Advertisement

ಲೈಂಗಿಕ ಅಲ್ಪಸಂಖ್ಯಾತರಿಗೆ ಪಾಲಿಕೆಯಿಂದ 1ಕೋಟಿ: ಮೋದಿ

10:41 AM Sep 05, 2017 | Team Udayavani |

ಕಲಬುರಗಿ: ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮಹಾನಗರ ಪಾಲಿಕೆಯಿಂದ ಒಂದು ಕೋಟಿ ರೂ. ಗಳ ಅನುದಾನ ಮೀಸಲಿಡಲಾಗುವುದು ಎಂದು ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಹೇಳಿದರು.

Advertisement

ನಗರದ ಆರೋಗ್ಯ ಇಲಾಖೆ ತರಬೇತಿ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಮತ್ತು ಸ್ನೇಹ ಸೊಸೈಟಿ ಜಂಟಿಯಾಗಿ ಹಮ್ಮಿಕೊಂಡಿದ್ದ ಲೈಂಗಿಕ ಅಲ್ಪಸಂಖ್ಯಾತರ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಲೈಂಗಿಕ ಅಲ್ಪಸಂಖ್ಯಾತರ ವಸತಿ ಹಾಗೂ ಉದ್ಯೋಗಕ್ಕೆ ಅನುದಾನ ಬಳಕೆ ಮಾಡಲಾಗುವುದು. ನಗರದಲ್ಲಿ ಸುಮಾರು 300 ಜನ ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. ಅವರ ಅಭಿವೃದ್ಧಿಗೆ ಪಾಲಿಕೆ ಬದ್ಧವಾಗಿದೆ. ಆ ಹಿನ್ನೆಲೆಯಲ್ಲಿ ಅವರಿಗೆ ಮನೆಗಳು ಹಾಗೂ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಹಾನಗರ ಪಾಲಿಕೆಯಲ್ಲಿ ಉದ್ಯೋಗಗಳನ್ನು ಪವರ್‌ ಏಜೆನ್ಸಿ ಮೂಲಕ ಕಲ್ಪಿಸಲಾಗುತ್ತಿದೆ. ಲೈಂಗಿಕ ಅಲ್ಪಸಂಖ್ಯಾತರು ಹೊಂದಿರುವ ವಿದ್ಯಾಭ್ಯಾಸಕ್ಕೆ ಅನುಗುಣವಾಗಿಯೂ ಸಹ ಅವರಿಗೆ ನೇಮಕಾತಿಯಲ್ಲಿ ಪರಿಗಣಿಸಲಾಗುವುದು ಹಾಗೂ ಮನೆ ಕಲ್ಪಿಸಲು ಸೂಕ್ತ ಸ್ಥಳವನ್ನೂ ಗುರುತಿಸಲಾಗುವುದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ರಾಜ್ಯ ಸಂಯೋಜಕ ಮಲ್ಲಪ್ಪ ಕುಂಬಾರ, ಲೈಂಗಿಕ ಅಲ್ಪಸಂಖ್ಯಾತರರಿಗೆ ಸರ್ಕಾರ 20,000 ರೂ. ಸಹಾಯಧನ ನೀಡುತ್ತಿದೆ. ಅದರ ಬದಲಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ವಾಹನಗಳ ನಿಲುಗಡೆ ಸ್ಥಳದಲ್ಲಿ ಸ್ಥಳಾವಕಾಶ ಕಲ್ಪಿಸಬೇಕು. ತಿಂಗಳಿಗೆ 10ರಿಂದ 15000 ರೂ.ಆದಾಯ ಬರುವ ಉದ್ಯೋಗ ಕಲ್ಪಿಸಬೇಕು ಎಂದು ಹೇಳಿದರು.

Advertisement

ಜಿಲ್ಲೆಯಲ್ಲಿ ಒಟ್ಟು 1200 ಜನ ಹಾಗೂ ನಗರದಲ್ಲಿ 300 ಜನ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ಅವರೆಲ್ಲರಿಗೂ ಸರ್ಕಾರ ಪುನರ್ವಸತಿ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು. ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯ ಪ್ರೊ| ಆರ್‌.ಕೆ. ಹುಡಗಿ, ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ, ಮಹಾನಗರ ಪಾಲಿಕೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ| ನಾಗರತ್ನ ದೇಶಮಾನೆ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ. ಸಂದೀಪ, ಸ್ನೇಹ ಸೊಸೈಟಿ ಅಧ್ಯಕ್ಷೆ ಮನಿಶಾ ಚವ್ಹಾಣ, ಸಹರಾ ಸಂಸ್ಥೆ ಸಂಯೋಜಕ ಮಸ್ತಾನ್‌ ಬಿರಾದಾರ, ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಜಿಲ್ಲಾಧ್ಯಕ್ಷ ಮೌನೇಶ್ವರ, ಡಾ| ಮಲ್ಲೇಶಿ ಸಜ್ಜನ, ಅರ್ಜುನ ಭದ್ರೆ ಇದ್ದರು. ಜಿಲ್ಲೆಯ ಅನೇಕ ಲೈಂಗಿಕ ಅಲ್ಪಸಂಖ್ಯಾತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next