Advertisement

ಉಪನ್ಯಾಸಕರಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ 

04:58 PM Jan 07, 2018 | |

ನೆಹರೂನಗರ: ಚಲಿಸುವ ವಾಹನ, ಬೆಳೆಯುವ ಗಿಡ ಮರಗಳಂತಹ ಸಂಗತಿಗಳಿಗೂ ಕಾಲಕಾಲಕ್ಕೆ ಸರಿಯಾದ
ಗಮನಿಸುವಿಕೆ ಅತ್ಯಂತ ಅಗತ್ಯ. ಅಂತೆಯೇ ವೃತ್ತಿನಿರತರಿಗೂ ವಾರ್ಷಿಕವಾಗಿ ಒಮ್ಮೆಯಾದರೂ ತರಬೇತಿ ನೀಡುವುದು ಅವರ ಬೆಳವಣಿಗೆಯ ದೃಷ್ಟಿಯಿಂದ ಸಹಕಾರಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್‌ ಹೇಳಿದರು.

Advertisement

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಶಿಕ್ಷಣ ಘಟಕದ ನೇತೃತ್ವದಲ್ಲಿ ವಿವಿಧ ವಿವೇಕಾನಂದ ಪದವಿ ಕಾಲೇಜುಗಳ ಉಪನ್ಯಾಸಕರಿಗಾಗಿ ಶನಿವಾರ ಆಯೋಜಿಸಲಾದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಕ್ಷೇತ್ರಕ್ಕೆ ಅಡಿಯಿಡುವಾಗ ಉತ್ಸಾಹ, ಕನಸುಗಳೊಂದಿಗೆ ಬರುವವರು ಅನೇಕರಿರುತ್ತಾರೆ. ಆದರೆ ಕಾಲಕ್ರಮೇಣ ಉತ್ಸಾಹ ನಶಿಸಿ ಆಲಸ್ಯ ಮೈದೋರುವುದೂ ಇದೆ. ಪರಿಣಾಮವಾಗಿ ಆರಂಭದ ಕಾಲದಲ್ಲಿದ್ದ ಪರಿಣಾಮಕಾರಿ ವೃತ್ತಿಪರತೆ ಮಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ತರಬೇತಿಗಳು ಪ್ರಮುಖ ಎನಿಸಿಕೊಳ್ಳುತ್ತವೆ. ನಮ್ಮನ್ನು ನಾವು ಉತ್ಸಾಹಿಗಳನ್ನಾಗಿ ಕಾಪಾಡಿಕೊಳ್ಳುವುದಕ್ಕೆ ಮಾರ್ಗದರ್ಶನದ ಅಗತ್ಯ ಖಂಡಿತಾ ಇದೆ. ನಾವು ಅದಕ್ಕೆ ತೆರೆದುಕೊಂಡಾಗ ವೃತ್ತಿಯಲ್ಲಿ ಯಶ ಗಳಿಸುವುದು ಸುಲಭವೆನಿಸುತ್ತದೆ ಎಂದು ಕೃಷ್ಣ ಭಟ್‌ ಹೇಳಿದರು.

ಬಾಂಧವ್ಯ ಅಗತ್ಯ
ಸಾಮಾನ್ಯವಾಗಿ ನಮ್ಮಲ್ಲಿನ ಅಹಂಕಾರ ನಮ್ಮ ಸಾಧನೆಗೆ ಅಡ್ಡಿಯಾಗುತ್ತದೆ. ಆದರೆ ನಿರಂತರವಾದ ತರಬೇತಿಯಿಂದ ನಮ್ಮ ತಪ್ಪುಗಳನ್ನು ಗುರುತಿಸುವುದಕ್ಕೂ ಸಾಧ್ಯವಾಗಿ ವೃತ್ತಿಪರತೆ ಹೆಚ್ಚುತ್ತದೆ ಎಂದು ಹೇಳಿದರು. ಉಪನ್ಯಾಸಕರ ನಡುವಣ ಬಾಂಧವ್ಯವೂ ಕುಂಠಿತವಾಗುತ್ತಿದೆ ಎಂಬ ಮಾತು ಅನೇಕ ಕಡೆಗಳಲ್ಲಿ ಕೇಳಿಬರುವುದಿದೆ. ಅಂಥಹದ್ದಕ್ಕೆ ಅವಕಾಶ ನೀಡದೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಳ್ಳುವುದೂ ಅತ್ಯಂತ ಅಗತ್ಯ ಎಂದು ಹೇಳಿದರು.

