ಮುಂಬಯಿ: ವರ್ಷಾಂತ್ಯದ ವಿಶ್ವಕಪ್ ಕ್ರಿಕೆಟ್ ಪಂದ್ಯಾ ವಳಿಯ ಹಿನ್ನೆಲೆಯಲ್ಲಿ ಮಹತ್ವ ಪಡೆದಿರುವ ಆಸ್ಟ್ರೇಲಿಯ ಎದುರಿನ ಏಕದಿನ ಸರಣಿಗಾಗಿ ಭಾರತ ತಂಡ ಬುಧವಾರ ಅಭ್ಯಾಸ ಆರಂಭಿಸಿತು.
ಮೊದಲ ಪಂದ್ಯ ಶುಕ್ರವಾರ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆಯಲಿದ್ದು, ರೋಹಿತ್ ಶರ್ಮ ಗೈರಲ್ಲಿ ಉಪ ನಾಯಕ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಅವರು ಬಹಳ ಹೊತ್ತು ನೆಟ್ಸ್‌ನಲ್ಲಿ ಕಳೆದರು.
ಸ್ಪಿನ್‌ದ್ವಯರಾದ ಯಜುವೇಂದ್ರ ಚಹಲ್ ಮತ್ತು ಕುಲದೀಪ್ ಯಾದವ್, ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಬೌಲಿಂಗ್ ಅಭ್ಯಾಸಕ್ಕೆ ಹೆಚ್ಚಿನ ಅವಧಿಯನ್ನು ಮೀಸಲಿರಿಸಿದರು.
ವೇಗಿಗಳಾದ ಮೊಹಮ್ಮದ್ ಸಿರಾಜ್, ಜೈದೇವ್ ಉನಾದ್ಕತ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಕೀಪರ್ ಇಶಾನ್ ಕಿಶನ್ ಸಾಕಷ್ಟು ಬೆವರು ಸುರಿಸಿದರು. ಆದರೆ ಕೋಚ್ ರಾಹುಲ್ ದ್ರಾವಿಡ್ ಗೈರಾಗಿದ್ದರು. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೊಡ್, ಫೀಲ್ಡಿಂಗ್ ಕೋಚ್ ಟಿ. ದಿಲೀಪ್, ಬೌಲಿಂಗ್ ಕೋಚ್ ಪರಸ್ ಮ್ಹಾಂಬ್ರೆ, ತ್ರೋಡೌನ್ ಸ್ಪೆಷಲಿಸ್ಟ್‌ಗಳಾದ ರಾಘವೇಂದ್ರ, ನುವಾನ್ ಸೇನೆವಿರತ್ನೆ ಉಪಸ್ಥಿತರಿದ್ದರು.
ಕೊನೆಯ 2 ಟೆಸ್ಟ್ ಪಂದ್ಯಗಳಲ್ಲಿ ಸ್ಥಾನ ಪಡೆಯದ ಕೆ.ಎಲ್. ರಾಹುಲ್ ಗೈರು ಎದ್ದು ಕಂಡಿತು. ಏಕದಿನದಲ್ಲಿ ಅವರನ್ನು 5ನೇ ಕ್ರಮಾಂಕಕ್ಕೆ ಹಾಗೂ ವಿಕೆಟ್ ಕೀಪಿಂಗ್‌ಗೆ ಕಾದಿರಿಸಲಾಗುವ ಸಾಧ್ಯತೆ ಇದೆ.
ಸೂರ್ಯಕುಮಾರ್, ಇಶಾನ್ ಕಿಶನ್ ಮತ್ತು ಪಾಂಡ್ಯ ಹೆಚ್ಚಿನ ಅವಧಿಯನ್ನು ಬ್ಯಾಟಿಂಗ್ ಅಭ್ಯಾಸದಲ್ಲಿ ಕಳೆದರು. ಪಾಂಡ್ಯ ಸ್ವಲ್ಪ ಹೊತ್ತು ಬೌಲಿಂಗ್ ಅಭ್ಯಾಸವನ್ನೂ ನಡೆಸಿದರು.
ಟೀಮ್ ಇಂಡಿಯಾದ ಅಭ್ಯಾಸದ ಬಳಿಕ ಪ್ರವಾಸಿ ಆಸ್ಟ್ರೇಲಿಯ ಕ್ರಿಕೆಟಿಗರೂ ಅಭ್ಯಾಸ ನಡೆಸಿದರು.