮ್ ಬೌಲಿಂಗ್ ಮಾಡಿಯೇ ಬಿಟ್ಟ. ಆದರೆ ಜಾನ್ ನ ರೌಂಡ್ ಆರ್ಮ್ ಆಕ್ಷನ್ ಕಂಡ ಅಂಪೈರ್ ನೋ ಬಾಲ್ ಕೊಟ್ಟಿದ್ದ. ಇದರಿಂದ ಕೆರಳಿದ ಜಾನ್ ನೇರ ಮೈದಾನದ ಹೊರಕ್ಕೆ ಬಂದು, ತನ್ನ ಕುದುರೆ ಏರಿ ಪಂದ್ಯ ಬಿಟ್ಟೇ ಹೋದ. ವಿಪರ್ಯಾಸ ಎಂದರೆ ಈ ಘಟನೆಯ ಬಳಿಕ ಜಾನ್ ವಿಲ್ಸ್ ಎಂದಿಗೂ ಕ್ರಿಕೆಟ್ ಆಡಲೇ ಇಲ್ಲ. ಆದರೆ ಕ್ರಿಕೆಟ್ ಲೋಕಕ್ಕೆ ಹೊಸ ಶೈಲಿಯೊಂದು ಸಿಕ್ಕಿತ್ತು. ನಂತರ ಬೌಲರ್ ಗಳು ಆಗಾಗ ರೌಂಡ್ ಆರ್ಮ್ ಬಾಲ್ ಹಾಕುತ್ತಿದ್ದರು. ಹಲವು ಚರ್ಚೆಗಳ ಬಳಿಕ 1835ರಲ್ಲಿ ಇದು ಅಧಿಕೃತ ಶೈಲಿ ಎಂದು ಮಾನ್ಯತೆ ಪಡೆಯಿತು.
ರೌಂಡ್ ಆರ್ಮ್ ಬೌಲಿಂಗನ್ನು ಕಾನೂನು ಬದ್ಧವಾಗಿಸಿದ ಎಂಸಿಸಿ ಬೌಲರ್ ಗಳಿಗೆ ಭುಜಕ್ಕಿಂತ ಎತ್ತರದಲ್ಲೂ ಕೈ ಬೀಸಲು ಅವಕಾಶ ನೀಡಿತು. ಹೀಗಾಗಿ ಕೆಲವು ಬೌಲರ್ ಗಳು ಕೈ ಯನ್ನು ನೇರವಾಗಿ ಎತ್ತಿ ಬಾಲ್ ಹಾಕಲು ಆರಂಭಿಸಿದರು. ಅಂದರೆ ಇಂದಿನ ಓವರ್ ಆರ್ಮ್ ಶೈಲಿಯಂತೆ. ಆದರೆ ಇದು ಮತ್ತೆ ವಿವಾದಕ್ಕೆ ಕಾರಣವಾಯ್ತು. ಈ ಶೈಲಿಗೆ ಅಂಪೈರ್ ಗಳು ನೋ ಬಾಲ್ ಕೊಡುತ್ತಿದ್ದರು. 1862ರಲ್ಲಿ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಎಡ್ಗರ್ ವಿಲ್ಶರ್ ಸತತ ಆರು ಎಸೆತಗಳನ್ನು ಓವರ್ ಆರ್ಮ್ ಮಾದರಿಯಲ್ಲಿ ಎಸೆದರು. ವಿಪರ್ಯಾಸ ಎಂದರೆ ಅಂಪೈರ್ ಆರು ಬಾರಿಯೂ ನೋ ಬಾಲ್ ನೀಡಿದರು. ಇದರಿಂದ ಕೋಪಗೊಂಡ ಇಂಗ್ಲೆಂಡ್ ಪ್ಲೇಯರ್ಸ್ ಮೈದಾನ ಬಿಟ್ಟು ಹೋರ ಹೋದರು. ಈ ಕಾರಣದಿಂದಲೇ ಓವರ್ ಆರ್ಮ್ ಶೈಲಿಯ ಬಗೆಗಿನ ಚರ್ಚೆ ಮುನ್ನೆಲೆಗೆ ಬಂತು.
ಇದೆಲ್ಲದರ ಬಳಿಕ 1864ರಲ್ಲಿ ತನ್ನ ನಿಯಮಗಳನ್ನು ಬದಲಿಸಿದ ಎಂಸಿಸಿ ಓವರ್ ಆರ್ಮ್ ಗೆ ಮಾನ್ಯತೆ ನೀಡಿತು. ಆದರೆ ಬೌಲರ್ ಕೈಯನ್ನು ಮೇಲಕ್ಕೆ ನೇರವಾಗಿ ಎತ್ತಿ ಬಾಲ್ ಹಾಕಬೇಕು, ಆತ ಮೊಣಕೈ ಮಡಿಸಬಾರದು, ಚೆಂಡನ್ನು ತ್ರೋ ಮಾಡಬಾರದು ಎಂದು ನಿಯಮ ರೂಪಿಸಿತು. ಹೀಗೆ ಆರಂಭವಾದ ಓವರ್ ಆರ್ಮ್ ಬೌಲಿಂಗ್ ಇಂದಿಗೂ ನಡೆಯುತ್ತಿದೆ.
ಕೀರ್ತನ್ ಶೆಟ್ಟಿ ಬೋಳ