ಸರಕಾರದ ಭ್ರಷ್ಟಾಚಾರದ ರೇಟ್ ಕಾರ್ಡ್ ಬಿಡುಗಡೆ ಮಾಡಿರುವ ಕಾಂಗ್ರೆಸ್ ನಾಯಕರು, ಆಡಳಿತ ಪಕ್ಷದ ಶಾಸಕರು, ಸಚಿವರು ವಿವಿಧ ಸಂದರ್ಭಗಳಲ್ಲಿ ಮಾಡಿದ ಆರೋಪಗಳನ್ನು ಕ್ರೋಡೀಕರಿಸಿ ಭ್ರಷ್ಟಾಚಾರ ಪ್ರಮಾಣದ ಪಟ್ಟಿ ಮಾಡಿದ್ದಾರೆ. ಅದರಂತೆ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ., ಸಚಿವರ ಹುದ್ದೆಗೆ 500 ಕೋಟಿ ರೂ., ನೇಮಕಾತಿ ಮತ್ತು ವರ್ಗಾವಣೆಗೆ ಸಂಬಂಧಿಸಿ ಕೆಎಸ್‌ಡಿಎಲ್‌ನಲ್ಲಿ 5ರಿಂದ 15 ಕೋಟಿ, ಎಂಜಿನಿಯರ್‌ಗೆ 1- 5 ಕೋಟಿ, ಸಬ್ ರಿಜಿಸ್ಟ್ರಾರ್ 50 ಲಕ್ಷದಿಂದ 5 ಕೋಟಿ, ಬೆಸ್ಕಾಂನಲ್ಲಿ 1 ಕೋಟಿ ಹೀಗೆ ವಿವಿಧ ವಿಭಾಗಗಳಲ್ಲಿ ಭ್ರಷ್ಟಾಚಾರವು ಕನಿಷ್ಠ 40ರಿಂದ ಗರಿಷ್ಠ 75ರಷ್ಟು ಆಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲೇ ಠಿಕಾಣಿ ಹೂಡಿದ್ದರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದ್ದಾರೆ.
Advertisement
ಭ್ರಷ್ಟಾಚಾರದ ರೇಟ್ ಕಾರ್ಡ್‌ನಲ್ಲಿ ಕೋವಿಡ್ ಕಿಟ್ ಪೂರೈಕೆಯಲ್ಲಿ ಅತಿ ಹೆಚ್ಚು ಶೇ. 75ರಷ್ಟು ಭ್ರಷ್ಟಾಚಾರ ನಡೆದಿದ್ದರೆ, ಮೊಟ್ಟೆ ಪೂರೈಕೆಯಲ್ಲಿ ಅತಿ ಕಡಿಮೆ ಶೇ. 30ರಷ್ಟು ಲಂಚಾವತಾರ ಆಗಿದೆ. ಬಿಡಿಎ ಆಯುಕ್ತ, ಕೆಪಿಎಸ್ಸಿ ಅಧ್ಯಕ್ಷ, ಡಿಸಿ ಮತ್ತು ಎಸ್‌ಪಿ, ಉಪಕುಲಪತಿ, ಎಸಿ ಮತ್ತು ತಹಶೀಲ್ದಾರ್ ಹುದ್ದೆಗಳಿಗೆ ಕನಿಷ್ಠ 50 ಲಕ್ಷದಿಂದ ಗರಿಷ್ಠ 15 ಕೋಟಿ ರೂ.ವರೆಗೆ ಡೀಲ್ ನಡೆದಿದೆ ಎಂದು ಆರೋಪಿಸಿದರು.
ಈ ಸಂಬಂಧ ಕಾಂಗ್ರೆಸ್ ನಾಯಕರು ಟ್ವೀಟ್ ಜತೆಗೆ ಪ್ರತ್ಯೇಕ ಸುದ್ದಿಗೋಷ್ಠಿ ಮಾಡಿ ಬಿಜೆಪಿ ವಿರುದ್ಧ ಮುಗಿಬಿದ್ದರು. ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಮಾತನಾಡಿ, ನಾವು ಈ ರಿಪೋರ್ಟ್ ಕಾರ್ಡನ್ನು ಸ್ಪಷ್ಟ ಮಾಹಿತಿಯ ಆಧಾರದಲ್ಲಿ ಹೇಳಿದ್ದೇವೆ. ಇದೇನೂ ಕಪೋಲಕಲ್ಪಿತ ಸುದ್ದಿಯಲ್ಲ. ಅವರದ್ದೇ ಶಾಸಕರು ನೀಡಿದ ಹೇಳಿಕೆಗಳು. ನಾವು ಕಲೆಹಾಕಿದ ಮಾಹಿತಿಯಿಂದ ತಿಳಿದುಬಂದದ್ದಾಗಿದೆ ಎಂದು ದೂರಿದರು.
ರಾಷ್ಟ್ರೀಯ ನಾಯಕರು ಉತ್ತರಿಸಲಿ ಎಐಸಿಸಿ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಾತನಾಡಿ, ರೈತರು, ಮಹಿಳೆಯರು, ಯುವಕರು, ಕಾರ್ಮಿಕರು ಸೇರಿ ಸಮಾಜದ ಎಲ್ಲ ವರ್ಗಗಳು ಈ 40 ಪರ್ಸೆಂಟ್ ಸರಕಾರದ ದುರಾಡಳಿತಕ್ಕೆ ಬಲಿಯಾಗಿವೆ. ಬಿಜೆಪಿ ರಾಷ್ಟ್ರೀಯ ನಾಯಕರು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪ್ರವಾಸ ಮಾಡುತ್ತಿದ್ದು, ಉಳಿದ ನಾಲ್ಕು ದಿನಗಳಲ್ಲಿ ಸರಕಾರದ ಭ್ರಷ್ಟಾಚಾರದ ಬಗ್ಗೆ ಉತ್ತರ ನೀಡಬೇಕೆಂದು ಆಗ್ರಹಿಸಿದರು.
Related Articles
Advertisement