ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೇ ಮೊದಲ ಬಾರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮಾತನಾಡಿದ್ದು, ಈ ಪ್ರಕರಣದಲ್ಲಿ ನಾನು ಅಂಫೈರ್ ಅಲ್ಲ, ಪ್ರತಿಕ್ರಿಯೆ ಕೊಡುವುದಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾ ಡಿದ ಅವರು, ಎಸ್‌ಐಟಿ ತನಿಖೆ ನಡೆಯುತ್ತಿರುವಾಗ ಅದರ ಬಗ್ಗೆ ಮಾತನಾಡುವುದು ಸಮಂಜಸ ಅಲ್ಲ. ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಕಾದು ನೋಡೋಣ. ನಾನು ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ. ಬಂಧಿತರು ನನ್ನ ಆಪ್ತರಲ್ಲ ಎಂದರು.
ಕಾರ್ಯಕರ್ತರ ಪ್ರಶ್ನೆ ಬಂದಾಗ ನಾನು ಬೆನ್ನು ತೋರಿಸಿ ಹೋಗುವುದಿಲ್ಲ. ನಿನ್ನೆ ಬಂಧಿತರಾದವರು ಅಮಾಯಕರು. ನಮಗೂ ವೀಡಿಯೋಗೂ ಸಂಬಂಧ ಇಲ್ಲ. ಪೆನ್‌ಡ್ರೈವ್ ಇದೆ, ವೀಡಿಯೋ ಇದೆ ಅಂತ ವಶಕ್ಕೆ ತೆಗೆದುಕೊಳ್ಳುವುದಾದರೆ ಹಾಸನದಲ್ಲಿ ಅಂತಹ 1.5 ಲಕ್ಷ ಜನರನ್ನು ವಶಕ್ಕೆ ಪಡೆಯಬೇಕಾಗುತ್ತದೆ. ಒಂದೂವರೆ ಲಕ್ಷ ಜನರ ಮೊಬೈಲ್‌ಗಳಲ್ಲಿ ವೀಡಿಯೋ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವರ್ಷದಿಂದಲೇ ವೀಡಿಯೋ ಹರಿದಾಡುತ್ತಿದೆ ಎಂದು ಹೇಳುತ್ತಿದ್ದರು. ಒಂದು ವರ್ಷದ ಹಿಂದೆಯೇ ಕ್ರಮ ಕೈಗೊಳ್ಳಬೇಕಿತ್ತು. ಈಗ ಚರ್ಚೆ ಮಾಡಿದರೆ ಏನು ಪ್ರಯೋಜನ? ಸಂತ್ರಸ್ತರ ಬಗ್ಗೆಯೂ ಯೋಚಿಸಬೇಕು. ಎ. 23 ರಂದು ಲಾಯರ್ ಪೆನ್‌ಡ್ರೈವ್ ತಂದು ಕೊಟ್ಟರು. ಹಾಗಂತ ಆ ಲಾಯರ್ ಮೇಲೆ ಕೇಸ್ ಹಾಕಲಾಗುತ್ತದೆಯೇ? ಈ ವಿಚಾರದಲ್ಲಿ ಅಮಾಯಕರು ಬಂಧನ ಆಗಬಾರದು ಎಂದು ಹೇಳಿದರು.