ಢಾಕಾ : ಕೊರೊನಾ ಭೀತಿಯ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ 33 ರನ್ನುಗಳಿಂದ ಶ್ರೀಲಂಕಾವನ್ನು ಮಣಿಸಿ 1-0 ಮುನ್ನಡೆ ಸಾಧಿಸಿದೆ.
ರವಿವಾರ ಇಲ್ಲಿ ನಡೆದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 6 ವಿಕೆಟಿಗೆ 257 ರನ್ ಪೇರಿಸಿದರೆ, ಶ್ರೀಲಂಕಾ 48.1 ಓವರ್‌ಗಳಲ್ಲಿ 224ಕ್ಕೆ ಆಲೌಟ್ ಆಯಿತು.
ಬಾಂಗ್ಲಾ ಸರದಿಯಲ್ಲಿ ಮೂವರಿಂದ ಅರ್ಧ ಶತಕ ದಾಖಲಾಯಿತು. ನಾಯಕ ತಮಿಮ್ ಇಕ್ಬಾಲ್ 52, ಕೀಪರ್ ಮುಶ್ಫಿಕರ್ ರಹೀಂ ಸರ್ವಾಧಿಕ 84 ಮತ್ತು ಮಹಮದುಲ್ಲ 54 ರನ್ ಬಾರಿಸಿ ತಂಡದ ಮೊತ್ತವನ್ನು ಇನ್ನೂರೈವತ್ತರ ಗಡಿ ದಾಟಿಸಿದರು. ಲಂಕಾ ಪರ ಧನಂಜಯ ಡಿ ಸಿಲ್ವ 45ಕ್ಕೆ 3 ವಿಕೆಟ್ ಕಿತ್ತು ಗಮನ ಸೆಳೆದರು.
ಇದನ್ನೂ ಓದಿ :ಟೆನಿಸ್ : ಕೊಕೊ ಗಾಫ್ ಗೆಲುವಿನ ಗ್ರಾಫ್ : ಅವಳಿ ಪ್ರಶಸ್ತಿ ಗೆದ್ದ 17ರ ಸಾಧಕಿ
ಚೇಸಿಂಗ್ ವೇಳೆ ಶ್ರೀಲಂಕಾ ಅಗ್ರ ಕ್ರಮಾಂಕದ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿತು. ಮೆಹಿದಿ ಹಸನ್ ಘಾತಕ ಸ್ಪೆಲ್ ನಡೆಸಿ ಲಂಕಾ ಹಾದಿಯನ್ನು ಕಠಿನಗೊಳಿಸಿದರು. 149ಕ್ಕೆ 7 ವಿಕೆಟ್ ಕಳೆದುಕೊಂಡ ಪೆರೆರ ಪಡೆ ದೊಡ್ಡ ಸೋಲಿಗೆ ತುತ್ತಾಗುವ ಎಲ್ಲ ಸಾಧ್ಯತೆ ಇತ್ತು. ಆದರೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ವನಿಂದು ಹಸರಂಗ ಮುನ್ನುಗ್ಗಿ ಬಾರಿಸತೊಡಗಿದರು. ಆಗ ಪಂದ್ಯದ ಕುತೂಹಲ ತೀವ್ರಗೊಂಡಿತು. 60 ಎಸೆತಗಳಿಂದ 74 ರನ್ (3 ಬೌಂಡರಿ, 5 ಸಿಕ್ಸರ್) ಬಾರಿಸಿದ ಹಸರಂಗ ವಿಕೆಟ್ ಬಿದ್ದೊಡನೆ ಬಾಂಗ್ಲಾ ನಿಟ್ಟುಸಿರೆಳೆಯಿತು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-6 ವಿಕೆಟಿಗೆ 257 (ರಹೀಂ 84, ಮಹಮದುಲ್ಲ 54, ತಮಿಮ್ 52, ಧನಂಜಯ 45ಕ್ಕೆ 3). ಶ್ರೀಲಂಕಾ-224 (ಹಸರಂಗ 74, ಕುಸಲ್ ಪೆರೆರ 30, ಕುಸಲ್ ಮೆಂಡಿಸ್ 24, ಮೆಹಿದಿ ಹಸನ್ 30ಕ್ಕೆ 4, ಮುಸ್ತಫಿಜುರ್ 34ಕ್ಕೆ 3, ಸೈಫುದ್ದೀನ್ 49ಕ್ಕೆ 2).