ಪ್ರಸ್ತಾವನೆಗೈದ ಪ್ರಶಿಕ್ಷಣ ಘಟಕದ ಸಂಯೋಜಕ ರಘುರಾಜ ಉಬರಡ್ಕ ಮಾತನಾಡಿ, ಪ್ರಶಿಕ್ಷಣ ಘಟಕದ ಕಾರ್ಯ ನಿರ್ವಹಣೆಯ ಅನಂತರದ ದಿನಗಳಲ್ಲಿ ಶಿಕ್ಷಣದಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿರುವುದು ಕಂಡು ಬಂದಿದೆ. ಪ್ರಶಿಕ್ಷಣ ಘಟಕವು ಸ್ವತ್ಛತಾ ಪಾಲಕರಿಂದ ತೊಡಗಿ ಪ್ರಾಂಶುಪಾಲರವರೆಗೆ ವಿವಿಧ ಕಾರ್ಯಾಗಾರಗಳನ್ನು ನಡೆಸುವುದರ ಮುಖೇನ ಸಮಗ್ರತೆಯನ್ನು ಕಾಯ್ದುಕೊಂಡಿದೆ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಮಾತನಾಡಿ, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ವಿಷಯವನ್ನು ಒದಗಿಸಿಕೊಟ್ಟರೆ ಸಾಲದು. ಅದಕ್ಕಿಂತಲೂ ಹೊರತಾದ ಸಮಗ್ರವಾದ ಜೀವನಾನುಭವಗಳನ್ನೂ ಕಟ್ಟಿಕೊಡಬೇಕು. ಹಾಗೆ ಒದಗಿಸಬೇಕಾದರೆ ತರಬೇತಿಯ ಅಗತ್ಯವಿದೆ. ಉಪನ್ಯಾಸಕರೂ ತರಬೇತಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುವುದರಿಂದ ಹೆಚ್ಚು ಪ್ರಭಾವಶಾಲಿಗಳಾಗಬಹುದು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ರಚಿಸಿರುವ ವಾರ್‌ – ಪ್ರಾಕ್ಸಿವಾರ್ ಎಂಬ ಕೃತಿಯನ್ನು ಡಾ| ಕೆ. ಎಂ. ಕೃಷ್ಣ ಭಟ್‌ ಅವರಿಗೆ ಹಸ್ತಾಂತರಿಸಲಾಯಿತು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಪ್ರೊ| ವಿಜಯ ಸರಸ್ವತಿ ಸ್ವಾಗತಿಸಿ, ಪ್ರಶಿಕ್ಷಣ ಘಟಕದ ಸ್ಥಾನೀಯ ಸಂಯೋಜಕ, ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್‌ ಕುಮಾರ್‌ ಕಮ್ಮಜೆ ವಂದಿಸಿದರು.

ನಿರಂತರ ಸಿದ್ಧತೆ
ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಮಾತನಾಡಿ, ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಉಪನ್ಯಾಸಕರು ಒಮ್ಮೆ ತಯಾರು ಮಾಡಿದ ಸಂಗತಿಯನ್ನೇ ಪ್ರತೀ ವರ್ಷ ಹೇಳುವುದೆಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಆದರೆ ತಾನು ಹಿಂದಿನ ವರ್ಷಕ್ಕೆ ತಯಾರು ಮಾಡಿದ ಸಂಗತಿಗಳಿಗೆ ಈ ವರ್ಷ ಮತ್ತಷ್ಟು ಸೇರಿಸಿಕೊಳ್ಳದಿದ್ದರೆ ಪಾಠದ ಪರಿಣಾಮ ಕುಸಿಯುತ್ತದೆ ಎಂಬುದು ಗಮನಾರ್ಹ. ಅಲ್ಲದೆ ಪಠ್ಯವಿಷಯಗಳೂ ಆಗಿಂದಾಗ್ಗೆ ಬದಲಾವಣೆ ಹೊಂದುತ್ತವೆ. ಹಾಗಾಗಿ ಉಪನ್ಯಾಸಕರ ಸಿದ್ಧತೆಯೂ ನಿರಂತರವಾಗಿರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next