Advertisement

ಮೈಸೂರಿನಲ್ಲೇ ತನಿಖೆ ಮಾಡ್ತಿದ್ದ ಪೊಲೀಸರಿಗೆ ತ.ನಾಡು ದಾರಿ ತೋರಿಸಿದ್ದು ಆ ಒಂದು ಬಸ್ ಟಿಕೆಟ್!

01:45 PM Aug 28, 2021 | Team Udayavani |

ಮೈಸೂರು: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಓರ್ವ ಅಪ್ರಾಪ್ತ ವಯಸ್ಕನನ್ನು ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡಿನ ತಿರುಪುರ್ ಮೂಲದ ಐವರನ್ನು ಬಂಧಿಸಲಾಗಿದ್ದು, ನಾಪತ್ತೆಯಾಗಿರುವ ಮತ್ತೋರ್ವನ ಬಂಧನಕ್ಕೆ ಪೊಲೀಸ್ ತಂಡ ಬಲೆ ಬೀಸಿದೆ.

Advertisement

ತಮಿಳುನಾಡಿನಿಂದ ಮೈಸೂರಿಗೆ ಈ ಆರೋಪಿಗಳು ಆಗಾಗ ಬಂದು ಹೋಗುತ್ತಿದ್ದರು. ಇವರಲ್ಲಿ ಕೆಲವರು ಕಾರ್ಪೆಂಟರ್, ವೈರಿಂಗ್ ಕೆಲಸ, ಡ್ರೈವರ್ ಕೆಲಸ ಮಾಡುತ್ತಿದ್ದವರು. ಬಂಡಿಪಾಳ್ಯ ಎಪಿಎಂಸಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬ ಡ್ರೈವರ್ ಜೊತೆ ತರಕಾರಿ ತಗೆದುಕೊಳ್ಳಲು ಇವರು ಬರುತ್ತಿದ್ದರು. ಹೀಗೆ ಬಂದು ಮರಳಿ ಹೋಗುವಾಗ ಪಾರ್ಟಿ ಮಾಡಿ ಹೊಗುತ್ತಿದ್ದರು. ಘಟನೆ ನಡೆದ ಸ್ಥಳದಲ್ಲಿ ಈ ಐವರು ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದರು.

ಈ ಬಾರಿಯೂ ಹಾಗೆ ಬಂದವರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ಯುವಕ-ಯುವತಿ ಇದ್ದಿದ್ದನ್ನು ಕಂಡು ಅವರನ್ನು ಸುತ್ತುವರಿದಿದ್ದರು. ಮೂರು ಲಕ್ಷ ಹಣ ನೀಡುವಂತೆ ಬೆದರಿಸಿದ್ದರು. ಆದರೆ ಯುವಕ‌ ಯುವತಿ ಹಣ ನೀಡಿಲ್ಲ. ಬಳಿಕ ಯುವಕನಿಗೆ ಹಲ್ಲೆ ನಡೆಸಿ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ.

ಇದನ್ನೂ ಓದಿ:ಮೈಸೂರು ಪ್ರಕರಣ: ಬಾಲಾಪರಾಧಿ ಸೇರಿ ಐವರು ಅರೆಸ್ಟ್; ತರಕಾರಿ ಮಂಡಿಗೆ ಬಂದವರು ಅಪರಾಧ ಮಾಡಿದರು

Advertisement

ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಆರಂಭಿಸಿದ್ದರು. ಆದರೆ ಸಂತ್ರಸ್ತ ಯುವತಿ ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಿಲ್ಲ. ಇದು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಚಾಲೆಂಜ್ ಆಗಿತ್ತು. ಮೈಸೂರಿನ ಯುವಕರು- ಕಾಲೇಜು ವಿದ್ಯಾರ್ಥಿಗಳ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಪೊಲೀಸರ ತನಿಖೆಗೆ ದೊಡ್ಡ ತಿರುವು ನೀಡಿದ್ದು ಒಂದು ‘ಬಸ್ ಟಿಕೆಟ್’.

ದಾರಿ ತೋರಿದ ಬಸ್ ಟಿಕೆಟ್: ಸ್ಥಳ ಪರಿಶೀಲನೆ ವೇಳೆ ಪೊಲೀಸರಿಗೆ ತಮಿಳುನಾಡಿನ ಒಂದು ಬಸ್ ಟಿಕೆಟ್ ಸಿಕ್ಕಿತ್ತು. ಇದರ ಆಧಾರದಲ್ಲಿ ಆರೋಪಿಗಳು ತಮಿಳುನಾಡಿನವರು ಆಗಿರಬಹುದು ಎಂದು ಅರಿತ ಪೊಲೀಸರು ಟವರ್ ಲೊಕೇಶನ್ ನೆರವು ಪಡೆದಿದ್ದರು. ಸ್ಥಳದಲ್ಲಿದ್ದ ಸಾವಿರಾರು ಟವರ್ ಲೊಕೇಶನ್ ಗಳಲ್ಲಿ ಫಿಲ್ಟರ್ ಮಾಡಿದ್ದರು.

ಅಷ್ಟೇ ಅಲ್ಲದೆ ಆರೋಪಿಗಳು ತಮಿಳು ಭಾಷೆ ಮಾತನಾಡುತ್ತಿದ್ದರು ಎಂದು ಯುವಕ ಮಾಹಿತಿ ನೀಡಿದ್ದ. ಘಟನೆಯ ಸಂತ್ರಸ್ಥ ಯುವತಿ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಆ ಯುವತಿ ತನ್ನ ಸ್ನೇಹಿತೆಯೊಬ್ಬರ ಬಳಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಮಾಹಿತಿ ಪಡೆದ ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದರು.

ಹೀಗಾಗಿ ತಮಿಳುನಾಡಿನತ್ತ ಹೊರಟ ಪೊಲೀಸರು ಸತ್ಯಮಂಗಲದಲ್ಲಿ ಐವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಇನ್ನೂ ಓರ್ವ ಆರೋಪಿಗಾಗಿ ಪೊಲೀಸರು ತಲಾಶ್ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next